ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರು ಮತ್ತು ಬೈಕ್‌ಗಳನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ರಾಜಗೋಪಾಲನಗರ ಠಾಣಾ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಗಳು ಏರಿಯಾದಲ್ಲಿ ಹವಾ ಇಡಲು, ಕಂಠಪೂರ್ತಿ ಕುಡಿದು ಬೈಕ್ಗಳಲ್ಲಿ ಬಂದು ಮನಬಂದಂತೆ ರಾಡ್ ಮತ್ತು ಲಾಂಗ್ಗಳಿಂದ 15 ಕಾರು ಹಾಗೂ ಬೈಕ್ಗಳ ಗ್ಲಾಸ್ ಪುಡಿ ಪುಡಿ ಮಾಡಿ ಪರಾರಿಯಾಗಿದ್ದರು.
ಏನಿದು ಘಟನೆ?
ಬೆಂಗಳೂರಿನ ಲಗ್ಗೆರೆಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ 15 ಕಾರು ಮತ್ತು ಬೈಕ್‌ಗಳನ್ನು ದೊಣ್ಣೆ, ಲಾಂಗುಗಳಿಂದ ಕಾರಿನ ಗಾಜು ಪುಡಿ ಪುಡಿ ಮಾಡಿ ಹಾನಿ ಮಾಡಿದ್ದರು.
ಮುಖಕ್ಕೆ ಗೂಬೆ ಮುಖದ ಮಾಸ್ಕ್ ಧರಿಸಿದ್ದ ಪುಂಡರ ಗುಂಪು ಈ ಕೃತ್ಯ ಎಸಗಿತ್ತು. ಲಗ್ಗೆರೆಯ ರಾಜೀವ್ ಗಾಂಧಿನಗರದಲ್ಲಿ ನವೆಂಬರ್ 10 ರಂದು (ಶುಕ್ರವಾರ) ಬೆಳಗಿನ ಜಾವ 3 ಗಂಟೆಗೆ ಈ ಘಟನೆ ನಡೆದಿದೆ. ಪುಂಡರ ಅಟ್ಟಹಾಸಕ್ಕೆ 15 ಕಾರು, ಬೈಕ್, ಆಟೋರಿಕ್ಷಾ ಸೇರಿ 17 ವಾಹನಗಳು ಜಖಂಗೊಂಡಿದ್ದವು.
ಪುಂಡರ ಗುಂಪೊಂದು ಮಾರಕಾಸ್ತ್ರ ಹಿಡಿದು ರಾಜೀವ್ ಗಾಂಧಿ ನಗರಕ್ಕೆ ಬಂದಿದ್ದು, ಈ ವೇಳೆ ರಸ್ತೆಗೆ ಹೊಂದಿಕೊಂಡಂತೆ ಮನೆಗಳ ಬಳಿ ನಿಲುಗಡೆ ಮಾಡಿದ್ದ ಕಾರುಗಳು ಹಾಗೂ ಆಟೋ ರಿಕ್ಷಾಗಳ ಮೇಲೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಅದರಿಂದ ವಾಹನಗಳ ಗಾಜುಗಳು ಪುಡಿಯಾಗಿ ವಾಹನಗಳಿಗೆ ಹಾನಿಯಾಗಿದೆ.
ಈ ಸುದ್ದಿ ಓದಿದ್ದೀರಾ? ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಪೋಸ್ಟರ್ ಪ್ರಕರಣ: ಮೂವರ ವಿರುದ್ಧ ಎಫ್‌ಐಆರ್ ದಾಖಲು
ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗಿದೆ. ದುಷ್ಕರ್ಮಿಗಳು ಮುಖಕ್ಕೆ ಗೂಬೆ ಮುಖದ ಮಾಸ್ಕ್ ಧರಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.
ಸ್ಥಳಕ್ಕೆ ಶಾಸಕ ಮುನಿರತ್ನ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಸ್ಥಳಕ್ಕೆ ರಾಜಗೋಪಾಲನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.