ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಶನಿವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ನಡೆಸಿದ ಮಾರಣಾಂತಿಕ ಹಲ್ಲೆ ಪೂರ್ವ ನಿಯೋಜಿತವಾಗಿದೆ ಎಂದು ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಹೇಳಿದರು.
“ಕಳೆದ ಚುನಾವಣೆಯಲ್ಲಿ ಚಿತ್ತಾಪುರ ವಿಧಾನ ಸಭಾ ಕ್ಷೇತ್ರದಿಂದ ಹಾಲಿ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ವಿರುದ್ಧ ಸ್ಪರ್ಧಿಸಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆ ಪೂರ್ವ ನಿಯೋಜಿತ ಕೃತ್ಯ. ಚಿತ್ತಾಪುರ ತಾಲೂಕಿನ ಮಾಲಗತ್ತಿ ಸಮೀಪದ ತಮ್ಮ ಫಾರ್ಮ್ ಹೌಸ್ ಮನೆಯಿಂದ ರಾತ್ರಿ 1.30 ಗಂಟೆ ಸುಮಾರಿಗೆ ಕಲಬುರಗಿ ಕಡೆಗೆ ಹೊರಟಿದ್ದಾಗ ದುಷ್ಕರ್ಮಿಗಳು ಮದ್ಯದ ಬಾಟಲಿ, ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದರು.
“ಸಂವಿಧಾನ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಉದ್ದುದ ಭಾಷಣ ಮಾಡುತ್ತಾ ರಾಜ್ಯ ಸುತ್ತುವ ಜಿಲ್ಲಾ ಉಸ್ತುವಾರಿ ಅವರ ಸ್ವಕ್ಷೇತ್ರದಲ್ಲೇ ಮುಖಂಡರಿಗೆ ರಕ್ಷಣೆ ಇಲ್ಲದಂತಾಗಿದ್ದು ನಿಜಕ್ಕೂ ದುರದೃಷ್ಟಕರ ಸಂಗತಿ, ಚುನಾವಣೆಯ ಮುಗಿದಾಗಿನಿಂದ ಇಲ್ಲಿಯವರೆಗೂ ಮಣಿಕಂಠ ರಾಥೋಡ್ ಮೇಲೆ 18ಕ್ಕೂ ಹೆಚ್ಚು ಸುಳ್ಳು ಕೇಸ್ ದಾಖಲಿಸಲಾಗಿದೆ. ಮಣಿಕಂಠ ರಾಥೋಡ್ ಅವರ ಭದ್ರತೆಯ ಹಿತದೃಷ್ಟಿಯಿಂದ ಗನ್ ಮ್ಯಾನ್ ಗಾಗಿ ಮನವಿ ಮಾಡಿದರು ಸಹ ಗನ್ ಮ್ಯಾನ್ ನೀಡುತ್ತಿಲ್ಲ,.ಸಚಿವ ಪ್ರಿಯಾಂಕ್ ಖರ್ಗೆ ಅವರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ
“ರಾಜ್ಯದ ಸರಕಾರದ ಮತ್ತು ಸಚಿವರ ದುರಾಡಳಿತದ ವಿರುದ್ಧ ಧ್ವನಿ ಎತ್ತಿರುವ ಮುಖಂಡರು, ಕಾರ್ಯಕರ್ತರ ಮೇಲೆ ನಿರಂತರ ಸುಳ್ಳು ಕೇಸ್ ದಾಖಲು ಮಾಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರು ಮೇಲೆ ನಿರಂತರ ಹಲ್ಲೆಗಳನ್ನನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎನಿಸುತ್ತದೆ. ಮಣಿಕಂಠ ರಾಥೋಡ್ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರ ಮುಂದೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.