ಬಳ್ಳಾರಿಯ ಬಿಜೆಪಿ ಸಂಸದ ದೇವೆಂದ್ರಪ್ಪ ಪುತ್ರ ರಂಗನಾಥ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು. ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದೀಗ, ಈ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಮೈಸೂರಿಗೆ ವರ್ಗಾವಣೆ ಮಾಡಲು ಹಿರಿಯ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
24 ವರ್ಷದ ಸಂತ್ರಸ್ತ ಯುವತಿ ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿದ್ದಾರೆ. ಬಳ್ಳಾರಿ ಬಿಜೆಪಿ ಸಂಸದನ ಪುತ್ರ ಲೈಂಗಿಕ ದೌರ್ಜನ್ಯ ಎಸಗಿ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ನಗರದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲು ಮಾಡಿದ್ದರು.
ಆದರೆ, ಸಂತ್ರಸ್ತೆ ಮತ್ತು ಸಂಸದನ ಪುತ್ರ ಹೆಚ್ಚಾಗಿ ಭೇಟಿ ಆಗಿದ್ದು ಮೈಸೂರಿನಲ್ಲಿ ಹಾಗೂ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಲೈಂಗಿಕ ಸಂಪರ್ಕ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಯಾವುದೇ ದಾಖಲೆಗಳಿಲ್ಲ. ಈ ಹಿನ್ನೆಲೆ, ಹಿರಿಯ ಅಧಿಕಾರಿಗಳ ಸೂಚನೆ ಮೇಲೆ ಈ ಪ್ರಕರಣವನ್ನು ಮೈಸೂರಿಗೆ ವರ್ಗಾವಣೆ ಮಾಡಲು ಬಸವನಗುಡಿ ಮಹಿಳಾ ಪೊಲೀಸರು ಮುಂದಾಗಿದ್ದಾರೆ.
ಏನಿದು ಪ್ರಕರಣ?
ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ ಆರೋಪ ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ಮೇಲೆ ಕೇಳಿಬಂದಿತ್ತು. ಈ ಬಗ್ಗೆ ಸಂಸದ ದೇವೇಂದ್ರಪ್ಪ ಪುತ್ರ ರಂಗನಾಥ್ ಅವರ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ರಂಗನಾಥ್ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ಮೂಲದ ಯುವತಿಯನ್ನು ಕಳೆದ ಒಂದು ವರ್ಷದ ಹಿಂದೆ ರಂಗನಾಥ್ ಅವರು ಪಾರ್ಟಿಯೊಂದರಲ್ಲಿ ಪರಿಚಯ ಮಾಡಿಕೊಂಡಿದ್ದರು. ಬಳಿಕ, ಅವರನ್ನು ಕಳೆದ ಜನವರಿಯಲ್ಲಿ ಅವರ ತಂದೆಯನ್ನು ಭೇಟಿ ಮಾಡಿಸುವ ನೆಪದಲ್ಲಿ ಮೈಸೂರಿನ ಹೋಟೆಲ್‌ವೊಂದಕ್ಕೆ ಕರೆಸಿಕೊಂಡಿದ್ದಾರೆ. ಈ ವೇಳೆ, ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರೀತಿ ಮಾಡಿ, ದೈಹಿಕ ಸಂಬಂಧ ಬೆಳೆಸಿ ಇದೀಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಆರು ತಿಂಗಳ ಹಿಂದೆ ಮದುವೆಯಾಗೊದಾಗಿ ಹೇಳಿ ಈಗ ವಂಚನೆ ಮಾಡಿದ್ದಾರೆ ಎಂದು ಯುವತಿ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಂಗನಾಥ್ ವಿರುದ್ಧ ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಿಂದ ಯುವತಿ ಮತ್ತು ರಂಗನಾಥ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ನಡುವೆ ಇದೀಗ, ಈ ಪ್ರಕರಣವನ್ನು ಮೈಸೂರಿನ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡುವ ಸಿದ್ಧತೆ ನಡೆದಿದೆ.
ಇನ್ನು ಸಂಸದ ಪುತ್ರ ರಂಗನಾಥ್ ಅವರ ಫೋಟೋ ಮತ್ತು ಆಡಿಯೋ ಇಟ್ಟುಕೊಂಡು ₹15 ಲಕ್ಷ ನೀಡುವಂತೆ ಯುವತಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ರಂಗನಾಥ್ ಅವರು ಯುವತಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲು ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಎಫ್‌ಐಆರ್ ದಾಖಲು
ಈ ದೂರು ದಾಖಲಾದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತ ಯುವತಿ, “ನಾನು ಯಾವ ಬ್ಲಾಕ್ ಮೇಲ್ ಕೂಡ ಮಾಡಿಲ್ಲ. ನಾನು ಈ ಬಗ್ಗೆ ರಂಗನಾಥ್ ಅವರ ತಂದೆಯೊಂದಿಗೆ ಮಾತನಾಡಲು ಪ್ರಯತ್ನ ಮಾಡಿದ್ದೇನೆ. ಆದರೆ, ಅವರು ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ನಾವು ಇಬ್ಬರೂ ಜಗಳ ಮಾಡಿಕೊಳ್ಳುವ ಮುಂಚೆ ಅವರು ನನ್ನ ಮನೆಗೆ ಹಣ ನೀಡಿದ್ದಾರೆ. ಜಗಳವಾದ ಬಳಿಕ ಅವರಿಂದ ನಾನು ಹಣ ಪಡೆದಿಲ್ಲ” ಎಂದು ಹೇಳಿದ್ದಾರೆ.
“ನನಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ, ಇದೀಗ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ನಾನು ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ, ನಾನು ಯಾವುದೇ ಹಣಕ್ಕೂ ಬೇಡಿಕೆ ಇಟ್ಟಿಲ್ಲ” ಎಂದಿದ್ದಾರೆ.