“ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಲೋಕಸಭೆಯಲ್ಲಿ ಆಡಳಿತರೂಢ ಎನ್‌ಡಿಎಗೆ ಮೂರನೇ ಎರಡರಷ್ಟು ಬಹುಮತವಿದೆ. ಹೀಗಾಗಿ ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ಪ್ರಧಾನಿ ಮೋದಿ ಜಾರಿಗೆ ತರಬೇಕು” ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸಿಕಂದರಾಬಾದ್ನಲ್ಲಿ ನಡೆದ ಮಾದಿಗ ಮೀಸಲು ಹೋರಾಟ ಸಮಿತಿಯ ರ್‍ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿಯವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವ ಜೊತೆಗೆ, “ಕರ್ನಾಟಕ, ತೆಲಂಗಾಣ ಸೇರಿದಂತೆ ಹಲವು ಕಡೆ ಒಳಮೀಸಲಾತಿಗಾಗಿ ಒತ್ತಾಯಿಸಲಾಗುತ್ತಿದೆ. ಮಾದಿಗ ಸಮುದಾಯದ ಬೇಡಿಕೆಯನ್ನು ಈಡೇರಿಸಲು ಅಧ್ಯಯನ ಸಮಿತಿ ರಚಿಸಲಾಗುತ್ತದೆ” ಎಂದಿದ್ದರು. ಈ ಹಿನ್ನೆಲೆಯಲ್ಲಿ ಖರ್ಗೆಯವರು ಪ್ರತಿಕ್ರಿಯಿಸಿದ್ದಾರೆ.
“ನೀವು ಅಧಿಕಾರಕ್ಕೆ ಬಂದು 10 ವರ್ಷವಾಯಿತು. ಒಳಮೀಸಲಾತಿ ಮಾಡದಂತೆ ನಿಮ್ಮನ್ನು ತಡೆಯುವವರು ಯಾರು? ಯಾರೂ ಇಲ್ಲ. ಆದರೆ ನೀವು ಆ ಕೆಲಸ ಮಾಡಲಿಲ್ಲ. ಈಗ ಸಮಿತಿ ರಚಿಸುವುದಾಗಿ ಹೇಳಿದ್ದೀರಿ. ನಿಮಗೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವಿದೆ. ಸುಗ್ರೀವಾಜ್ಞೆ ತಂದು ಒಳಮೀಸಲಾತಿ ಜಾರಿಗೊಳಿಸಿ. ತೆಲಂಗಾಣ ರಾಜ್ಯ ರಚಿಸುವುದಾಗಿ ಕಾಂಗ್ರೆಸ್ ನೀಡಿದ ಭರವಸೆಯನ್ನು ನಾವು ಈಡೇರಿಸಿದ್ದೇವೆ, ನಿಮ್ಮ ಕೈಯಲ್ಲಿ ಅಧಿಕಾರವಿದೆ. ನಿಮ್ಮ ಬಳಿ ಬಹುಮತವಿದೆ” ಎಂದು ಸವಾಲು ಹಾಕಿದ್ದಾರೆ.
ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಪ್ರತಿಯೊಬ್ಬ ನಾಗರಿಕರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡುವುದಾಗಿ ಹೇಳಿದ್ದಿರಿ. ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದಿರಿ. ಆದರೆ ಅದ್ಯಾವುದೂ ಆಗಲಿಲ್ಲ” ಎಂದು ಟೀಕಿಸಿದ್ದಾರೆ.
“ನಾವು ಈ ದೇಶದ ಸಂವಿಧಾನವನ್ನು ಮಾಡಿ ಎಲ್ಲರಿಗೂ ಸಮಾನ ಪಾಲು ನೀಡಿದ್ದೇವೆ. ಕೆಸಿಆರ್ ಅಥವಾ ಮೋದಿ ಏನು ಕೊಟ್ಟಿದ್ದಾರಾ? ಇಂಥವರು ಜನರನ್ನು ಪ್ರಚೋದಿಸಿ ದಾರಿ ತಪ್ಪಿಸುತ್ತಿದ್ದಾರೆ” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿರಿ: ಒಳಮೀಸಲಾತಿ: ಮಾದಿಗರಿಗೆ ಮತ್ತೆ ಮಹಾವಂಚನೆ ಮಾಡುತ್ತಿರುವ ಮೋದಿ
ಮಾದಿಗ, ಮಾಲ ಅಥವಾ ಇತರೆ ಪರಿಶಿಷ್ಟ ಜಾತಿಯವರನ್ನು ಅಭಿವೃದ್ಧಿ ಪಡಿಸಲು ನಾವು ಬದ್ಧರಾಗಿದ್ದೇವೆ. ಪಕ್ಷವು ತನ್ನ ಮಾತಿನಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಳಮೀಸಲಾತಿ ಜಾರಿಗೊಳಿಸಬೇಕೆಂದರೆ ಸಂವಿಧಾನದ 341ನೇ ವಿಧಿಗೆ ತಿದ್ದುಪಡಿ ತಂದು 341 (3) ಸೇರಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಕ್ರಮ ಜರುಗಿಸಬೇಕಿತ್ತು. ಜೊತೆಗೆ ಒಳಮೀಸಲಾತಿಗೆ ಸಂಬಂಧಿಸಿದ ಕಾನೂನುಗಳನ್ನು 9ನೇ ಶೆಡ್ಯೂಲ್‌ಗೆ ಸೇರಿಸಿ ನ್ಯಾಯಾಧೀಕರಣದ ಅಪಾಯದಿಂದಲೂ ತಪ್ಪಿಸಬಹುದಿತ್ತು. ಆದರೆ ಅದ್ಯಾವನ್ನೂ ಮಾಡಲಿಲ್ಲ ಎಂಬ ಆರೋಪಗಳು ಮೋದಿ ಸರ್ಕಾರದ ಮೇಲಿವೆ.
ಯಾವುದೇ ಒತ್ತಾಯ, ಸಮಿತಿಯ ಶಿಫಾರಸ್ಸು ಇಲ್ಲದಿದ್ದರೂ ಬಲಾಢ್ಯ ಜಾತಿಗಳಿಗೆ ’ಆರ್ಥಿಕವಾಗಿ ಹಿಂದುಳಿದ ವರ್ಗ’ (ಇಡಬ್ಲ್ಯುಎಸ್) ಎಂಬುದಾಗಿ ಮೀಸಲಾತಿಯನ್ನು ನೀಡಲಾಯಿತು. ಇದರ ಜಾರಿಗೆ ತೆಗೆದುಕೊಂಡಿದ್ದು ಒಂದು ವಾರವಷ್ಟೇ. ಆದರೆ ಮೂವತ್ತು ವರ್ಷಗಳಿಂದ ಒಳಮೀಸಲಾತಿ ಹೋರಾಟ ನಡೆಯುತ್ತಿದ್ದರೂ ಮೋದಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ. ಮಾದಿಗ ಸಮುದಾಯದ ಬಹು ವರ್ಷಗಳ ಬೇಡಿಕೆಗೆ ಕಾಂಗ್ರೆಸ್ ಸ್ಪಷ್ಟ ನಿಲುವು ತಾಳುತ್ತಿಲ್ಲ ಎಂಬ ಆಕ್ರೋಶವೂ ಇದೆ.