ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಾಗಿ ವಾಹನಗಳಿಗೆ ಪರ್ಯಾಯ ಮಾರ್ಗ ಒದಗಿಸಲಾಗಿದೆ. ಆದರೂ, ಕೆಲವು ಸಾರಿಗೆ ಬಸ್‌ಗಳು ಪಟ್ಟಣದ ಕೆಲವು ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ-ಪ್ರವೀಣ್‌ಶೆಟ್ಟಿ ಬಣ) ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಸಾರಿಗೆ ಘಟಕದ ಅಧಿಕಾರಿಗೆ ಕರವೇ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಲಿಂಗಸುಗೂರಿನಲ್ಲಿ ಕಲಬುರಗಿ–ಬೆಂಗಳೂರು ಬೈಪಾಸ್ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ವಾಹನ ಸಂಚಾರಕ್ಕೆ ಬಸವಸಾಗರ ವೃತ್ತದಿಂದ ವಿಸಿಬಿ ಕಾಲೇಜು ಮತ್ತು ರಾಯಚೂರು ರಸ್ತೆ ಮಾರ್ಗದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೂ, ಕೆಲವು ಸಾರಿಗೆ ಬಸ್‌ಗಳ ಚಾಲಕರು ಆ ರಸ್ತೆಗಳನ್ನು ಬಳಸದೆ, ಪಟ್ಟಣದ ಗಡಿಯಾರ ವೃತ್ತದ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಅನಗತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಗಡಿಯಾರ ವೃತ್ತದ ರಸ್ತೆ ಕಿರಿದಾಗಿದ್ದು, ಹೆಚ್ಚು ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಿಲ್ಲ. ಆದರೂ, ಸಾರಿಗೆ ಬಸ್‌ಗಳು ಅನಗತ್ಯವಾಗಿ ಆ ರಸ್ತೆಯನ್ನು ಬಳಸುತ್ತಿದ್ದಾರೆ. ಹೀಗಾಗಿ, ಅಗತ್ಯವಾಗಿ ಆ ರಸ್ತೆ ಬಳಸುವ ವಾಹನ ಸವಾರರಿಗೆ, ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಸಮಸ್ಯೆಯಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
“ಸಾರಿಗೆ ಬಸ್‌ಗಳಿಗೆ ಸೂಚಿಸಲಾಗಿರುವ ರಸ್ತೆಯನ್ನೇ ಬಳಸುವಂತೆ ನಿರ್ದೇಶಿಸೇಕು. ಗುಡಿಯಾದ ವೃತ್ತದ ರಸ್ತೆಯನ್ನು ಬಳಸದಂತೆ ತಡೆಯಬೇಕು. ಒಂದು ವೇಳೆ, ಮತ್ತೆ ಅದೇ ರಸ್ತೆಯಲ್ಲಿ ಸಂಚರಿಸಿ ಅಪಘಾತ ಅಥವಾ ಇನ್ನಿತರೆ ಸಮಸ್ಯೆಗಳು ಸಂಭವಿಸಿದಲ್ಲಿ, ಅದಕ್ಕೆ ಸಾರಿಗೆ ಇಲಾಖೆಯೇ ಹೊಣೆಯಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯ ಪತ್ರ ಸಲ್ಲಿಸುವ ವೇಳೆ, ಆಂಜನೇಯ ಭಂಡಾರಿ, ಸಲಿಂಖಾನ್, ಸಿದ್ಧು ಚಲುವಾದಿ, ಕುರುಮೇಶ ನಾಯಕ, ಭೀಮೇಶ ನಾಯಕ, ಮುತ್ತಣ್ಣ, ವೆಂಕಟೇಶ ಉಪ್ಪಾರ ಇದ್ದರು.