ವಂಚಿತ, ಅಂಚಿನ ಮತ್ತು ಸೂಕ್ಷ್ಮ ಜಾತಿಗಳು ಎಷ್ಟು ಹಿಂದುಳಿದಿದ್ದಾವೆ, ಎಷ್ಟರಮಟ್ಟಿಗೆ ಅಭಿವೃದ್ಧಿಯಿಂದ ವಂಚಿತವಾಗಿವೆ, ಅಸಮಾನತೆ ಎನ್ನುವುದು ಕುಗ್ಗುತ್ತಿದೆಯೋ ಅಥವಾ ಹಿಗ್ಗುತ್ತಿದೆಯೋ ಎಂಬ ಸತ್ಯ ಸದರಿ ಸಮೀಕ್ಷೆಯಿಂದ ಮಾತ್ರ ತಿಳಿಯಲು ಸಾಧ್ಯ. ತಮ್ಮ ಏಕಸ್ವಾಮ್ಯಕ್ಕೆ ಎಲ್ಲಿ ಕಂಟಕವಾಗುತ್ತದೊ ಎಂಬುದು ಈ ಬಲಾಢ್ಯ ಜಾತಿಗಳ ಲೆಕ್ಕಾಚಾರ.
ಜಾತಿಗಣತಿಯನ್ನು ಸಾಂಸ್ಕೃತಿಕ ಸಾಮ್ರಾಜ್ಯಶಾಹಿ ಯಾಜಮಾನ್ಯ ಜಾತಿಗಳು ವಿರೋಧಿಸುತ್ತಿದ್ದವು. ಅದರ ಪ್ರತಿನಿಧಿಯಾದ ದಿವಂಗತ ಡಾ. ಎಂ ರಾಮಜೋಯಿಸರು ಜಾತಿಗಣತಿಯ ವಿರುದ್ಧ ಮಾತನಾಡುತ್ತಿದ್ದರು. ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‍ಎಸ್ ಕೂಡ ಇದನ್ನು ವಿರೋಧಿಸುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಬಹುದು. ಇವರ ಏಕೀಕೃತ-ಏಕಾಕಾರ ಭಾರತೀಯ ಸಂಸ್ಕೃತಿಗೆ ಜಾತಿಗಣತಿಯು ಅಪಥ್ಯ.
ಪ್ರಧಾನಮಂತ್ರಿಗಳು ಇತ್ತೀಚೆಗೆ ಚುನಾವಣೆ ಸಭೆಯನ್ನುದ್ದೇಶಿಸಿ ಮಾತನಡುತ್ತಾ ಜಾತೀಯತೆ ಮತ್ತು ಪ್ರಾಂತೀಯತೆ ಗಳು ವಿಭಜನಾತ್ಮಕ ಮತ್ತು ವಿನಾಶಕಾರಿ ಎಂದು ಹೇಳಿದ್ದುದರ ಮೂಲದಲ್ಲಿದ್ದುದು ಕೂಡ ಇದೇ ಏಕಘನಶಿಲಾ ಸಂಸ್ಕೃತಿಯ ಪ್ರಣಾಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿಯೇ ಒಂದು ದೇಶ; ಒಂದು ಚುನಾವಣೆ, ಒಂದು ದೇಶ; ಒಂದು ಮಾರುಕಟ್ಟೆ, ಒಂದು ದೇಶ; ಒಂದು ಭಾಷೆ ಮುಂತಾದ ಇಂದಿನ ಆಳುವ ಪಕ್ಷದ ಪ್ರಣಾಳಿಕೆಗಳನ್ನು ಅರ್ಥ ಮಾಡಿಕೊಳ್ಳಬೇಕು.
ಕರ್ನಾಟಕ ರಾಜ್ಯದಲ್ಲಿ 2015ರಲ್ಲಿ ನಡೆದ ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ (ಇದನ್ನು ಜಾತಿಗಣತಿ ಎಂದು ಜನಪ್ರಿಯ ನೆಲೆಯಲ್ಲಿ ಕರೆಯಲಾಗುತ್ತಿದೆ) ವರದಿಯ ಪ್ರಕಟಣೆಗೆ ಇದೀಗ ರಾಜ್ಯದಲ್ಲಿನ ಎರಡು ಬಲಾಢ್ಯ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂದಿನ ಆಳುವ ಪಕ್ಷದಲ್ಲಿನ ಅನೇಕ ಲಿಂಗಾಯತ-ಒಕ್ಕಲಿಗ ಮಂತ್ರಿಗಳೂ ಸಹ ತಮ್ಮ ಜಾತಿಗಣತಿ ವರದಿಯ ಪ್ರಕಟಣೆಯ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆಯು ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದೆ. ಸಮೀಕ್ಷೆಯು ಸರಿಯಾಗಿ ನಡೆದಿಲ್ಲ, ಲಿಂಗಾಯತರ ಜನಸಂಖ್ಯೆಯ ಪ್ರಮಾಣವು ವರದಿಯಲ್ಲಿ ‘ಕಡಿಮೆ’ಯಿದೆ ಎಂಬುದು ಮಹಾಸಭೆಯ ಪ್ರಮುಖ ಆಕ್ಷೇಪ. ವರದಿಯ ಸಿದ್ಧತೆಯಲ್ಲಿ ಅಳವಡಿಸಿಕೊಂಡ ಸಾಂಖ್ಯಿಕ ವಿಧಾನದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದೇ ಬಗೆಯ ಆಕ್ಷೇಪವನ್ನು ಒಕ್ಕಲಿಗರ ಸ್ವಾಮಿಗಳು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಎರಡೂ ಜಾತಿಗಳಲ್ಲಿನ ಸಣ್ಣ-ಪುಟ್ಟ ಸಮುದಾಯಗಳು ಹಾಗೂ ಹಿಂದುಳಿದ ವರ್ಗಗಳು ಮತ್ತು ಪ. ಜಾ. ಹಾಗೂ ಪ. ಪಂ.ಗಳು ಜಾತಿಗಣತಿ ವರದಿಯ ಪ್ರಕಟಣೆಯನ್ನು ಒತ್ತಾಯಿಸುತ್ತಿವೆ.
ಒಂದು ಸಾಂಸ್ಕೃತಿಕ ಬ್ರಾಹ್ಮಣ್ಯಶಾಹಿಯಾದರೆ ಮತ್ತೊಂದು ಜಮೀನ್ದಾರಿಶಾಹಿಯಾಗಿದೆ. ಲಿಂಗಾಯತವನ್ನು ಪ್ರತನಿಧಿಸುವ ಸಂಘ-ಸಂಸ್ಥೆಗಳು, ರಾಜಕೀಯ ನಾಯಕರು, ವಿಶೇಷವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಯಾವತ್ತೂ ತಮ್ಮ ಸಮುದಾಯದಲ್ಲಿನ ಅಂಚಿನ-ವಂಚಿತ ಜಾತಿಗಳ ಬಗ್ಗೆ ಯೋಚಿಸಲಿಲ್ಲ. ಲಿಂಗಾಯತರಿಗೆ ಮೀಸಲಾತಿಯನ್ನು ಇವರು ಕೇಳುತ್ತಾರೆ. ಆದರೆ ತಮ್ಮ ಸಂಘಟನೆಯಲ್ಲಿ ಸೂಕ್ಷ್ಮ(ಮೈಕ್ರೊ)ಜಾತಿಗಳಿಗೆ ಅವಕಾಶ ನೀಡುವುದಿಲ್ಲ. ಲಿಂಗಾಯತ ಹೆಸರೇಳಿಕೊಂಡು ತಮ್ಮದೇ ಸಾಮ್ರಾಜ್ಯವನ್ನು ಲಿಂಗಾಯತ ನಾಯಕರು ಕಟ್ಟಿಕೊಂಡಿದ್ದಾರೆ. ಜಾತಿಗಣತಿಯನ್ನು ವಿರೋಧಿಸುವಾಗಲೂ ಇವರು ಗುರಿ ತಮ್ಮ ಸ್ಥಾನಮಾನಗಳದ್ದೇ ವಿನಾ ತಮ್ಮ ಗುತ್ತಿಗೆಯದ್ದೇ ವಿನಾ ಸಮಾಜದಲ್ಲಿ ಕೂಲಿನಾಲಿ ಮಾಡಿಕೊಡು ಬದುಕು ದೂಡುತ್ತಿರುವ ನಿರ್ಲಕ್ಷಿತ ವರ್ಗದ ಬಗ್ಗೆ ಇವರು ಮಾತನಾಡುವುದಿಲ್ಲ. ಒಂದು ಕಾಲದಲ್ಲಿ ಲಿಂಗಾಯತ ಸಂಘ-ಸಂಸ್ಥೆಗಳು, ಮಠಗಳು ಲಿಂಗಾಯತದ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಕಾಣಿಕೆ ನೀಡಿವೆ. ಆದರೆ ಈ ಸಂಘ-ಸಂಸ್ಥೆಗಳು ಇಂದು ಖಾಸಗಿ ಬಂಡವಾಳಶಾಹಿಯನ್ನು ತಬ್ಬಿಕೊಂಡು ಸಮುದಾಯ ಪ್ರಜ್ಞೆಯನ್ನು ಮರೆತು ಅಥವಾ ಪಕ್ಕಕ್ಕೆ ತಳ್ಳಿ ಸಂಪತ್ತನ್ನು ಗುಡ್ಡೆ ಹಾಕಿಕೊಳ್ಳುವ ಮಹತ್ಕಾರ್ಯದಲ್ಲಿ ನಿರತವಾಗಿವೆ.
ವಂಚಿತ, ಅಂಚಿನ ಮತ್ತು ಸೂಕ್ಷ್ಮ ಜಾತಿಗಳು ಎಷ್ಟು ಹಿಂದುಳಿದಿದ್ದಾವೆ, ಎಷ್ಟರಮಟ್ಟಿಗೆ ಅಭಿವೃದ್ಧಿಯಿಂದ ವಂಚಿತವಾಗಿವೆ, ಅಸಮಾನತೆ ಎನ್ನುವುದು ಕುಗ್ಗುತ್ತಿದೆಯೋ ಅಥವಾ ಹಿಗ್ಗುತ್ತಿದೆಯೋ ಎಂಬ ಸತ್ಯ ಸದರಿ ಸಮೀಕ್ಷೆಯಿಂದ ಮಾತ್ರ ತಿಳಿಯಲು ಸಾಧ್ಯ. ತಮ್ಮ ಏಕಸ್ವಾಮ್ಯಕ್ಕೆ ಎಲ್ಲಿ ಕಂಟಕವಾಗುತ್ತದೊ ಎಂಬುದು ಈ ಬಲಾಢ್ಯ ಜಾತಿಗಳ ಲೆಕ್ಕಾಚಾರ. ಯಾವತ್ತಾದರೂ ಶ್ಯಾಮನೂರ ಶಿವಶರಣಪ್ಪನವರಾಗಲಿ ಅವರ ಮಹಾಸಭೆಯಾಗಲಿ ಬಸವ ಮೌಲ್ಯಗಳಾದ ಅಸ್ಪೃಶ್ಯತೆ ನಿವಾರಣೆ ಬಗ್ಗೆ, ಸಮುದಾಯದಲ್ಲಿನ ಸಣ್ಣ-ಪುಟ್ಟ ಒಳಪಂಗಡಗಳನ್ನು ಮಹಾಸಭೆಯ ಮುಂಚೂಣಿಗೆ ತರುವ ಬಗ್ಗೆ ಮಾತನಾಡಿದ್ದು, ಕ್ರಮ ತೆಗೆದುಕೊಂಡಿದ್ದು ಉಂಟೋ! ಇಲ್ಲ ಇಲ್ಲ ಇಲ್ಲ.
ಲಿಂಗಾಯತದ ಬಗ್ಗೆ ಮೇಲೆ ಏನೆಲ್ಲ ಹೇಳಲಾಗಿದೆಯೋ ಆ ಎಲ್ಲ ಮಾತುಗಳು ಒಕ್ಕಲಿಗ ಸಮುದಾಯಕ್ಕೂ ಅನ್ವಯವಾಗುತ್ತದೆ. ಈ ಬಲಾಢ್ಯ ಜಾತಿಗಳಿಗೆ ತಮ್ಮ ಏಕಸ್ವಾಮ್ಯದ ಹರಣದ ಬಗ್ಗೆ ಚಿಂತೆಯೇ ವಿನಾ ಸಮುದಾಯಗಳಲ್ಲಿನ ಸೂಕ್ಷ್ಮ ಪಂಗಡಗಳ ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳುವುದರ ಬಗ್ಗೆ ರವಷ್ಟೂ ಇವರಿಗೆ ಕಾಳಜಿಯಿಲ್ಲ-ಸಂವೇದನೆಯೂ ಇಲ್ಲ. ಬ್ರಾಹ್ಮಣ್ಯಶಾಹಿಗೆ ಎಲ್ಲಿ ಜಾತಿಗಣತಿಯು ತಮ್ಮ ಏಕೀಕೃತ-ಏಕಾಕಾರಿ-ಏಕಾತ್ಮಕ ಸಂಸ್ಕೃತಿಗೆ ದಕ್ಕೆಯುಂಟು ಮಾಡುತ್ತದೊ ಎಂಬ ಭಯ ಇದ್ದರೆ ಜಮೀನ್ದಾರಿ ಬಲಾಢ್ಯ ಜಾತಿಗಳಿಗೆ ತಮ್ಮ ಜಾತಿಗಳೊಳಗೆ ಎಲ್ಲಿ ತಮ್ಮ ಏಕಸ್ವಾಮ್ಯಕ್ಕೆ ಕಂಟಕವುಂಟಾಗುತ್ತದೆ ಎಂಬ ಭಯ.
ನೂರು(1904) ವರ್ಷಕ್ಕೂ ಮಿಕ್ಕಿ ಚರಿತ್ರೆಯಿರುವ ಅಖಿಲ ಭಾರತ ವೀರಶೈವ ಮಹಾಸಭೆಗೆ ವಚನ ಸಂಸ್ಕೃತಿಯ ಪರಮೋಚ್ಛ ಮೌಲ್ಯವಾದ ಲಿಂಗ ಸಮಾನತೆಗೆ ಮನ್ನಣೆ ನೀಡಿ ಪ್ರಭಾವಶಾಲಿ ಮಹಿಳಾ ನಾಯಕತ್ವವನ್ನು ಮಹಾಸಭೆಯಲ್ಲಿ ಬೆಳೆಸುವುದು ಸಾಧ್ಯವಾಗಿಲ್ಲ. ಮೈಲಿಗೆ, ಋತುಚಕ್ರ ಕಾರಣವಾಗಿ ಮನುಸ್ಮೃತಿಯನ್ನು ಪಾಲಿಸುತ್ತಾ ಮಹಿಳೆಯರಿಗೆ ದೇವಾಲಯದೊಳಗೆ ಪ್ರವೇಶ ನೀಡುವುದರ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಆದೇಶವಿದ್ದರೂ ಅದನ್ನು ವಿರೋಧಿಸಿದ ಬಿಜೆಪಿ – ಆರ್‌ಎಸ್‍ಎಸ್ ಜೊತೆಯಲ್ಲಿ ಕೈಜೋಡಿಸಿದ ವೀರಶೈವವು ಕಟ್ಟಿಕೊಳ್ಳಲು ಅಥವಾ ಬಿಟ್ಟುಬಿಡಲು ಸಾಧ್ಯವಾಗದೆ ಜಮೀನ್ದಾರಿ-ಬಲಾಢ್ಯ ಲಿಂಗಾಯತ ನಾಯಕತ್ವವು ಸ್ಥಾವರ ರೂಪ ತಾಳಿ ನರಳುತ್ತಿದೆ. ಈ ಹಿನ್ನೆಲೆಯಲ್ಲಿ ಜಾತಿಗಣತಿಯ ಬಗ್ಗೆ ಜಮೀನ್ದಾರಿ ಬಲಾಢ್ಯ ಲಿಂಗಾಯತ ನಾಯಕತ್ವದ ವಿರೋಧವನ್ನು ಅರ್ಥ ಮಾಡಿಕೊಳ್ಳಬೇಕು.
ಇದನ್ನೂ ಓದಿ ಈ ದಿನ ಸಂಪಾದಕೀಯ | ಕುಮಾರಸ್ವಾಮಿ ಪೂರ್ವ ತಯಾರಿ ಇಲ್ಲದೆ ಆರೋಪ ಮಾಡ್ತಿದ್ದಾರಾ?
ಈ ಮಾತು ಒಕ್ಕಲಿಗ ಜಾತಿ ಸಮುದಾಯಕ್ಕೂ ಅನ್ವಯವಾಗುತ್ತದೆ. ಜಾತಿಗಣತಿಯನ್ನು ಆರಂಭದಿಂದಲೂ ವಿರೋಧಿಸುತ್ತಿರುವ ಮನುವ್ಯಾದಿ ಬ್ರಾಹ್ಮಣ್ಯಕ್ಕೆ ಏಕೀಕೃತ ಸಂಸ್ಕೃತಿಯ ಸಂರಕ್ಷಣೆಯ ನೆಲೆಯಿದ್ದರೆ ಈಗ ಅದಕ್ಕೆ ವಿರೋಧದ ನಿಲುವು ತಳೆದಿರುವ ಜಮೀನ್ದಾರಿ ಬಲಾಢ್ಯ ಲಿಂಗಾಯತ-ಒಕ್ಕಲಿಗ ಜಾತಿ ಸಮುದಾಯಗಳಿಗೆ ಜಾತಿಗಳೊಳಗೆ ತಮ್ಮ ಏಕಸ್ವಾಮ್ಯಕ್ಕೆ ಎಲ್ಲಿ ದಕ್ಕೆಯುಂಟಾಗಿ ಬಿಡುತ್ತದೊ ಎಂಬ ಭಯವಿದೆ.
ಜಾತಗಣತಿಯ ಬಗೆಗಿನ ಬ್ರಾಹ್ಮಣ್ಯದ ವಿರೋಧದ ಮೂಲದಲ್ಲಿ ಇಡೀ ದೇಶಕ್ಕೆ ಒಂದೇ ಸಂಸ್ಕೃತಿ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ಚುನಾವಣೆ ಮುಂತಾದ ಕ್ರಮಗಳ ಮೂಲಕ ನಮ್ಮ ಸಮಾಜದ ಬಹುತ್ವವನ್ನು, ಬಹುಳಾಕಾರಿ ಸಂಸ್ಕೃತಿಯನ್ನು, ಬಹುವಚನ ಪ್ರಣಾಳಿಕೆಯನ್ನು ನಾಶ ಮಾಡುವ ತಂತ್ರ – ಕುತಂತ್ರವಿದೆ. ಇದು ಬಸವ ವಿರೋಧಿ ರಾಜಕಾರಣ ಎನ್ನುವುದನ್ನು ಲಿಂಗಾಯತ ನಾಯಕತ್ವವು ಅರ್ಥ ಮಾಡಿಕೊಳ್ಳುತ್ತಿಲ್ಲ. ಒಕ್ಕಲಿಗರಿಗೂ ಇದು ಅರ್ಥವಾಗುತ್ತಿಲ್ಲ. ಜಾತಿಗಣತಿಯ ಬಗ್ಗೆ ಬ್ರಾಹ್ಮಣ್ಯವು ತೋಡಿದ ಗುಂಡಿಗೆ ಲಿಂಗಾಯತ-ಒಕ್ಕಲಿಗ ಸಮುದಾಯಗಳು ಬೀಳುತ್ತಿವೆ.

ಟಿ ಆರ್ ಚಂದ್ರಶೇಖರ
ವಿಶ್ರಾಂತ ಪ್ರಾಧ್ಯಾಪಕ, ಲೇಖಕರು