ಬಿಜೆಪಿ ಹೇಳಿದರೆ ಎಚ್ ಡಿ ಕುಮಾರಸ್ವಾಮಿ ಚಡ್ಡಿನೂ ಹಾಕುತ್ತಾರೆ, ದತ್ತ ಮಾಲೆ ಸಹ ಹಾಕಿಕೊಳ್ಳುತ್ತಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಹಲಗೂರಿನಲ್ಲಿ ಬರ ಅಧ್ಯಯನ ವೇಳೆ ಮಾತನಾಡಿದ ಅವರು, “ಕುಮಾರಸ್ವಾಮಿಗೆ ರಾಜ್ಯದ ಜವಾಬ್ದಾರಿ ಹಾಗೂ ಜನರ ಸಮಸ್ಯೆ ಮುಖ್ಯ ಅಲ್ಲ. ಕುಮಾರಸ್ವಾಮಿ ಯಾವತ್ತೂ ಜನರ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಎರಡು ಮೂರು ತಿಂಗಳಿನಿಂದ ನಾಲಿಗೆ ಮೇಲೆ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಕುಮಾರಸ್ವಾಮಿ ಮಾತನಾಡುವುದು ಸರಿ ಅಂದರೆ ನಾನು ಅವರಪ್ಪನ ರೀತಿ ಮಾತಾಡುತ್ತೇನೆ. ಅವರಿಗೆ ಯಾವ ಸಚಿವರು ಕರೆ ಮಾಡಿದ್ದಾರೆ ಅಂತ ದಾಖಲೆ ಬಿಡುಗಡೆ ಮಾಡಲಿ. ಅವರ ಬಳಿ ಪೆನ್‌ಡ್ರೈವ್ ಬಿಡುಗಡೆ ಮಾಡಿ ಅಂತ ಹೇಳಿದ್ದೆವು. ಆದರೆ ಈಗ ಮಂತ್ರಿಗಳು ಕರೆ ಮಾಡಿ ಬಿಡುಗಡೆ ಮಾಡಬೇಡಿ ಅಂತ ಹೇಳಿದ್ದಾರೆ ಎನ್ನುತ್ತಾರೆ. ಅದ್ಯಾವ ಮಂತ್ರಿ ಅಂತ ಹೇಳಲಿ” ಎಂದು ಆಗ್ರಹಿಸಿದರು.
“ಕುಮಾರಸ್ವಾಮಿ ನಾವು ಜಾತ್ಯತೀತ ಅಂದರು. ಮುಸ್ಲಿಂ, ದಲಿತ, ಹಿಂದುಳಿದವರ ಪರ ಎಂದು ಜಾತ್ಯತೀತ ಅಂತ ಹೆಸರಿಟ್ಟುಕೊಂಡಿದ್ದರು. ಈಗ ದತ್ತ ಮಾಲೆ ಹಾಕುತ್ತೀನಿ ಎನ್ನುತ್ತಾರೆ. ಯಾವುದನ್ನು ಹಾಕಿಕೊಳ್ಳುತ್ತಾರೋ ಯಾರ ಪರ, ಯಾವ ಸಮಾಜದ ಪರ ನಿಲ್ಲುತ್ತಾರೋ ಆ ದೇವರೇ ಬಲ್ಲ” ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ’
ರಾಜ್ಯ ಸರ್ಕಾರವೇ ರೈತರ ನೆರವಿಗೆ ನಿಲ್ಲಲಿದೆ
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಮಳವಳ್ಳಿ ತಾಲ್ಲೂಕಿನ ಹಲಗೂರು ಹಾಗೂ ಕ್ಯಾತನಹಳ್ಳಿ ಗ್ರಾಮದಲ್ಲಿ ಬರ ಪರಿಸ್ಥಿತಿಯಿಂದ ರಾಗಿ ಹಾಗೂ ಮುಸುಕಿನ ಜೋಳ ಬೆಳೆ ಹಾನಿ ಉಂಟಾಗಿರುವ ಸ್ಥಳ ವೀಕ್ಷಿಸಿ ರೈತರಿಗೆ ಧೈರ್ಯ ತುಂಬಿ, ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
“ಈಗಾಗಲೇ ಕೇಂದ್ರ ತಂಡ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದೆ.
ಇಂದಿನ ವರದಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಕೇಂದ್ರ ಸರ್ಕಾರದ ಹಣ ಬಿಡುಗಡೆ ಮಾಡುವುದು ತಡವಾದರೆ, ರಾಜ್ಯ ಸರ್ಕಾರವೇ ರೈತರ ನೆರವಿಗೆ ನಿಲ್ಲಲಿದೆ” ಎಂದರು.
“ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 18 ಸಾವಿರ ಕೋಟಿ ಅನುದಾನ ಕೇಳಿದ್ದೇವೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಹಂತ ಹಂತವಾಗಿ ಪರಿಹಾರ ವಿತರಿಸುತ್ತೇವೆ. ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತದೆ. ಕೇಂದ್ರ ತಂಡ ಬೆಳೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ರಾಜ್ಯ ಸರ್ಕಾರದ ಜನರ ಪರ ಕೆಲಸ ಮಾಡುತ್ತದೆ” ಎಂದು ತಿಳಿಸಿದರು.