ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಕ್ರಿಕೆಟ್ ಬಿಟ್ಟು ರಾಜಕೀಯಕ್ಕೆ ಸೇರ್ಪಡೆಯಾಗಲು ಮುಂದಾಗಿದ್ದಾರೆ.
2024ರ ಜನವರಿ 7 ರಂದು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಆಡಳಿತಾರೂಢ ಬಾಂಗ್ಲಾದೇಶ ಅವಾಮಿ ಲೀಗ್‌ನಿಂದ ನಾಮನಿರ್ದೇಶನವನ್ನು ಬಯಸಿ ಔಪಚಾರಿಕವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.
ಶಕೀಬ್ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಶನಿವಾರದಂದು ಪಕ್ಷದಿಂದ ನಾಮನಿರ್ದೇಶನ ಪತ್ರಗಳನ್ನು ತೆಗೆದುಕೊಂಡಿದ್ದಾರೆ. ಅವರು ಸೆಲೆಬ್ರಿಟಿ ಮತ್ತು ದೇಶದ ಯುವಜನರಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿದ್ದಾರೆ ಎಂದು ಅವಾಮಿ ಲೀಗ್ ಜಂಟಿ ಕಾರ್ಯದರ್ಶಿ ಬಹಾವುದ್ದೀನ್ ನಾಸಿಮ್ ತಿಳಿಸಿದ್ದಾರೆ.
ಶಕೀಬ್ ತಮ್ಮ ತವರು ಜಿಲ್ಲೆ ಮಗರಾದಲ್ಲಿ ಅಥವಾ ರಾಜಧಾನಿ ಢಾಕಾದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ ಎಂದು ನಾಸಿಮ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ | ದ್ರಾವಿಡ್, ಕೊಹ್ಲಿ,ಶಮಿ ಯಾರಿಗಾಗಿ ಈ ಬಾರಿಯ ಕಪ್; ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿ ಕ್ರಿಕೆಟ್ ಜಗತ್ತು
ಶಕೀಬ್ ಅಲ್ ಹಸನ್ ಗಾಯಗೊಂಡಿರುವ ಕಾರಣ ನ್ಯೂಜಿಲೆಂಡ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಲ್ಲಿ ಆಡುವುದು ಅನುಮಾನವಿದೆ.
ಶಕೀಬ್ ಅವರ ಉಮೇದುವಾರಿಕೆಯನ್ನು ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಆಡಳಿತ ಪಕ್ಷದ ಸಂಸದೀಯ ಮಂಡಳಿಯು ದೃಢಪಡಿಸಬೇಕಾಗಿದೆ.
ಶೇಖ್ ಹಸೀನಾ ಅವರು ಕಳೆದ 15 ವರ್ಷಗಳಿಂದ ಸುಮಾರು 17 ಕೋಟಿ ಜನಸಂಖ್ಯೆ ಜನರಿರುವ ದಕ್ಷಿಣ ಏಷ್ಯಾದ ರಾಷ್ಟ್ರವನ್ನು ಮುನ್ನಡೆಸಿದ್ದಾರೆ. ಇವರ ಮೇಲೆ ಭ್ರಷ್ಟಾಚಾರ, ದಬ್ಬಾಳಿಕೆಯ ಆಡಳಿತದ ಆರೋಪವಿದೆ.
ಬಾಂಗ್ಲಾ ದೇಶದ ಪ್ರಮುಖ ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಪ್ರತಿಪಕ್ಷಗಳ ಬಹಿಷ್ಕಾರ ಮುಂದುವರಿದರೆ ಅವರು ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ.
ಬಾಂಗ್ಲಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫೆ ಮೊರ್ತಾಜಾ ಕೂಡ 2018 ರಲ್ಲಿ ರಾಜಕೀಯ ಸೇರಿ ಸಂಸದರಾಗಿ ಆಯ್ಕೆಯಾಗಿದ್ದರು.