ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಜೆಜೆಎಂ ಕಾಮಗಾರಿ ನಡೆಸದೆ ಕಳಪೆ ಕಾಮಗಾರಿ ನಡೆಸುತ್ತಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮಧೋಳ (ಬಿ) ಗ್ರಾಮ ಪಂಚಾಯತ್ ಸದಸ್ಯ ಸೋಮನಾಥ ಸ್ವಾಮಿ ಒತ್ತಾಯಿಸಿದ್ದಾರೆ.
ಬೀದರ ಜಿಲ್ಲಾ ಪಂಚಾಯತ ಆವರಣದಲ್ಲಿ ಒಂದು ದಿನ ಏಕಾಂಗಿ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದ್ದಾರೆ.
ದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲಜೀವನ ಮಿಷನ್ ಎಂಬ ಮಹತ್ವದ ಯೋಜನೆ ಜಾರಿಗೊಳಿಸಿದೆ. ಆದರೆ ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಡೆಸುತ್ತಿರುವ ಜೆಜೆಎಂ ಕಾಮಗಾರಿ ಗುತ್ತಿಗೆದಾರರು ಸರ್ಕಾರದ ಮಾರ್ಗಸೂಚಿಯ ಪ್ರಕಾರ ನಡೆಸದೆ ಬೇಕಾಬಿಟ್ಟಿಯಾಗಿ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ರಸ್ತೆ ಅಗೆದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದಾರೆ. ನೀರಿನ ಪೈಪಲೈನ್ ಅಳವಡಿಸುವ ವೇಳೆ ಇತರೆ ನೀರಿನ ಸರಬರಾಜು ಪೈಪ್ ಗಳು ಗುಂಡಿಗಳಲ್ಲಿ ಮುಚ್ಚಿ ಹೋಗುತ್ತಿವೆ. ಈ ಬಗ್ಗೆ ಗುತ್ತಿಗೆದಾರರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಸಲ ಮನವಿ ಸಲ್ಲಿಸಿದರೂ ಯಾವುದೇ ಕ್ರಮಗೊಂಡಿಲ್ಲ” ಆರೋಪಿಸಿದ್ದಾರೆ.
“ಜೆಜೆಎಂ ಕಾಮಗಾರಿ ವೇಳೆ ರಸ್ತೆ ಅಗೆದ ಮಣ್ಣು ಗ್ರಾಮದ ಮಧ್ಯೆ ಭಾಗದಲ್ಲಿ ಎಸೆಯುತ್ತಿರುವ ಬಗ್ಗೆ ಅ.21 ರಂದು ಜಿ.ಪಂ.ಗೆ ದೂರು ಸಲ್ಲಿಸಲಾಗಿತ್ತು. ಆದರೂ ಇಲ್ಲಿಯವರೆಗೆ ದೂರಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ತಮ್ಮ ಕಚೇರಿಯ ಆವರಣದಲ್ಲಿ ಏಕವ್ಯಕ್ತಿ ಧರಣಿ ಮುಖಾಂತರ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದು, ಕೂಡಲೇ ಮುಧೋಳ (ಬಿ) ಗ್ರಾಮದಲ್ಲಿ ನಡೆಯುತ್ತಿರುವ ಕಳಪೆಮಟ್ಟದ ಜೆಜೆಎಂ ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಿ ಕಾಮಗಾರಿಯ ಅನುದಾನ ತಡೆ ಹಿಡಿಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಜೀವಮಾನದಲ್ಲಿಯೇ ಮತ್ತೆ ಅಧಿಕಾರ ಕೈಗೆ ಬಾರದು ಎಂಬ ವಾಸ್ತವ ಕುಮಾರಸ್ವಾಮಿ ನಿದ್ದೆಗೆಡಿಸಿದೆ: ಸಿದ್ದರಾಮಯ್ಯ
“ಈ ಬೇಡಿಕೆ ಅತಿ ಶೀಘ್ರದಲ್ಲಿ ಈಡೇರಿಸದಿದ್ದರೆ ನ.20 ರಿಂದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ” ಎಂದು ಎಚ್ಚರಿಸದರು.