ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನದಲ್ಲಿ ಮಂಗಳವಾರ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. “ಬಿಜೆಪಿಯಿಂದ ಬಿ ವೈ ವಿಜಯೇಂದ್ರ ಹಾಗೂ ಜೆಡಿಎಸ್‌ನಿಂದ ಎಚ್ ಡಿ ಕುಮಾರಸ್ವಾಮಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಇಬ್ಬರೂ ಡೈನಾಮಿಕ್ ನಾಯಕರು. ಎಲ್ಲೋ ಒಂದು ಕಡೆ ಹೊಂದಾಣಿಕೆಯಿಂದ ನಮಗೆ ಶಕ್ತಿ ಸಿಕ್ಕಂತಾಗಿದ್ದು, ಒಟ್ಟಾಗಿ ಕೆಲಸ ಮಾಡುವ ಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ” ಎಂದರು.
“ಎಚ್ ಡಿ ಕುಮಾರಸ್ವಾಮಿ ಅವರ ಮನೆಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದ ಹಿನ್ನೆಲೆಯಲ್ಲಿ ದಂಡ ಕಟ್ಟಿದ್ದಾರೆ. ಇಂತಹ ಸಣ್ಣಪುಟ್ಟ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್ ನಾಯಕರ ಮನಸ್ಥಿತಿ ತೋರಿಸುತ್ತದೆ” ಎಂದರು.
“ರಾಜ್ಯದ ಕಾಂಗ್ರೆಸ್ ನಾಯಕರು ಹಲವು ಭೂ–ಹಗರಣಗಳಲ್ಲಿ ಪಾಲುದಾರರಾಗಿದ್ದು, ಈ ಬಗ್ಗೆ ತನಿಖೆ ಮಾಡಿದರೆ ಅವರ ಯೋಗ್ಯತೆ ತಿಳಿಯಲಿದೆ. ಜಿಲ್ಲೆಯಲ್ಲಿಯೇ ರೈತರು ಹಣ ಪಾವತಿ ಮಾಡಿರುವ 27,000 ವಿದ್ಯುತ್ ಪರಿವರ್ತಕ ಒದಗಿಸದೇ, ರೈತರ ಹಣವನ್ನು ದುರುಪಯೋಗ ಮಾಡಿಕೊಂಡಿಲ್ಲವೇ? ಇವರನ್ನೂ ಕಳ್ಳರು ಎಂದು ಹೇಳಬಹುದಲ್ಲವೇ” ಎಂದು ಪ್ರಶ್ನಿಸಿದರು.
“ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ನಾಯಕರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಅವರೇ ಶೆಡ್ ಆಗುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ತಿರುಗೇಟು ನೀಡಿದರು.
“ನನ್ನ ವಿರುದ್ಧ ಪತ್ರಿಕಾಗೋಷ್ಠಿ ಮಾಡಿದರೆ, ಏನೂ ಸಿಗುವುದಿಲ್ಲ. ಇದನ್ನು ಬಿಟ್ಟು ರೈತರಿಗೆ ಅನುಕೂಲ ಆಗುವಂತಹ ಕೆಲಸ ಮಾಡಲಿ. ರಸ್ತೆ ದುರಸ್ತಿ, ಟಿಸಿ ಅಳವಡಿಕೆ ಸೇರಿದಂತೆ ರೈತರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ. ನನ್ನನ್ನು ಬೈದರೆ ಏನು ಸಿಗುತ್ತದೆ” ಎಂದರು.
“ಕಾಂಗ್ರೆಸ್ ಪಕ್ಷದ ನಾಯಕರ ಇತಿಹಾಸವನ್ನು ನೋಡಿದರೆ, ಬರಿ ಚುನಾವಣೆ ಸಂದರ್ಭದಲ್ಲಿ ಆರು ತಿಂಗಳು ಬಿಳಿ ಬಟ್ಟೆ ಹಾಕಿಕೊಂಡು ಓಡಾಡುತ್ತಾರೆ. ಬಂದು ನಮಗೆ ಬೈಯುತ್ತಾರೆ. ಚುನಾವಣೆ ಸೋಲುತ್ತಾರೆ. ನಂತರ ಮನೆಗೆ ಹೋಗುತ್ತಾರೆ. ಇನ್ನೇನು ಆಗುವುದಿಲ್ಲ” ಎಂದು ಟೀಕಿಸಿದರು.
ಜೆಡಿಎಸ್ ರಾಷ್ಟ್ರೀಯ ನಾಯಕರನ್ನು ಬದಲಿಸುವುದಾಗಿ ಸಿ ಎಂ ಇಬ್ರಾಹಿಂ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್, “ಇದು ತಾಂತ್ರಿಕ ವಿಷಯವಾಗಿದೆ. ನಮ್ಮಲ್ಲಿ ಕೋರ್ ಕಮಿಟಿ ಇದೆ. ಈ ಮೂಲಕವೇ ಉತ್ತರ ನೀಡಬೇಕಾಗಿದೆ. ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದ್ದು, ನಾನು ರಾಷ್ಟ್ರೀಯ ಕಮಿಟಿಯಲ್ಲಿದ್ದೇನೆ. ಸಿ ಎಂ ಇಬ್ರಾಹಿಂ ರಾಷ್ಟ್ರೀಯ ಕಮಿಟಿ ಸದಸ್ಯರಾಗಿದ್ದರು. ಈಗ ಅವರನ್ನು ಅಮಾನತು ಮಾಡಲಾಗಿದೆ” ಎಂದು ಹೇಳಿದರು.
“ರಾಷ್ಟ್ರೀಯ ಕಮಿಟಿ ಸಭೆಯನ್ನು ಕೇರಳದ ನಾಣಿ ಎಂಬುವವರು ಕರೆಯಲು ಬರುವುದಿಲ್ಲ. ಏನಿದ್ದರೂ ಎಚ್ ಡಿ ದೇವೇಗೌಡರೇ ಸಭೆ ಕರೆಯಬೇಕು” ಎಂದರು.
‘ಮೇಲ್ಸೇತುವೆಗೆ ಹಣ ಕೊಡದ ರಾಜ್ಯ ಸರ್ಕಾರ’: ಸಂಸದ ಪ್ರಜ್ವಲ್ ರೇವಣ್ಣ
“ನಗರದ ಮೇಲ್ಸೇತುವೆ ಕಾಮಗಾರಿಗೆ ಹಣ ಬಿಡುಗಡೆಗೆ ಮಾಡದ ರಾಜ್ಯ ಸರ್ಕಾರ ಹಾಸನ ಜಿಲ್ಲೆಯನ್ನು ಕಡೆಗಣಿಸಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಸಂಸದ ಪ್ರಜ್ವಲ್ ಆರೋಪಿಸಿದರು.
“ಸಂಪೂರ್ಣ ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ₹40 ಕೋಟಿ ಅವಶ್ಯಕತೆ ಇದ್ದು, ಉಳಿದ ಅನುದಾನಕ್ಕೆ ನಾನು ಎಚ್ ಡಿ ರೇವಣ್ಣ, ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್, ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು” ಎಂದು ಹೇಳಿದರು.
“ಸೇತುವೆಯ ಮತ್ತೊಂದು ಭಾಗದ ರ‍್ಯಾಂಪ್ ಅಳವಡಿಕೆಗೆ ಅನುದಾನದ ಕೊರತೆಯಿದ್ದು, ರಾಜ್ಯ ಸರ್ಕಾರ ₹63 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಈವರೆಗೂ ₹27 ಕೋಟಿ ಬಿಡುಗಡೆ ಮಾಡಿದೆ. ಉಳಿದ ಅನುದಾನವನ್ನು ಬಿಡುಗಡೆ ಮಾಡುವಂತೆ ಪತ್ರ ಬರೆದರೂ ರಾಜ್ಯ ಸರ್ಕಾರ ಹಣದ ಕೊರತೆ ಇರುವುದಾಗಿ ಹೇಳುತ್ತಿದೆ” ಎಂದರು.
“ಮೇಲ್ಸೇತುವೆ ಕಾಮಗಾರಿ ಒಂದು ಮಾರ್ಗದ ಕಾಮಗಾರಿ ನವೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಹಾಸನಾಂಬ ಜಾತ್ರಾ ಮಹೋತ್ಸವ ಪ್ರಾರಂಭಕ್ಕೂ ಮುನ್ನ ಒಂದು ಬದಿಯ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದೆಂದು ಎಂಜಿನಿಯರ್ ಭರವಸೆ ನೀಡಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡರೆ ಟ್ರಾಫಿಕ್ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಎಚ್‌ಡಿಕೆಗೆ ₹2,000 ವಿದ್ಯುತ್ ಬಿಲ್ ಕಟ್ಟದಷ್ಟು ದುರ್ಗತಿ ಬಂದಿಲ್ಲ: ಸಂಸದ ಪ್ರಜ್ವಲ್ ರೇವಣ್ಣ
“ಹಾಸನ, ಮೈಸೂರು, ಹೊಳೆನರಸೀಪುರ ಸೇರಿದಂತೆ ಪ್ರಮುಖ ರಸ್ತೆ ಸಂಪರ್ಕದ ಸೇತುವೆ ಇದಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ಬಹುತೇಕ ಕಾಮಗಾರಿ ಮುಗಿಯಲಿದೆ. ಉದ್ಘಾಟನೆಗೆ ಕೇಂದ್ರ ರೈಲ್ವೆ ಸಚಿವರನ್ನು ಆಹ್ವಾನಿಸಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ, ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು, ಅಧಿಕಾರಿಗಳು ಇದ್ದರು.