- ಕೌಟುಂಬಿಕ ಕಲಹ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ: ಯಜಮಾನ ನೂರ್ ಮೊಹಮ್ಮದ್ ಸ್ಪಷ್ಟನೆ
- ಆರೋಪಿಯಿಂದ ಚಾಕು ಇರಿತಕ್ಕೊಳಗಾಗಿದ್ದ ಗಾಯಾಳು ಮಹಿಳೆ ಆಸ್ಪತ್ರೆಯಿಂದ ‘ಡಿಸ್ಚಾರ್ಜ್’
ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ವಿದೇಶದಿಂದ ಊರಿಗೆ ಬಂದಿರುವ ಕುಟುಂಬದ ಯಜಮಾನನೊಂದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದ್ದಾರೆ.
ಕಳೆದ ಭಾನುವಾರ(ನ.12) ಉಡುಪಿ ಸಮೀಪದ ನೇಜಾರು ಬಳಿಯ ತೃಪ್ತಿ ಲೇಜೌಟ್‌ನಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಯೋರ್ವ ತಾಯಿ ಹಾಗೂ ಮೂವರು ಮಕ್ಕಳನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಿ, ಪರಾರಿಯಾಗಿದ್ದ. ಈ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಘಟನೆಯಲ್ಲಿ ಮನೆಯ ಯಜಮಾನಿ ಹಸೀನಾ ಹಾಗೂ ಅವರ ಮಕ್ಕಳಾದ ಅವರ ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಅಸೀಮ್ (14) ಕೊಲೆಯಾದವರು. ಅವರ ಅತ್ತೆ ಹಾಜಿರಾ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಹಸೀನಾರ ಪತಿ ನೂರ್ ಅವರೊಂದಿಗೆ ಗೃಹ ಸಚಿವ ಪರಮೇಶ್ವರ್, ಲಕ್ಷ್ಮಿ ಹೆಬ್ಬಾಳ್ಕರ್ ಕರೆ ಮಾಡಿ ಮಾತುಕತೆ ನಡೆಸಿದರು.
‘ತನಿಖೆ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಜಿ.ಎ ಬಾವ, ಪ್ರಸಾದ್ ಕಾಂಚನ್, ರಮೇಶ್ ಕಾಂಚನ್ ಉಪಸ್ಥಿತರಿದ್ದರು.
ಕೌಟುಂಬಿಕ ಕಲಹ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ: ನೂರ್ ಮೊಹಮ್ಮದ್ ಸ್ಪಷ್ಟನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕೌಟುಂಬಿಕ ಕಲಹದಿಂದ ಹತ್ಯೆ’ ಎಂದು ಸುದ್ದಿಗಳು ಪ್ರಸಾರವಾಗುತ್ತಿದೆ. ಕೌಟುಂಬಿಕ ಕಲಹ ಎಂಬುದರಲ್ಲಿ ಸತ್ಯಾಂಶ ಇಲ್ಲ ಎಂದು ಕುಟುಂಬದ ಯಜಮಾನ ನೂರ್ ಮೊಹಮ್ಮದ್ ಸ್ಪಷ್ಟನೆ ನೀಡಿದ್ದಾರೆ.
‘ನಮಗೆ ಮದುವೆಯಾಗಿ 30 ವರ್ಷ ಆಯ್ತು. 15 ವರ್ಷ ನಾವು ವಿದೇಶದಲ್ಲಿ ಇದ್ದೆವು. ಮುಂದಿನ 15 ದಿನದಲ್ಲಿ ಕುಟುಂಬ ವಿದೇಶಕ್ಕೆ ಬರಬೇಕಿತ್ತು. ಮುಂದಿನ ವರ್ಷ ಮಗನಿಗೆ ಮದುವೆ ಮಾಡುವ ಮಾತುಕತೆ ನಡೆದಿತ್ತು ಎಂದ ಅವರು, ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಿ. ಆಗ ನಮಗೆ ತೃಪ್ತಿಯಾಗುತ್ತದೆ’ ಎಂದು ಹೇಳಿದರು.
‘ಈ ಕೃತ್ಯದ ಬಗ್ಗೆ ಪೊಲೀಸರು ಬೇಗ ತನಿಖೆ ಮಾಡಿ ಅಪರಾಧಿಯನ್ನು ಬಂಧಿಸಿದರೆ ಭಯದ ವಾತಾವರಣ ದೂರವಾಗುತ್ತದೆ. ಆರೋಪಿಯನ್ನು ಬಂಧಿಸುವವರೆಗೆ ನಮಗೆ ಹೊರಗೆ ಓಡಾಡುವದಕ್ಕೂ ಭಯವಾಗುತ್ತಿದೆ. ನಮ್ಮ ಹಿಂದೆ ಯಾರಿದ್ದಾರೆ ನಮಗೆ ಗೊತ್ತಿಲ್ಲ. ನಮ್ಮ ಸುತ್ತಮುತ್ತ ಯಾರು ಓಡಾಡುತ್ತಿದ್ದಾರೆ ನಮಗೆ ಗೊತ್ತಿಲ್ಲ. ಮಗನಿಗೆ ಎಲ್ಲಿಗೂ ಓಡಾಡಬೇಡ’ ಎಂದು ಹೇಳಿದ್ದೇನೆ ಎಂದು ಹೇಳಿದರು.
ನನ್ನ ಖಾಸಗಿ ಜೀವನದಲ್ಲಿ ಏನೇ ನಷ್ಟ ಆದರೂ ಅದನ್ನು ಸಾರ್ವಜನಿಕವಾಗಿ ಹೇಳಲು ಇಚ್ಛಿಸುವುದಿಲ್ಲ. ಪೊಲೀಸರ ತನಿಖೆಗೆ ನಾನು ಸಂಪೂರ್ಣ ಸಹಕಾರ ಕೊಡುತ್ತೇನೆ. ತನಿಖಾಧಿಕಾರಿಗಳು ನಮಗೆ ಸಂಪೂರ್ಣ ಭರವಸೆ ಕೊಟ್ಟಿದ್ದಾರೆ. ಕುಟುಂಬದ ಬಳಿ ಇರುವ ಎಲ್ಲ ಮಾಹಿತಿಗಳನ್ನು ಹಂಚಿಕೊಂಡಿದ್ದೇವೆ. ನಾಲ್ಕು ಫೋನ್‌ಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ನನ್ನ ಮತ್ತು ಮಗನ ಫೋನನ್ನು ಪೊಲೀಸರು ತಪಾಸಣೆ ಮಾಡಿ ವಾಪಸ್ ಕೊಟ್ಟಿದ್ದಾರೆ ಎಂದು ನೂರ್ ಮೊಹಮ್ಮದ್ ತಿಳಿಸಿದ್ದಾರೆ.
ಫೋನ್‌ಗಳಲ್ಲಿ ಕೆಲವು ಮಾಹಿತಿಗಳು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ಜಾತಿ ಧರ್ಮದವರು ಬಂದು ನನಗೆ ಧೈರ್ಯ ತುಂಬುತ್ತಿದ್ದಾರೆ. ಪೊಲೀಸರು ಕರೆದರೆ ನಾನು 24 ಗಂಟೆಯೂ ಮಾಹಿತಿ ಕೊಡಲು ಸಿದ್ಧ ಎಂದು ಉಡುಪಿಯ ನೇಜಾರಿನಲ್ಲಿ ಮನೆಯ ಜಯಮಾನ ಹೇಳಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕುಟುಂಬಸ್ಥರು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಲು ವಿನಂತಿಸಿದ್ದಾರೆ. ಸಂತ್ರಸ್ತ ಕುಟುಂಬದ ಸದಸ್ಯರು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು. ಕೊಲೆಯಾದ ಮನೆಯ ಬಳಿಕ ನೀರವ ಮೌನ ಕಂಡು ಬಂದಿದೆ.
ಆರೋಪಿಯಿಂದ ಚಾಕು ಇರಿತಕ್ಕೊಳಗಾಗಿದ್ದ ಗಾಯಾಳು ಮಹಿಳೆ ಆಸ್ಪತ್ರೆಯಿಂದ ‘ಡಿಸ್ಚಾರ್ಜ್’
ಘಟನೆಯಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಮಹಿಳೆ ಮಣಿಪಾಲ ಕೆ.ಎಂಸಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ.
ಮನೆಯ ಯಜಮಾನ ನೂರ್ ಮೊಹಮ್ಮದ್ ಅವರ ಚಿಕ್ಕಮ್ಮ ಹಾಜಿರಾ, ಆರೋಪಿಯಿಂದ ಚಾಕು ಇರಿತಕ್ಕೊಳಗಾಗಿದ್ದರು. ತನ್ನನ್ನು ರಕ್ಷಿಸಿಕೊಳ್ಳಲು ಶೌಚಾಲಯದೊಳಗಡೆ ತೆರಳಿ, ಬಾಗಿಲು ಹಾಕಿಕೊಂಡಿದ್ದರು. ಘಟನೆಯಲ್ಲಿ ಆರೋಪಿಯು ಹಾಜಿರಾ ಅವರ ದೇಹದ ಎರಡು ಕಡೆ ಚಾಕು ಇರಿದಿದ್ದನು. ಶಸ್ತ್ರಚಿಕಿತ್ಸೆ ಮಾಡಿರುವ ಕೆಎಂಸಿ ವೈದ್ಯರು, ಚಿಕಿತ್ಸೆ ನೀಡಿದ ಬಳಿಕ ಡಿಸ್ಚಾರ್ಜ್ ಮಾಡಿದ್ದು, ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ.
ವಿಡಿಯೋ ಕೃಪೆ: SANMARGA NEWS