ರಾಜ್ಯ ಸರಕಾರ ಬರಗಾಲ ಘೋಷಿಸಿ ಹಣ ಬಿಡುಗಡೆ ಮಾಡಿದರೂ ರೈತರ ಖಾತೆಗೆ ಹಣ ಜಮೆಯಾಗದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ರೈತರ ಬಗ್ಗೆ ಸರಕಾರ ಮಲತಾಯಿ ಧೋರಣೆ ತಾಳುತ್ತಿದೆ. ಶೀಘ್ರವೇ ಬರಗಾಲ ಪರಿಹಾರ ಧನ ನೀಡಬೇಕೆಂದು ಎಐಕೆಕೆಎಸ್ ಒತ್ತಾಯಿಸಿದೆ.
ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕಮರಿ ಹೋದ ಬೆಳೆಗಳನ್ನು ಪ್ರದರ್ಶಿಸಿದ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಜಿಲ್ಲೆಯ ದೇವದುರ್ಗ, ಮಾನ್ವಿ, ಸಿಂಧನೂರು, ಮಸ್ಕಿ, ಸಿರವಾರ, ಲಿಂಗಸುಗೂರು ಮತ್ತು ರಾಯಚೂರು ತಾಲೂಕುಗಳಲ್ಲಿ ಸಕಾಲಕ್ಕೆ ಮುಂಗಾರು ಮತ್ತು ಹಿಂಗಾರು ಮಳೆಯಾಗದ ಕಾರಣ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ಬಿಸಿಲಿಗೆ ಕಮರಿ ಹೋಗುತ್ತಿವೆ. ಇದರಿಂದ ಸರಕಾರಿ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿ ಸಾಲ ಮಾಡಿದ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುವ ಪರಿಸ್ಥತಿ ಬಂದೊದಗಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
“ಸಾಲ ವಸೂಲಿಗೆ ಬ್ಯಾಂಕ್ ಅಧಿಕಾರಿಗಳು ರೈತರ ಮನೆ ಮನೆಗೆ ಅಲೆಯುತ್ತಿದ್ದಾರೆ. ಮೊದಲೇ ಬರಗಾಲದಿಂದ ಕಂಗಾಲಾದ ರೈತ ಸಾಲ ತೀರಿಸಲು ಅಸಾಧ್ಯವಿದೆ. ಖಾಸಗಿ ಮತ್ತು ಬ್ಯಾಂಕಿನವರು ಸಾಲ ಮರು ಪಾವತಿಸದಿದ್ದರೆ ಮನಬಂದಂತೆ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ನಷ್ಟವಾದರೂ ಕೇಂದ್ರ ಸರಕಾರ ಬರಗಾಲ ಘೋಷಿಸದೇ ಇರುವುದು ರೈತರಿಗೆ ಮಾಡಿರುವ ದ್ರೋಹವಾಗಿದೆ. ಕೂಡಲೇ ಕೇಂದ್ರ ಸರಕಾರ ಬರಗಾಲ ಘೋಷಿಸಿ ಪರಿಹಾರ ಒದಗಿಸಬೇಕೆಂದು” ಆಗ್ರಹಿಸಿದರು.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು. ಮಳೆ ಅಭಾವದಿಂದಾಗಿ ತೊಗರಿ, ಶೇಂಗಾ, ಕಬ್ಬು ಹಾಗೂ ಇನ್ನಿತರ ಬೆಳೆ ಬೆಳೆದ ರೈತರು ನೀರಿಲ್ಲದೆ ಪರದಾಡುವಂತಾಗಿದೆ. ನೀರಾವರಿ ಸೌಲಭ್ಯ ಹೊಂದಿರುವ ಕಷಿಕರಿಗೂ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದು ಹೇಳಿದರು.
“ಉದ್ಯೋಗ ಖಾತ್ರಿ ಯೋಜನೆಯನ್ನು ವರ್ಷಪೂರ್ತಿ ವಿಸ್ತರಿಸಬೇಕು. ರೈತರು ಗುಳೆ ಹೋಗುವುದು ತಪ್ಪಿಸಬೇಕು. ಬರಪೀಡಿತ ಗ್ರಾಮಗಳಲ್ಲಿ ಉಚಿತ ಶುದ್ಧ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಬೇಕು. ಶಾಲಾ-ಕಾಲೇಜು ಮಕ್ಕಳ ಶಾಲಾ ಶುಲ್ಕ ಮನ್ನಾ ಮಾಡಬೇಕು. ಎಲ್ಲ ಅರ್ಹ ಬಡ ಕುಟುಂಬಗಳಿಗೆ ವರ್ಷವಿಡೀ ಉಚಿತ ಪಡಿತರ ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಕೆರೆ ಜೋಡಣೆ ಯೋಜನೆ ಜಾರಿಗೊಳಿಸಿ ಶಾಶ್ವತವಾಗಿ ನೀರಿನ ಸಮಸ್ಯೆ ಮುಕ್ತಿಗೊಳಿಸಬೇಕು” ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಜನತೆ ಬರಗಾಲದಿಂದ ತತ್ತರಿಸಿದ್ದಾರೆ. ಗ್ರಾಮೀಣ ಭಾಗದ ಜನರು ಕೆಲಸ ಕಾರ್ಯಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವೇಳೆ ರಾಜ್ಯದ ಸಚಿವರು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ನಿರತರಾಗಿದ್ದಾರೆ. ಆದರೆ ತಮ್ಮ ರಾಜ್ಯದ ಜನರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಕೂಡಲೇ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಮಾಡದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಬೇಡಿಕೆಗಳು:
1.ರಾಜ್ಯದಲ್ಲಿ ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬರ ಪರಿಹಾರ ಕೊಡಬೇಕು.
2.ಕೇಂದ್ರದಿಂದ ಬರ ಪರಿಹಾರ ಪ್ರತಿ ಎಕರೆಗೆ 50 ಸಾವಿರ ರೂ. ಗಳಂತೆ ನಿಗದಿಗೊಳಿಸಿ, ರಾಜ್ಯ ಸರಕಾರ 30 ಸಾವಿರ ಹಣ ಬಿಡುಗಡೆ ಮಾಡಬೇಕು.
3.ಸಹಕಾರಿ ಬ್ಯಾಂಕ್‍ಗಳು, ಸರಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು.
4.ರೈತರು ಬೆಳೆದು, ಮಳೆಯಿಂದ ಅಥವಾ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು.
5.ರಾಜ್ಯ ಸರಕಾರವು ರೈತರಿಗೆ ಗ್ಯಾರಂಟಿ ಕೊಡಬೇಕು.
6.ಮನರೇಗಾ ಯೋಜನೆಯ ಬಾಕಿ ಹಣ ಶೀಘ್ರ ಬಿಡುಗಡೆ ಮಾಡಬೇಕು.
ಈ ಸುದ್ದಿ ಓದಿದ್ದೀರಾ? ಜೀವಮಾನದಲ್ಲಿಯೇ ಮತ್ತೆ ಅಧಿಕಾರ ಕೈಗೆ ಬಾರದು ಎಂಬ ವಾಸ್ತವ ಕುಮಾರಸ್ವಾಮಿ ನಿದ್ದೆಗೆಡಿಸಿದೆ: ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಸೇರಿದಂತೆ ಪ್ರಮುಖರಾದ ಜಿ.ಅಂಬರೀಶ್, ಅಜೀಜ್ ಜಾಗೀರ್ದಾರ್, ಕೆ. ಗಿರಿಲಿಂಗ ಸ್ವಾಮಿ, ಶಿವರಾಂ, ಅಡಿವೆಪ್ಪ, ಶಫೀಕ್ ಪಾಷಾ, ಸಿದ್ದಲಿಂಗಪ್ಪ ಇದ್ದರು.