- ಬ್ಲೂ ಫಿಲಂ ಆರೋಪದ ಬಗ್ಗೆ ಕುಮಾರಸ್ವಾಮಿಗೆ ತಿರುಗೇಟು
- ‘ಕುಮಾರಸ್ವಾಮಿ ಹತಾಶೆ ಈ ರೀತಿಯಾಗಿ ಮಾತನಾಡಿಸುತ್ತಿದೆ’
ಕುಮಾರಸ್ವಾಮಿ ಅವರು ಏನೇನೋ ಮಾತಾಡಿ ಅವರ ಗೌರವ ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ಜನ ಅವರನ್ನು ನೋಡಿ ನಗುತ್ತಾರೆ ಎಂದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ಕುಮಾರಸ್ವಾಮಿಯವರು ನಿಮ್ಮ ವಿರುದ್ಧ ಬ್ಲೂ ಫಿಲಂ ಆರೋಪದ ಬಗ್ಗೆ ಮತ್ತೆ ಪ್ರಶ್ನೆ ಎತ್ತಿದ್ದಾರೆ ಎಂದು ಕೇಳಿದಾಗ ಡಿ ಕೆ ಶಿವಕುಮಾರ್, ಸದಾಶಿವನಗರದ ನಿವಾಸದ ಎದುರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಮಾಜಿ ಮುಖ್ಯಮಂತ್ರಿಯ ಮಾತಿಗೆ ತೂಕ, ಗೌರವ ಇರಬೇಕು. ನಾನು ಕ್ಷೇತ್ರಕ್ಕೆ ಹೋಗದಿದ್ದರೂ ನನ್ನನ್ನು 1,23,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ನನ್ನ ಕನಕಪುರ ಕ್ಷೇತ್ರದ ಜನತೆ ನನ್ನ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿದ್ದಾರೆ. ಕುಮಾರಸ್ವಾಮಿಯವರು ಹತಾಶರಾಗಿದ್ದಾರೆ. ಅವರ ಹತಾಶೆ ಅವರನ್ನು ಈ ರೀತಿಯಾಗಿ ಮಾತನಾಡಿಸುತ್ತಿದೆ” ಎಂದು ತಿರುಗೇಟು ನೀಡಿದರು.
“ಡಿ ಕೆ ಶಿವಕುಮಾರ್ ಹೀಗೆ ಮಾಡಿದ್ದರೇ ಎಂದು ನಿಮ್ಮ ಕಾರ್ಯಕರ್ತರನ್ನೇ ಕೇಳಿ. ನಾನು ಈ ರೀತಿಯ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದೆ ಎಂದು ನಮ್ಮ ಕ್ಷೇತ್ರದ ಜನರು ಹಾಗೂ ನಿಮ್ಮ ಕಾರ್ಯಕರ್ತರು ಹೇಳಿದರೆ, ಈ ಕೂಡಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ” ಎಂದು ಸವಾಲು ಹಾಕಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ಏಜೆಂಟರಾಗಿರುವ ರಾಜ್ಯಪಾಲರುಗಳಿಗೆ ಸುಪ್ರೀಮ್ ಚಾವಟಿ!
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲಿ
ಬಿಜೆಪಿ ಬರ ಪ್ರವಾಸ ಮಾಡಲು ಸಜ್ಜಾಗುತ್ತಿದೆ ಎಂದು ಕೇಳಿದಾಗ “ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಲಿ. ರಾಜ್ಯದ ಎಲ್ಲಾ ಸಂಸದರನ್ನು ಕರೆದುಕೊಂಡು ಹೋಗಿ ಬರ ಪರಿಹಾರಕ್ಕೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ” ಎಂದು ಹೇಳಿದರು.
“ಕೇಂದ್ರ ಸರ್ಕಾರವೇ ಈಗಾಗಲೇ ಬರ ಪರಿಸ್ಥಿತಿಯ ಕುರಿತು ವರದಿ ನೀಡಿದೆ. ಪ್ರವಾಸ ಮಾಡುವವರನ್ನು ನಾವು ಬೇಡ ಎಂದು ಹೇಳುವುದಿಲ್ಲ. ಪಕ್ಷ ಕಟ್ಟಿಕೊಳ್ಳಲಿ, ಪ್ರವಾಸ ಮಾಡಲಿ, ನಮಗೇನು ತೊಂದರೆ ಇಲ್ಲ. ನೂರು ದಿನ ಇರುವ ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳನ್ನು 150 ದಿನಕ್ಕೆ ಹೆಚ್ಚಳ ಮಾಡಲಿ. ಆಗ ಈ ದೇಶಕ್ಕೆ ಬಿಜೆಪಿ ಒಳ್ಳೆಯದನ್ನು ಮಾಡುತ್ತಿದೆ ಎಂದು ಈ ದೇಶದ ಜನ ಮತ್ತು ನಾವು ನಂಬುತ್ತೇವೆ” ಎಂದು ಕುಹಕವಾಡಿದರು.