ಕರ್ನಾಟಕ 50ರ ಸಂಭ್ರಮದ ಅಂಗವಾಗಿ ಮೆಣಸಗಿ ಹಾಗೂ ಹೊಳೆಮಣ್ಣೂರು ಗ್ರಾಮ ಪಂಚಾಯತಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಗಾಳಿಪಟ ತಯಾರಿಸುವ ಹಾಗೂ ಹಾರಿಸುವ ಸ್ಪರ್ಧೆಯನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ 500 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಸ್ವತಃ ಗಾಳಿಪಟ ತಯಾರಿಸಿ, ಹಾರಿಸಿ ಸಂಭ್ರಮಿಸಿದ್ದಾರೆ.
ಈ ಎರಡೂ ಗ್ರಾಮ ಪಂಚಾಯತ್‌ನ ಗ್ರಂಥಾಲಯ ಮೇಲ್ವಿಚಾರಕರು, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು, ಗ್ರಾಮ ಪಂಚಾಯತಿ ಸಿಬ್ಬಂದಿ ಕೆಂಪು ಮತ್ತು ಹಳದಿ ಬಣ್ಣದ ಹಾಳೆಗಳನ್ನು ಪೂರೈಸಿ, ಮಕ್ಕಳಿಗೆ ಗಾಳಿಪಟ ತಯಾರಿಸುವ ಕುರಿತು ತರಬೇತಿ ನೀಡಿದರು.
ಮಕ್ಕಳು ತಮ್ಮ ಸುತ್ತಮುತ್ತ ಸಿಕ್ಕ ಬಿದಿರು ಹಾಗೂ ತೆಂಗಿನ ಗರಿಗಳ ಕಡ್ಡಿಗಳಿಂದ ಗಾಳಿಪಟಗಳನ್ನು ತಯಾರಿಸಿ, ಸೂತ್ರ ಜೋಡಿಸಿ, ಬಾಲಂಗೋಚಿ ಕಟ್ಟಿ, ಒಬ್ಬರಿಗಿಂತ ಒಬ್ಬರು ಅಂದವಾದ ಗಾಳಿಪಟ ತಯಾರಿಸಿದ್ದರು. ಮಕ್ಕಳು ಗಾಳಿಪಟ ತಯಾರಿಸಿ ಹಾರಿಸುತ್ತಿರುವುದನ್ನು ಕಂಡು ಪೋಷಕರೂ ಸಹ ಮಕ್ಕಳಿಗೆ ಗಾಳಿಪಟ ತಯಾರಿಸುವಲ್ಲಿ ನೆರವಾದರು.
ಶಾಲೆಗಳ ಮುಖ್ಯೋಪಾಧ್ಯಾಯರ ಉತ್ತಮವಾಗಿ ಗಾಳಿಪಟ ತಯಾರಿಸಿ, ಹಾರಿಸಿದ ವಿದ್ಯಾರ್ಥಿಗಳ ಪೈಕಿ ತರಗತಿವಾರು ಪ್ರಥಮ, ದ್ವಿತೀಯ ಹಾಗೂ ಸಮಾಧಾನಕರ ಬಹುಮಾನಕ್ಕೆ ಮಕ್ಕಳ ಹೆಸರು ಅಂತಿಮಗೊಳಿಸಿದರು.
ಹೊಳೆ ಮಣ್ಣೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿರುವ ಸುಜಾತ ಮಠಪತಿ, ಗ್ರಾಮೀಣ ಕ್ರೀಡೆಗಳು ಮಹತ್ವ ಕಳೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ, ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಕ್ಕಳಿಗೆ ಗಾಳಿಪಟ ತಯಾರಿಸುವ ತರಬೇತಿ ನೀಡಿ ಅಗತ್ಯ ಪರಿಕರಗಳನ್ನು ಒದಗಿಸುವ ಮೂಲಕ ಮಕ್ಕಳು ವಿನೂತನವಾಗಿ ಯೋಚಿಸುವಂತೆ, ಸಂಭ್ರಮಿಸುವಂತೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.
ಕರ್ನಾಟಕ 50ರ ಸಂಭ್ರಮದ ನಿಮಿತ್ಯ ನಮ್ಮ ಶಾಲೆಯ ಮಕ್ಕಳು ಗಾಳಿಪಟ ತಯಾರಿಸಿ ಹಾರಿಸಿ ಸಂಭ್ರಮಿಸುತ್ತಿರುವುದು ನಮಗೆ ಖುಷಿ ತಂದಿದೆ ಎಂದು ಮೆಣಸಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಈಶ್ವರಪ್ಪ ಮುದೇನೂರು ಅಭಿಪ್ರಾಯ ಹಂಚಿಕೊಂಡರು.