ಬ್ಯಾಂಕ್‌ಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿಗಳ ನೇಮಕಾತಿ, ಎಲ್ಲ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು-ಅನುಷ್ಠಾನಗೊಳಿಸಲು ಒತ್ತಾಯಿಸಿ ಹಾಗೂ ಬ್ಯಾಂಕಿನ ಖಾಯಂ ಉದ್ಯೋಗಗಳ ನೇಮಕಾತಿಗೆ ಹೊರಗುತ್ತಿಗೆ ನೀಡುವುದನ್ನು ವಿರೋಧಿಸಿ ದೇಶದಾದ್ಯಂತ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರತಿಭಟನಾ ಮತ ಪ್ರದರ್ಶನಕ್ಕೆ ಕರೆ ನೀಡಿತ್ತು.
ಇದರ ಅಂಗವಾಗಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ನೇತೃತ್ವದಲ್ಲಿ ನ.16 ಬ್ಯಾಂಕ್ ಉದ್ಯೋಗಿಗಳು ನಗರದ ಪಿ.ಬಿ.ರಸ್ತೆಯ ಕರ್ಣಾಟಕ ಬ್ಯಾಂಕಿನ ಮುಂಭಾಗ ಶಕ್ತಿ ಪ್ರದರ್ಶನ ನಡೆಸಿದರು.
ಸಿಬ್ಬಂದಿಗಳ ನೇಮಕಾತಿ ಮಾಡುವುದರ ಮೂಲಕ ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆ ಸಿಗುವಂತೆ ಮಾಡಬೇಕು ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕು. ಸಿಬ್ಬಂದಿಗಳ ಕೊರತೆಯಿಂದ ಗ್ರಾಹಕರಿಗೆ ಸಮರ್ಪಕ ಸೇವೆ ಸಿಗದಿದ್ದಲ್ಲಿ ಅವರು ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳತ್ತ ಮುಖ ಮಾಡುವ ಸಾಧ್ಯತೆಯಿದೆ.
ಹಾಗಾದಲ್ಲಿ ಗ್ರಾಹಕರ ಠೇವಣಿ ಹಣದ ಭದ್ರತೆಗೆ ಅಪಾಯ ಆಗುವುದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಾಳುಗೆಡವಿದಂತಾಗುವುದು ಎಂದು ಪ್ರತಿಭಟನಾಕಾರರು ಸರಕಾರವನ್ನು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಕೆ.ವಿಶ್ವನಾಥ ಬಿಲ್ಲವ, ಹೆಚ್.ಎಸ್.ತಿಪ್ಪೇಸ್ವಾಮಿ, ಆರ್.ಆಂಜನೇಯ, ಎಂ.ಸತೀಶ್, ಎಂ.ಎಂ.ಸಿದ್ದಲಿಂಗಯ್ಯ, ಸುಮಂತ್ ಎಸ್ ಭಟ್, ಪರಶುರಾಮ, ಕೆ.ಶಶಿಶೇಖರ್, ಶ್ರೀನಿವಾಸ್ ನಾಡಿಗ್, ಕಿರಣ್ ಜಿ ಎಸ್, ನಾಗಭೂಷಣ್ ಎನ್ ಪಿ, ಸುಜಾತಾ ರೆಡ್ಡಿ, ಉಷಾ, ಅನುಷಾ, ಶಿಲ್ಪ ಎಚ್, ಗಂಗು ಸತ್ಯಾನಂದ, ಅಮೃತಾ, ಸುಷ್ಮಾ ದೇಸಾಯಿ, ಅಶ್ವಿನಿ, ಸುನಂದಮ್ಮ, ಮತ್ತಿತರರು ಭಾಗವಹಿಸಿದ್ದರು.