ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ, ವಿಜಯಪುರ ಘಟಕ, ʼಶಾಂತಿ ಸೌಹಾರ್ದತೆ ಸಹಬಾಳ್ವೆ ನಮ್ಮ ಪರಂಪರೆ ಅದನ್ನು ಉಳಿಸೋಣ ಮತ್ತು ಬೆಳೆಸೋಣ’ ಎಂಬ ಘೋಷವಾಕ್ಯದಡಿಯಲ್ಲಿ ನ.19ರಿಂದ 25ರವರೆಗೆ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಕುರಿತು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕದ ಅಧ್ಯಕ್ಷ ಅಬ್ದುಲ್ ಅಮಿದ್ ಜಾವೇದ್ ಮಾತನಾಡಿ, ‘ಈ ಅಭಿಯಾನದ ಮುಖಾಂತರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ವಾತಾವರಣ ನಿರ್ಮಿಸಲು ಸಾಧ್ಯ ಎಂಬ ಧೋರಣೆ ಮೂಡಿಸುವು ಆಶಯ ನಮ್ಮದು. ಭಾರತವು ಹಲವು ರಾಜ್ಯ, ಭಾಷೆ, ಧರ್ಮ ಹಾಗೂ ಸಂಸ್ಕೃತಿಯ ಬೀಡು. ಏಕಸಂಸ್ಕೃತಿ ಈ ದೇಶಕ್ಕೂ ಹಾಗೂ ರಾಜ್ಯಕ್ಕೂ ಅನ್ಯವಾಗಿದೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ’ ಎಂದರು.
‘ಪ್ರತಿ 10 ಕಿ.ಮೀಗೆ ವೈವಿಧ್ಯಮಯವಾದ ಸಂಸ್ಕೃತಿಯನ್ನು ನಾವು ಕಾಣಬಹುದು. ಬಹು ಸಂಸ್ಕೃತಿ ಈ ದೇಶದ ಜೀವಾಳ. ಇಲ್ಲಿನ ಭಿನ್ನತೆಯನ್ನು ಎತ್ತಿ ಹಿಡಿದು ಅದರಲ್ಲಿ ಸೌಹಾರ್ದತೆಯ, ಸಹಬಾಳ್ವೆಯ ಪಾಠಗಳನ್ನು ಹುಡುಕುವ ಮೂಲಕ ಒಂದು ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.
‘ವಿಚಾರ ಸಂಕಿರಣ, ಜನಜಾಗೃತಿ, ಚಾವಡಿ ಚರ್ಚೆ ಮುಂತಾದ ಹಲವಾರು ಕಾರ್ಯಕ್ರಮಗಳ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಎಲ್ಲಾ ಸಮಾನಮನಸ್ಕರು ಅಭಿಯಾನದಲ್ಲಿ ಭಾಗವಹಿಸಿ’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.