ವಿಜಯಪುರ ಜಿಲ್ಲೆಯ ತಾಂಬಾ ಗ್ರಾಮದಲ್ಲಿರುವ ಆರೋಗ್ಯ ಕೇಂದ್ರವನ್ನು ಗ್ರಾಮ ಹಾಗೂ ಸುತ್ತಲ ಗ್ರಾಮದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿ ಎಂಬ ಉದ್ದೇಶದಿಂದ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಆದರೆ, ವೈದ್ಯ ಸಿಬ್ಬಂದಿ ಇಲ್ಲದ್ದಕ್ಕೆ ರೋಗಿಗಳು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಈ ಆರೋಗ್ಯ ಕೇಂದ್ರದಲ್ಲಿ ಎರಡು ವೈದ್ಯರ ಹುದ್ದೆ ಗಳಿವೆ. ಒಂದು ಎಂಬಿಬಿಎಸ್ ಮತ್ತೊಂದು ಬಿಎಎಂಎಸ್. ಆದರೆ, ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಸಿಬ್ಬಂದಿ ಹೆಚ್ಚು ದಿನ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕರ್ತವ್ಯಕ್ಕೆ ಬರುತ್ತಾರೆ, ಕೆಲವು ತಿಂಗಳು ಮಾಡುತ್ತಾರೆ ಮತ್ತೆ ಬೇರೆಡೆ ವರ್ಗವಾಗಿ ಹೋಗುತ್ತಿದ್ದಾರೆ. ಹೀಗಾಗಿ ಈ ಆಸ್ಪತ್ರೆ ಇದೀಗ ವೈದ್ಯ ಸಿಬ್ಬಂದಿ ಇಲ್ಲದೇ ಜನರಿಂದ ಇದ್ದು ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇದ್ದು ಉಪಯೋಗಿಸುವ ಸ್ಥಿತಿಯಲ್ಲಿ ಇಲ್ಲ. ಗ್ರಾಮದಲ್ಲಿ ಯಾರಾದರೂ ತೀವ್ರ ಅನಾರೋಗ್ಯ ಅಥವಾ ಅಪಘಾತವಾದರ ದುಡ್ಡು ಕೊಟ್ಟು ಖಾಸಗಿ ವಾಹನ ಮಾಡಿಕೊಂಡು ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿ ಗ್ರಾಮಸ್ಥರದ್ದು.
ಇಂಡಿ ತಾಲೂಕಿನ ಆರೋಗ್ಯ ಅಧಿಕಾರಿಗಳು ತಾಂಬಾ ಗ್ರಾಮದ ಆಸ್ಪತ್ರೆ ಸಿಂದಗಿ ಮತಕ್ಷೇತ್ರದಲ್ಲಿ ಬರುವದೆಂದು ಮತ್ತು ಸಿಂದಗಿ ತಾಲೂಕಿನ ಆರೋಗ್ಯ ಅಧಿಕಾರಿಗಳು ಇಂಡಿ ತಾಲೂಕಿಗೆ ಸಂಬಂಧಿಸಿದೆ ಎಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆದ್ದರಿಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡಾ ಬಡವಾಗಿದೆ.
ಕಳೆದ ವರ್ಷದ ಸಿಂದಗಿ ಉಪ ಚುನಾವಣೆಯಲ್ಲಿ ತಾಂಬಾ ಆಸ್ಪತ್ರೆ ಸುಧಾರಣೆಗಾಗಿ ಗ್ರಾಮಸ್ಥರು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ, ದೇವೇಗೌಡ, ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ಎಲ್ಲ ರಾಜಕೀಯ ನಾಯಕರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.