ಗಾಝಾ ಪಟ್ಟಿಯ ಉತ್ತರದಿಂದ ದಕ್ಷಿಣಕ್ಕೆ ತೆರಳುವಂತೆ ತಾಕೀತು ಮಾಡಿ, ದಕ್ಷಿಣದ ಖಾನ್ ಯೂನಿಸ್, ರಫಾ ಹಾಗೂ ಅಲ್ಲಿನ ನಿರಾಶ್ರಿತರ ಶಿಬಿರಗಳ ಮೇಲೆ ಬಾಂಬುಗಳನ್ನು ಕೆಡವುವ ಬರ್ಬರತೆಗೆ ಸಮರ್ಥನೆ ಉಂಟೇ?
ಗಾಝಾ ಪಟ್ಟಿಯ ಮೇಲೆ ಎಡೆಬಿಡದ ಇಸ್ರೇಲ್ ಬಾಂಬ್ ದಾಳಿ ಇಂದು (ನವೆಂಬರ್ 17) 41ನೆಯ ದಿನಕ್ಕೆ ಕಾಲಿಟ್ಟಿದೆ. ಅನ್ನ ನೀರು ನೆರಳನ್ನು ಕಿತ್ತುಕೊಂಡು ಮರಣ, ಹಸಿವು, ಮತ್ತು ವಿನಾಶದ ಮಳೆಗರೆಯಲಾಗುತ್ತಿದೆ. ದೆಹಲಿಯ ಭೌಗೋಳಿಕ ವಿಸ್ತಾರದ ನಾಲ್ಕನೆಯ ಒಂದರಷ್ಟು ಸಣ್ಣದು ಗಾಝಾ ಪಟ್ಟಿ. ವರದಿಗಳ ಪ್ರಕಾರ ಕಳೆದ 40 ದಿನಗಳಲ್ಲಿ ಇಂತಹ ಪುಟ್ಟ ಪಟ್ಟಿ ಪ್ರದೇಶದ ಮೇಲೆ ಕೆಡವಿರುವ ಬಾಂಬುಗಳ ಪ್ರಮಾಣ 25 ಸಾವಿರ ಟನ್ನುಗಳು. ಅರ್ಥಾತ್ ಎರಡು ಪರಮಾಣು ಬಾಂಬುಗಳಿಗೆ ಸರಿಸಮ.
ಈ ವಿಕೃತ ನೃತ್ಯವನ್ನು ನಿಲ್ಲಿಸಲು ಇಸ್ರೇಲ್ ತಯಾರಿಲ್ಲ. ನಾಗರಿಕ ಜಗತ್ತು ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತ ಬಂದಿರುವ ಪಾಶ್ಚಿಮಾತ್ಯ ವಲಯದಿಂದ ಅಂತಹ ಯಾವುದೇ ಒತ್ತಡವೂ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚುವ ಸೂಚನೆಗಳೇ ದಟ್ಟವಾಗಿ ಕವಿದಿವೆ. ಕದನವಿರಾಮ ಎಂಬುದು ದೂರ ದಿಗಂತದಲ್ಲೂ ಗೋಚರಿಸುತ್ತಿಲ್ಲ. ಬದಲಾಗಿ ಬ್ರಿಟನ್ನಿನ ಸಂಸತ್ತು ಕದನವಿರಾಮವನ್ನು ವಿರೋಧಿಸಿ ಗೊತ್ತುವಳಿಯನ್ನು ಅಂಗೀಕರಿಸಿತು!
ಈ ಅಮಾನುಷ ಬಾಂಬ್ ದಾಳಿಗೆ ಗಾಝಾ ಪಟ್ಟಿ ನೆಲಸಮವಾಗತೊಡಗಿದೆ. ಇಲ್ಲಿಯವರೆಗೆ ಬಲಿಯಾಗಿರುವ ಪ್ಯಾಲೆಸ್ತೀನಿಗಳ ಸಂಖ್ಯೆ ಹನ್ನೆರಡು ಸಾವಿರ ದಾಟಿದೆ. ಇವರ ಪೈಕಿ ಹೆಚ್ಚಿನವರು ಹಸುಳೆಗಳು ಮಕ್ಕಳು ಹೆಣ್ಣುಮಕ್ಕಳೇ. ನೆಲಸಮವಾದ ಕಟ್ಟಡಗಳ ಕೆಳಗೆ ಜೀವಂತ ಸಮಾಧಿಯಾದವರ ಲೆಕ್ಕವಿಲ್ಲ. ಗಾಯಗೊಂಡವರಿಗೆ ಮಾನವಘನತೆಯ ಚಿಕಿತ್ಸೆಗೂ ಅವಕಾಶ ಇಲ್ಲವಾಗಿದೆ. ಆಸ್ಪತ್ರೆಗಳ ಮೇಲೆಯೂ ಬಾಂಬುಗಳನ್ನು ಸುರಿಸಲಾಗುತ್ತಿದೆ. ಅಳಿದುಳಿದ ಆಸ್ಪತ್ರೆಗಳ ಅಂಗುಲಂಗಲ ಜಾಗವೂ ತುಂಬಿ ಹೋಗಿ ನೆಲದ ಮೇಲೆಲ್ಲ ಅಸ್ತವ್ಯಸ್ತವಾಗಿ ಚೆಲ್ಲಿ ಹೋಗಿದ್ದಾರೆ ಗಾಯಾಳುಗಳು. ಚಿಕಿತ್ಸೆಗೆ ಬೇಕಾದ ಸಾಧನ ಸಲಕರಣೆಗಳಿಲ್ಲ. ನೈರ್ಮಲ್ಯಕ್ಕಂತೂ ಅವಕಾಶವೇ ಇಲ್ಲ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿ ಸೃಷ್ಟಿಸುತ್ತಿರುವ ನರಕಗಳಿವು.
ಇಸ್ರೇಲ್ ಮೇಲೆ ಅಕ್ಟೋಬರ್ ಏಳರಂದು ಹಮಾಸ್ ದಾಳಿ ನಿಸ್ಸಂದೇಹವಾಗಿಯೂ ಖಂಡನೀಯ. ಈ ದಾಳಿಗೆ ಬಲಿಯಾದ ಇಸ್ರೇಲಿಗಳ ಸಂಖ್ಯೆ 1,200. ಹಮಾಸ್ ದಾಳಿ ಬರ್ಬರ ಅಪರಾಧವಾದರೆ, ಇಸ್ರೇಲ್ ದಾಳಿಯೇಕೆ ನಾಗರಿಕ ಬಗೆಯ ಮಿಲಿಟರಿ ಕ್ರಮ ಎಂಬುದಾಗಿ ರಘು ಕಾರ್ನಾಡ್ ಎತ್ತಿರುವ ಪ್ರಶ್ನೆ ಅತ್ಯಂತ ಪ್ರಸ್ತುತ.
ಅಕ್ಟೋಬರ್ ಏಳರ ದಾಳಿ ಖಂಡನೀಯ ಹೌದು, ಆದರೆ ಅದು ನಿರ್ವಾತದಲ್ಲಿ ನಡೆಯಲಿಲ್ಲ ಎಂಬುದೂ ಅಷ್ಟೇ ಪ್ರಸ್ತುತ. 56 ವರ್ಷಗಳಿಂದ ಪ್ಯಾಲೆಸ್ತೀನೀಯರು ತಮ್ಮದೇ ತಾಯ್ನೆಲದಲ್ಲಿ ಪರಕೀಯ ಇಸ್ರೇಲಿಗಳ ಘೋರ ಕ್ರೂರ ಆಕ್ರಮಣಕ್ಕೆ ತುತ್ತಾಗಿ ತಬ್ಬಲಿಗಳಂತೆ, ಮೂರನೆಯ ದರ್ಜೆಯ ನಾಗರಿಕರಂತೆ ಬದುಕಿದ್ದಾರೆ ಅಥವಾ ಸಾಯುತ್ತಿದ್ದಾರೆ ಎಂಬ ಅಂಶವನ್ನು ಹೇಗೆ ಮರೆಯಲಾದೀತು? ತಾನು ಗಾಝಾದಲ್ಲಿ ನಡೆಸಿರುವ ನರಮೇಧದ ಖಂಡನೆಯನ್ನೂ ಇಸ್ರೇಲ್ ಸಹಿಸುತ್ತಿಲ್ಲ. ಅದರ ವಿರುದ್ಧ ‘ಯಹೂದಿ ದ್ವೇಷ’ದ ಹತಾರನ್ನು ಝಳಪಿಸುತ್ತಿದೆ.
ವೈಮಾನಿಕ ಬಾಂಬ್ ದಾಳಿಯ ಇತಿಹಾಸ ಕುರಿತ ಸ್ವೆನ್ ಲಿಂಡ್ ಕ್ವಿಸ್ಟ್ ಅವರ ಪುಸ್ತಕವನ್ನು ಉಲ್ಲೇಖಿಸುವ ಕಾರ್ನಾಡ್ ಪಾಶ್ಚಿಮಾತ್ಯ ಜಗತ್ತಿನ ಇಬ್ಬಗೆಯ ಮಾನದಂಡಗಳನ್ನು ಪ್ರಸ್ತಾಪಿಸುತ್ತಾರೆ. ಲಿಂಡ್ ಕ್ವಿಸ್ಟ್ ಪ್ರಕಾರ ಪಾಶ್ಚಿಮಾತ್ಯ ರಾಷ್ಟ್ರಗಳು ಈ ವಿಷಯದಲ್ಲಿ ಅನುಸರಿಸುವ ‘ನೈತಿಕತೆ’ಯನ್ನು ನಗ್ನಗೊಳಿಸಿದ್ದಾರೆ. ‘ತಮ್ಮದೇ ಜನಾಂಗ ಅಥವಾ ತಳಿ, ವರ್ಗ ಹಾಗೂ ಸಂಸ್ಕೃತಿಯನ್ನು ರಕ್ಷಿಸುತ್ತದೆ ಈ ‘ನೈತಿಕತೆ’. ತಮ್ಮದಲ್ಲದ ಅನ್ಯ ಜನಾಂಗ–ಬುಡಕಟ್ಟು, ಸಂಸ್ಕೃತಿಗಳ ಮೇಲೆ ವಿನಾಶವನ್ನು ಸುರಿಯುತ್ತದೆ’. ಈ ಮಾತಿಗೆ ಹತ್ತು ಹಲವು ಜ್ವಲಂತ ಉದಾಹರಣೆಗಳನ್ನೂ ಲಿಂಡ್ ಕ್ವಿಸ್ಟ್ ಪಟ್ಟಿ ಮಾಡುತ್ತಾರೆ. ವಸಾಹತುಶಾಹಿ ವಿಕೃತಿಯಿದು ಎಂದು ಕರೆಯುತ್ತಾರೆ. ಈ ವಿಕೃತಿಯೇ ಯುದ್ಧ ಕುರಿತ ಜಗತ್ತಿನ ನೈತಿಕತೆಯನ್ನು ರೂಪಿಸಿದೆ. ಇಲ್ಲವಾಗಿದ್ದರೆ 1,200 ಸಾವುಗಳ ಸೇಡು ತೀರಿಸಿಕೊಳ್ಳಲು 12,000 ಸಾವುಗಳನ್ನು ಅಪಾರ ಸಂಖ್ಯೆಯ ನೋವುಗಳನ್ನು ಉಂಟು ಮಾಡುತ್ತಿರಲಿಲ್ಲ. ಹನ್ನೆರಡು ಸಾವಿರ ಸಾವುಗಳನ್ನು ಉಂಟು ಮಾಡಿದ್ದು ನ್ಯಾಯವೇ, ನೈತಿಕವೇ ಎಂಬ ಪ್ರಶ್ನೆ ಕಾಡಬೇಕಿತ್ತು. ಆದರೆ ಹಾಗೆ ಕಾಡುವುದಕ್ಕೆ ಬದಲಾಗಿ ಪ್ಯಾಲೆಸ್ತೀನೀಯರ ನೆತ್ತರು ಕುಡಿಯುವ ಪಾಶ್ಚಿಮಾತ್ಯ ದಾಹ ತಣಿಯದಾಗಿದೆ. ಈ ನೆತ್ತರದಾಹಿಗಳ ತಕ್ಕಡಿ 12 ಸಾವಿರ ಸಾವುಗಳ ನಂತರವೂ ಮೇಲೇಳದೆ ಪ್ಯಾಲೆಸ್ತೀನಿಗಳ ನರಮೇಧಕ್ಕಾಗಿ ತಹತಹಿಸುತ್ತಿದೆ. ಇದನ್ನು ನಾಗರಿಕತೆಯೆಂದು ಕರೆಯಬೇಕಿದ್ದರೆ, ನಿಘಂಟುಗಳಲ್ಲಿ ನಾಗರಿಕತೆಯ ಅರ್ಥವನ್ನು ಸಾರಾಸಗಟು ಬದಲಿಸಿ ಹೊಸದಾಗಿ ಬರೆಯಬೇಕು.
ತನ್ನ ದಾಳಿಯ ಗುರಿ ಹಮಾಸ್ ಸಂಘಟನೆಯೇ ವಿನಾ ಪ್ಯಾಲೆಸ್ತೀನ್ ನಾಗರಿಕರಲ್ಲ. ಹಮಾಸ್ ತನ್ನ ಸದಸ್ಯರನ್ನು ಪ್ಯಾಲೆಸ್ತೀನ್ ನಾಗರಿಕರ ನಡುವೆ ಅಡಗಿಸಿಟ್ಟಿದೆ ಎಂಬುದು ಇಸ್ರೇಲ್ ಸಮಜಾಯಿಷಿ. ಈ ವಾದವೇ ವಸಾಹತುಶಾಹಿ. ಸಾಮೂಹಿಕ ಶಿಕ್ಷೆ ನೀಡಿಕೆಯ ಈ ವಿಚಿತ್ರ ಸಮರ್ಥನೆ ನೂರಾರು ವರ್ಷಗಳಷ್ಟು ಅಂದರೆ ವಸಾಹತುಶಾಹಿಯಷ್ಟೇ ಹಳೆಯದು. ಹಮಾಸ್ ಸಂಘಟನೆಯನ್ನು ಬಗ್ಗು ಬಡಿಯುತ್ತೇವೆಂದು ಇಡೀ ಗಾಝಾ ಪಟ್ಟಿಗೆ, ಅನ್ನ, ನೀರು, ವಿದ್ಯುಚ್ಛಕ್ತಿ, ಇಂಧನ ಸರಬರಾಜನ್ನು ನಿಲ್ಲಿಸುವುದು ಯಾವ ನ್ಯಾಯ?
ಇದನ್ನೂ ಓದಿ ಇಸ್ರೇಲ್ – ಹಮಾಸ್ ಸಂಘರ್ಷ: ನಾಗರಿಕರ ಹತ್ಯೆಗೆ ಪ್ರಧಾನಿ ಮೋದಿ ಖಂಡನೆ
ಗಾಝಾ ಪಟ್ಟಿಯ ಉತ್ತರದಿಂದ ದಕ್ಷಿಣಕ್ಕೆ ತೆರಳುವಂತೆ ತಾಕೀತು ಮಾಡಿ, ದಕ್ಷಿಣದ ಖಾನ್ ಯೂನಿಸ್, ರಫಾ ಹಾಗೂ ಅಲ್ಲಿನ ನಿರಾಶ್ರಿತರ ಶಿಬಿರಗಳ ಮೇಲೆ ಬಾಂಬುಗಳನ್ನು ಕೆಡವುವ ಬರ್ಬರತೆಗೆ ಸಮರ್ಥನೆ ಉಂಟೇ?
ಅಮೆರಿಕ, ಬ್ರಿಟನ್ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳ ನಾಗರಿಕ ಸಮಾಜ ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ಇಸ್ರೇಲ್ ನ ಅಮಾನುಷತೆಯನ್ನು ಪ್ರತಿಭಟಿಸಿದೆ. ತಮ್ಮ ಸರ್ಕಾರಗಳು ಇಸ್ರೇಲ್ ಜೊತೆ ಶಾಮೀಲಾಗಿರುವುದಕ್ಕೆ ತಮ್ಮ ಒಪ್ಪಿಗೆಯಿಲ್ಲ ಎಂದು ಸಾರಿದೆ. ಆಶಾದಾಯಕ ಬೆಳವಣಿಗೆಯಿದು.
ಯುಕ್ರೇನ್ ಮೇಲೆ ನಡೆದಿರುವ ದಾಳಿಯನ್ನು ಖಂಡಿಸುವ ನಾಲಗೆಗಳು, ಪ್ಯಾಲೆಸ್ತೀನೀಯರ ಪರವಾಗಿ ಮೇಲೇಳದೆ ಸೇದಿ ಹೋಗಿರುವುದೇಕೆ?