ಸಮಾಜದಲ್ಲಿ ಪ್ರಾಮಾಣಿಕತೆ, ಕಾಯಕತತ್ವ ಹಾಗೂ ನಿಷ್ಠೆಯಿಂದ ಸೇವೆಗೈಯುವರಿಗೆ ಜನರು ಪ್ರೇರಣೆ ನೀಡುವುದು ಅವಶ್ಯಕತೆಯಿದೆ ಎಂದು ಜೆಸ್ಕಾಂ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ ಘಾಳೆ ನುಡಿದರು.
ಬೀದರ್ ನಗರದ ಡಾ.ಚನ್ನಬಸವಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ನಡೆದ 157ನೇಯ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬವಸಲಿಂಗಪಟ್ಟದ್ದೇವರು ಈ ಭಾಗದಲ್ಲಿ ಸಂಸ್ಕಾರಯುತ ಶಿಕ್ಷಣ ಕೊಡುವ ಜೊತೆಗೆ ಮಾನವೀಯ ಮೌಲ್ಯದ ಶಾಲಾ ಕಾಲೇಜು ಪ್ರಾರಂಬಿಸಿದ್ದು ಪ್ರಶಂಸನೀಯವಾಗಿದೆ. ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಬಸವಾದಿ ಶರಣರ ಮೌಲ್ಯದಾಯಕ ಸಿದ್ಧಾಂತ, ಕಾಯಕ, ದಾಸೋಹ, ಏಕದೇವೋಪಾಸನೆಗಳು ಮಾನವನ ಜೀವನದಲ್ಲಿ ಸುಖ, ಶಾಂತಿ ಸಮೃದ್ಧಿಯನ್ನು ನೀಡುತ್ತದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ ಮಹಾಲಿಂಗ ಸ್ವಾಮಿಜಿಗಳು ಆಶೀರ್ವಚನ ನೀಡಿ, “ಮಾನವನ ಮನಸ್ಸು ಬೆಳಗಬೇಕಾದರೆ ಅವನಲ್ಲಿರುವ ಅಜ್ಞಾನ, ಅಂಧಕಾರ ಅರಿಷಡ್ವರ್ಗಗಳನ್ನು ಸುಟ್ಟು ಹಾಕಬೇಕಾಗುತ್ತದೆ. 12ನೇ ಶತಮಾನದ 770 ಅಮರಗಣಂಗಳು ಮನದ ಮಲೀನತೆಯನ್ನು ಅಳಿಸಿ ಜ್ಞಾನದ ಜ್ಯೋತಿ ಬೆಳಗುವಲ್ಲಿ ಸತ್ಸಂಗ ಅನುಭಾವದ ಚಿಂತನೆಯನ್ನು ನಡೆಸಿ ನಿರಂತರವಾಗಿ ಇಷ್ಟಲಿಂಗ ಶಿವಯೋಗದಲ್ಲಿ ತೊಡಗಿಸಿಕೊಂಡಿದ್ದರು. ಪ್ರಯುಕ್ತ ಕಲ್ಯಾಣ ಭೂಮಿ ಪವಿತ್ರ ಭೂಮಿಯಾಗಿದೆ” ಎಂದರು.
ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಅವರು ಕರ್ನಾಟಕ ರಾಜ್ಯೋತ್ಸವ ಕುರಿತು ಮಾತನಾಡಿ,”ಜಗತ್ತಿನ ಇತಿಹಾಸದಲ್ಲಿ ಭಾರತೀಯ ಸಂಸ್ಕೃತಿ ಪರಂಪರೆ, ಸಂಸ್ಕಾರ ಶ್ರೇಷ್ಠವಾದದ್ದು. ಕನ್ನಡ ಭಾಷೆಯು ಶರಣ ಸಂಸ್ಕೃತಿಯಿಂದ ಕೂಡಿದ್ದು, ವಚನ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಶ್ರೀಮಂತ ಸಾಹಿತ್ಯವಾಗಿದೆ. ಬಸವಾದಿ ಶರಣರು ನುಡಿದು ನಡೆದು ತೋರಿಸಿದ ತತ್ವವಾಗಿದೆ, ಕನ್ನಡ ಭಾಷೆಯು ಸುಲಿದ ಬಾಳೆಯಂತಿದೆ. ಕನ್ನಡ ಭೂಮಿ ಪವಿತ್ರ ನದಿ ಋಷಿ, ಮುನಿ, ಸಂತ, ಶರಣರ ನಡೆದಾಡಿದ ಪುಣ್ಯ ಭೂಮಿಯಾಗಿದೆ” ಎಂದು ನುಡಿದರು.
ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಸುವರ್ಣಾ ಚಿಮಕೋಡೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ಮಾಣಿಕೇಶ್ವರಿ ಗುರುವಿನ ಮಹತ್ವದ ಬಗ್ಗೆ ಮತ್ತು ಸ್ನೇಹಾ ದಿಗಂಬರ ಪಂಚಾಚಾರ ಕುರಿತು ಮಾತನಾಡಿದರು.
ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ. ಎಸ್. ಬಿ. ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನಾಗಶೆಟ್ಟಿ ಜೊತೆಪ್ಪನೋರ, ದಾಸೋಹಿಗಳಾದ ಸನೀತಾ ಗುಂಡಪ್ಪ ಮತ್ತು ಅಂಬಿಕಾ ಸಂಜುಕುಮಾರ ಮಡಿವಾಳರು ಬಸವಗುರುವಿನ ಪೂಜೆ ನೆರವೇರಿಸಿದರು.
ಈ ಸುದ್ದಿ ಓದಿದ್ದೀರಾ? ʼಈ ದಿನʼ ವಿಶೇಷ | ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ…
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಗ್ರಾಮಪ್ಪ ಬಿರಾದಾರ ಗುರುನಾಥ ಬಿರಾದಾರ, ಭೀಮಾಶಂಕರ, ದಶಪ್ಪ, ಶ್ರೀಕಾಂತ ಸ್ವಾಮಿ, ಡಾ. ವೈಜಿನಾಥ ಬಿರಾದಾರ, ಸಂಜೀವಕುಮಾರ ಅತಿವಾಳೆ, ಮಲ್ಲಿಕಾರ್ಜುನ, ಯೋಗೇಂದ್ರ ಯದಲಾಪುರೆ, ಮೀನಾಕ್ಷಿ ಪಾಟೀಲ, ಲಕ್ಷಿö್ಮ ಬಿರಾದಾರ, ಲಕ್ಷಿö್ಮಬಾಯಿ ಮಾಳಗೆ, ಮಾಲಾಶ್ರೀ, ಭಾರತಿ ಪಾಟೀಲ, ಸವಿತಾ ಗಂಧಿಗುಡೆ, ಮಹಾನಂದಾ ಸ್ವಾಮಿ, ಕಸ್ತೂರಿಬಾಯಿ ಬಿರಾದಾರ, ಮಹಾದೇವಿ ಬಿರಾದಾರ, ಮುಂತಾದವರು ಭಾಗವಹಿಸಿದರು. ವಚನಶ್ರೀ ಚನ್ನಬಸಪ್ಪ ನೌಬಾದೆ ಮತ್ತು ಚನ್ನಬಸಪ್ಪ ಬಿಕ್ಲೆ ವಚನ ಸಂಗೀತ ನಡೆಸಿಕೊಟ್ಟರು. ಸಂಗ್ರಾಮ ಎಂಗಳೆ ಸ್ವಾಗತಿಸಿದರು, ಉಮಾಕಾಂತ ಮೀಸೆ ನಿರೂಪಿಸಿದರು, ಪ್ರೇಮಾ ಮುಚಳಂಬೆ ವಂದಿಸಿದರು.