ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ’

Date:

ಸರ್ಕಾರ ಆರು ತಿಂಗಳು ಮುಗಿಸಿ, ತನ್ನದು ಅನನ್ಯ ಸಾಧನೆ ಎಂದು ಬಣ್ಣಿಸಿಕೊಳ್ಳುತ್ತಿದೆ. ಸರ್ಕಾರದ ಸಾಧನೆಗಳನ್ನು ಅವಲೋಕಿಸಿ, ಪ್ರಶ್ನಿಸಿ ಸತ್ಯವನ್ನು ಜನರ ಮುಂದಿಡಬೇಕಾದ ವಿರೋಧ ಪಕ್ಷದ ನಾಯಕರು,  ಪರಸ್ಪರ ಟೀಕಾ ಪ್ರಹಾರಗಳಿಂದ ಮಾಧ್ಯಮಗಳಲ್ಲಿ ಮಾತ್ರ ಜೀವಂತವಿದ್ದಾರೆ. ಮಾಧ್ಯಮಗಳು ಕೂಡ ಇದೇ ಮಹತ್ವದ ಸುದ್ದಿ ಎಂಬಂತೆ, ಪರ-ವಿರೋಧ ಟೀಕಾಸ್ತ್ರಗಳನ್ನಷ್ಟೇ ಪ್ರಕಟಿಸುತ್ತಾ, ತಮ್ಮ ಜವಾಬ್ದಾರಿ ಮರೆತು ಕೂತಿವೆ. ಎಲ್ಲರೂ ಸೇರಿ ಜನರನ್ನು ಕತ್ತಲಲ್ಲಿಟ್ಟಿದ್ದಾರೆ. ದ್ರೋಹ ಬಗೆಯುತ್ತಿದ್ದಾರೆ. ಒಟ್ಟಿನಲ್ಲಿ ಯಾವ ಸರ್ಕಾರ ಬಂದರೂ ರಾಗಿ ಬೀಸೋದು ತಪ್ಪಲ್ಲ ಎನ್ನುವುದು ನಿಜವಾಗುತ್ತಿದೆ.

135 ಶಾಸಕರೊಂದಿಗೆ ಭಾರೀ ಬಹುಮತದಿಂದ ಅಧಿಕಾರಕ್ಕೇರಿದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಆರು ತಿಂಗಳು ಮುಗಿಸಿದೆ. ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡಿತು ಎಂದು ಜನ ಕೇಳಿಕೊಳ್ಳುವುದಕ್ಕೂ ಮೊದಲೇ; ಎಂತಹ ಆಡಳಿತ ನೀಡಿತು ಎಂದು ರಾಜಕೀಯ ವಿಶ್ಲೇಷಕರು ಪರಾಮರ್ಶಿಸುವುದಕ್ಕೂ ಮುನ್ನವೇ; ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ನಮ್ಮದು ‘ಕರ್ನಾಟಕ ಮಾದರಿ’ ಸರ್ಕಾರ ಎಂದು ಸಾರಿದೆ. ಆರು ತಿಂಗಳ ಆಡಳಿತ ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದೇವೆ ಎಂದು ಹೇಳಿಕೊಂಡಿದೆ. ತನ್ನ ಸಾಧನೆ ಸಾರುವ ಒಂದು ಪುಟದ ಜಾಹೀರಾತು ಇಂದಿನ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಸರ್ಕಾರ ಪ್ರಕಟಿಸಿರುವ ಜಾಹೀರಾತಿನಲ್ಲಿ, ಕೇವಲ ಆರು ತಿಂಗಳಲ್ಲಿಯೇ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳು, ಕಾರ್ಯಕ್ರಮಗಳು ಫಲಾನುಭವಿಗಳನ್ನು ತಲುಪಿರುವುದನ್ನು ಅಂಕಿ-ಅಂಶಗಳ ಮೂಲಕ ದಾಖಲಿಸಲಾಗಿದೆ. ಸಾಧನೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಜನರಿಂದ ಆಯ್ಕೆಯಾದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವೆ, ಜನಪರ ಆಡಳಿತ ನೀಡುತ್ತಿದ್ದೇವೆ, ಮಾದರಿ ಕರ್ನಾಟಕವನ್ನು ಮುನ್ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದೆ. ಅದನ್ನು ಜಾಹೀರಾತಿನ ಮೂಲಕ ಮನದಟ್ಟು ಮಾಡಲು ನೋಡಿದೆ.

ಇದು ನಿಜವೇ? ಸರ್ಕಾರ ಹೇಳಿದ್ದನ್ನು ಜನ ನಂಬಬೇಕೇ? ಇದರ ಸತ್ಯಾಸತ್ಯತೆಯನ್ನು ಅರಿಯುವುದು ಹೇಗೆ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತದಿಂದ ಒಂದು ಪಕ್ಷವನ್ನು ಜನ ಆಯ್ಕೆ ಮಾಡಿ ಅಧಿಕಾರ ನಡೆಸಲು ಅನುವು ಮಾಡಿಕೊಡುವಂತೆ; ಆಡಳಿತ ಪಕ್ಷದ ಲೋಪದೋಷಗಳನ್ನು ಎತ್ತಿ ತೋರುವ, ದಾರಿ ತಪ್ಪಿ ನಡೆದಾಗ ತಿದ್ದುವ, ನಿದ್ರೆಗೆ ಜಾರಿದಾಗ ಎಚ್ಚರಿಸುವ, ರಚನಾತ್ಮಕ ಟೀಕೆಗಳಿಂದ ಸರ್ಕಾರಕ್ಕೆ ಅಂಕುಶ ಹಾಕುವ, ಜನರ ನೋವಿಗೆ ದನಿಯಾಗುವ, ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ವಿರೋಧ ಪಕ್ಷ ಮಾಡಬೇಕಾಗುತ್ತದೆ. ಜೊತೆಗೆ ಸುದ್ದಿ ಮಾಧ್ಯಮಗಳು ಕೂಡ ವಿರೋಧ ಪಕ್ಷದಂತೆ ವರ್ತಿಸಿ ತನ್ನ ಓದುಗರಿಗೆ/ವೀಕ್ಷಕರಿಗೆ ಸತ್ಯವನ್ನು ಸಾರಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಜೀವಂತವಿದೆ ಎಂದು ಸಾಬೀತು ಪಡಿಸಬೇಕಾಗುತ್ತದೆ.

ಆದರೆ, ಸರ್ಕಾರ ರಚನೆಯಾಗಿ ಆರು ತಿಂಗಳಾದರೂ ಕೃಷ್ಣಬೈರೇಗೌಡರ ಕಂದಾಯ ಇಲಾಖೆ, ಪ್ರಿಯಾಂಕ್ ಖರ್ಗೆಯವರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಖಾತೆಗಳು ಮಾತ್ರ ಉಸಿರಾಡುತ್ತಿವೆ. ಐದು ಗ್ಯಾರಂಟಿಗಳಲ್ಲಿ ಎರಡು ಜನರ ಕಣ್ಣಿಗೆ ಕಾಣುತ್ತಿವೆ. ಮಿಕ್ಕ ಮೂರು ಸಮಜಾಯಿಷಿಯಲ್ಲಿ ಸರಿದುಹೋಗುತ್ತಿವೆ. ಇನ್ನು ಸಚಿವರು, ಸರ್ಕಾರ ರಚನೆಯಾಗಿ ಆರು ತಿಂಗಳಾದರೂ, ಇವತ್ತಿಗೂ ಹಾರ-ತುರಾಯಿಗಳಲ್ಲಿ ಭಟ್ಟಂಗಿಗಳ ಭೋಪರಾಕಿನಲ್ಲಿ, ಸಭೆ-ಸನ್ಮಾನಗಳಲ್ಲಿಯೇ ತೇಲಾಡುತ್ತಿದ್ದಾರೆ. ಜೊತೆಗೆ, ಸಚಿವರಿಗೆ ತಮ್ಮ ಇಲಾಖೆಗಳ ಬಗೆಗಿರುವ ಅಜ್ಞಾನವೋ, ಅಧಿಕಾರಿಗಳ ಅಸಹಕಾರವೋ, ಅನುದಾನದ ಕೊರತೆಯಿಂದಲೋ ಯಾವ ಹೊಸ ಯೋಜನೆಗಳು, ಕಾರ್ಯಕ್ರಮಗಳನ್ನು ಕೊಡಲಾಗದೆ ಕಂಗೆಟ್ಟಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾತೆತ್ತಿದರೆ ಸಾವಿರಾರು ಕೋಟಿಗಳ ಹೊಸ ಯೋಜನೆಗಳ ಹೇಳಿಕೆಗಳು, ಸಭೆಗಳು, ಸುದ್ದಿಗಳಿಂದ ಸದ್ದು ಮಾಡುತ್ತಿದ್ದಾರೆ. ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿದ್ದರೂ, ನಗರದ ಸಮಸ್ಯೆಗಳು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇವೆ. ಮಹತ್ವದ ಗೃಹ ಖಾತೆ ಹೊಂದಿರುವ ಡಾ. ಜಿ. ಪರಮೇಶ್ವರ್ ಕಾರ್ಯವೈಖರಿಗೆ ಜನ ಬೇಸತ್ತಿದ್ದಾರೆ. ಇಂಧನದಂತಹ ತೂಕದ ಖಾತೆ ನಿರ್ವಹಿಸುತ್ತಿರುವ ಕೆ.ಜೆ ಜಾರ್ಜ್, ಇದ್ದೂ ಇಲ್ಲದಂತಿದ್ದಾರೆ. ಸರ್ಕಾರ ಗ್ಯಾರಂಟಿಗಳನ್ನು ಸಮರ್ಥವಾಗಿ ನಿಭಾಯಿಸಲಾಗದೆ, ಕೇಂದ್ರದೊಂದಿಗೆ ಸಮನ್ವತೆ ಸಾಧಿಸಲಾಗದೆ, ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿರುವುದು ಜನರ ಗಮನಕ್ಕೆ ಬರತೊಡಗಿದೆ. ಕಾಂಗ್ರೆಸ್ ಸರ್ಕಾರದ ಬಗ್ಗೆ ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು ಇಟ್ಟ ವಿಶ್ವಾಸ ದಿನದಿಂದ ದಿನಕ್ಕೆ ಕಮರುತ್ತಿದೆ.

ಇವೆಲ್ಲವುಗಳ ನಡುವೆಯೇ, ಸರ್ಕಾರ ಆರು ತಿಂಗಳು ಮುಗಿಸಿ, ತನ್ನದು ಅನನ್ಯ ಸಾಧನೆ ಎಂದು ಬಣ್ಣಿಸಿಕೊಳ್ಳುತ್ತಿದೆ. ಸರ್ಕಾರ ಹೇಳಿದ್ದನ್ನು ನಂಬಬೇಕೇ ಎನ್ನುವುದು ಜನರ ಪ್ರಶ್ನೆಯಾಗಿದೆ. ಆದರೆ, ಸರ್ಕಾರದ ಸಾಧನೆಗಳನ್ನು ಸಾವಧಾನವಾಗಿ ಅವಲೋಕಿಸಿ, ಪ್ರಶ್ನಿಸಿ ಸತ್ಯವನ್ನು ಜನರ ಮುಂದಿಡಬೇಕಾದ ವಿರೋಧ ಪಕ್ಷದ ನಾಯಕರು, ವೈಯಕ್ತಿಕ ದ್ವೇಷಾಸೂಯೆಗಳ ದಳ್ಳುರಿಯಲ್ಲಿ ಬೇಯುತ್ತಿದ್ದಾರೆ. ಸಾರ್ವಜನಿಕ ಸಭ್ಯತೆ ಮರೆತು ಕೀಳುಮಟ್ಟದ ಭಾಷೆ ಬಳಸಿ ವ್ಯಕ್ತಿನಿಂದನೆಗಿಳಿದಿದ್ದಾರೆ. ಪರಸ್ಪರ ಟೀಕಾ ಪ್ರಹಾರಗಳಿಂದ ಮಾಧ್ಯಮಗಳಲ್ಲಿ ಮಾತ್ರ ಜೀವಂತವಿದ್ದಾರೆ. ಮಾಧ್ಯಮಗಳು ಕೂಡ ಇದೇ ಮಹತ್ವದ ಸುದ್ದಿ ಎಂಬಂತೆ, ಪರ-ವಿರೋಧ ಟೀಕಾಸ್ತ್ರಗಳನ್ನಷ್ಟೇ ಪ್ರಕಟಿಸುತ್ತಾ, ತಮ್ಮ ಜವಾಬ್ದಾರಿ ಮರೆತು ಕೂತಿವೆ. ಇದು ಆಡಳಿತ ಸರ್ಕಾರಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಎಲ್ಲರೂ ಸೇರಿ ಜನರನ್ನು ಕತ್ತಲಲ್ಲಿಟ್ಟಿದ್ದಾರೆ. ದ್ರೋಹ ಬಗೆಯುತ್ತಿದ್ದಾರೆ. ಒಟ್ಟಿನಲ್ಲಿ ಯಾವ ಸರ್ಕಾರ ಬಂದರೂ ರಾಗಿ ಬೀಸೋದು ತಪ್ಪಲ್ಲ ಎನ್ನುವುದು ನಿಜವಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಾದರೂ ಈ ನಾಯಕರಿಗೆ ‘ಬುದ್ಧಿ’ ಕಲಿಸಲಿದೆಯೇ, ಕಾದು ನೋಡಬೇಕಾಗಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?

ಅಪ್ಪನ ಆಸ್ಥಾನವನ್ನೇ ಆಕ್ರಮಿಸಿಕೊಂಡು ಅಟ್ಟಹಾಸ ಮೆರೆದ ವಿಜಯೇಂದ್ರ, ತಮ್ಮ ರಾಜಕಾರಣದುದ್ದಕ್ಕೂ ಹೊಂದಾಣಿಕೆಯಲ್ಲಿಯೇ...

ಈ ದಿನ ಸಂಪಾದಕೀಯ | ಈ ಪರಿ ನರಮೇಧದ ನಂತರವೂ ಮೇಲೇಳದೇಕೆ ನೆತ್ತರದಾಹಿಗಳ ತಕ್ಕಡಿ?

ಗಾಝಾ ಪಟ್ಟಿಯ ಉತ್ತರದಿಂದ ದಕ್ಷಿಣಕ್ಕೆ ತೆರಳುವಂತೆ ತಾಕೀತು ಮಾಡಿ, ದಕ್ಷಿಣದ ಖಾನ್...

ಈ ದಿನ ಸಂಪಾದಕೀಯ | ಕುಮಾರಸ್ವಾಮಿ ಪೂರ್ವ ತಯಾರಿ ಇಲ್ಲದೆ ಆರೋಪ ಮಾಡ್ತಿದ್ದಾರಾ?

ಬಿಜೆಪಿ ಜೊತೆ ಮೈತ್ರಿಯ ನಂತರ ಬಿಜೆಪಿ ನಾಯಕರಿಗಿಂತ ಎಚ್‌ ಡಿ ಕುಮಾರಸ್ವಾಮಿಯವರೇ...

ಈ ದಿನ ಸಂಪಾದಕೀಯ | ಇಎಸಿಗೆ ಅದಾನಿ ಆಪ್ತನ ನೇಮಕ; ಪ್ರಧಾನಿ ಮೋದಿ ಯಾರ ಪ್ರಧಾನ ಸೇವಕ?

ಈ ದೇಶದ ಜನರ ಪ್ರಧಾನ ಸೇವಕ ತಾನು ಎಂದು ಹೇಳಿಕೊಳ್ಳುವ ಪ್ರಧಾನಿ...