ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದ್ದು, ಕಳೆದ 15 ದಿನಗಳಲ್ಲಿ ಪೊಲೀಸರು 29 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 42 ಮಂದಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತರಾಗಿರುವ ರೇಣುಕಾ ಸುಕುಮಾರ, ಕಳೆದ ಹದಿನೈದು ದಿನದಲ್ಲಿ ಹು-ಧಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ಪ್ರಕರಣ ಸಂಬಂಧ 29 ಕೇಸ್ ದಾಖಲಿಸಿ 42 ಜನರನ್ನು ಬಂಧಿಸಿದ್ದೇವೆ. ಇದೀಗ, ಭಾರತ ಫೈನಲ್ ತಲುಪಿದೆ. ಹೀಗಾಗಿ, ನಾವು ಮತ್ತಷ್ಟು ಎಚ್ಚರ ವಹಿಸಬೇಕಾಗಿದೆ ಎಂದರು.
ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಹೆಚ್ಚಿನ ನಿಗಾವಹಿಸಲಾಗಿದೆ. ಸೈಬರ್ ಸಹಾಯದಿಂದ ಪೊಲೀಸರು ಆ್ಯಪ್ಗಳ ಮೇಲೆ ನಿಗಾ ಇಟ್ಟಿದ್ದಾರೆ. ಬೆಟ್ಟಿಂಗ್ ನಡೆಯುವಲ್ಲಿ ಹೋಗಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆ ಜೂಜಾಡುತ್ತಿದ್ದ 731 ಮಂದಿಯನ್ನು ಬಂಧಿಸುವ ಮೂಲಕ ಪೊಲೀಸರು ಜೂಜುಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಬಂಧಿತರಿಂದ 12 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸರು ಹದಿನೈದು ದಿನಗಳಲ್ಲಿ ಒಟ್ಟು 117 ಗ್ಯಾಂಬ್ಲಿಂಗ್ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ರೇಣುಕಾ ಸುಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.