ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬುಧವಾರ ಮಧ್ಯಾಹ್ನ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಕೆಳಗಡೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ತಾಲೂಕಿನ ಯಲಕ್ಕೂರು ಗ್ರಾಮದ ರಂಗಸ್ವಾಮಿ (34) ಎಂದು ತಿಳಿದುಬಂದಿದೆ.
ಮಧ್ಯಾಹ್ನ 12.20ಕ್ಕೆ ಈ ಘಟನೆ ನಡೆದಿದ್ದು, ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಬಸ್, ನಿಲ್ದಾಣದಿಂದ ಡೀವಿಯೇಷನ್ ರಸ್ತೆಗೆ ಬಂದು 100 ಮೀಟರ್ ಮುಂದಕ್ಕೆ ಹೋದಾಗ (ಮಯೂರ ಹೋಟೆಲ್ ಎದುರು) ರಸ್ತೆ ಬದಿಯಲ್ಲಿ ನಿಂತಿದ್ದ ರಂಗಸ್ವಾಮಿ ಎಂಬಾತ ಏಕಾಏಕಿ ಹಿಂಬದಿ ಚಕ್ರದ ಬಳಿ ಹಾರಿದ್ದಾರೆ. ಚಕ್ರವು ರಂಗಸ್ವಾಮಿಯವರ ಮೇಲೆ ಹರಿದಿದೆ.
ತೀವ್ರವಾಗಿ ಗಾಯಗೊಂಡಿದ್ದ ರಂಗಸ್ವಾಮಿಯವರನ್ನು ಕೂಡಲೇ ಆಂಬುಲೆನ್ಸ್‌ನಲ್ಲಿ ಸಿಮ್ಸ್ ಬೋಧನಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬಸ್ ನಿರ್ವಾಹಕ ನೀಡಿದ ದೂರಿನ ಮೇರೆಗೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ ಪ್ರಕರಣ | ಆರೋಪಿ ಪ್ರವೀಣ್ ಚೌಗಲೆಯನ್ನು 14 ದಿನ ಪೊಲೀಸ್ ಕಸ್ಟಡಿಗೊಪ್ಪಿಸಿದ ನ್ಯಾಯಾಲಯ
“ಮೇಲ್ನೋಟಕ್ಕೆ ಆತ್ಮಹತ್ಯೆಯ ರೀತಿ ಕಂಡುಬಂದಿದೆ. ವ್ಯಕ್ತಿ ಬಸ್ ಕೆಳಗಡೆ ಹಾರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ರಾಜೇಶ್ ತಿಳಿಸಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದ ರಂಗಸ್ವಾಮಿ ಮನನೊಂದಿದ್ದರು ಎನ್ನಲಾಗಿದೆ.