ಗ್ರಾಮಕ್ಕೆ ಭೇಟಿ ನೀಡಿ ಮನರೇಗಾ ಕಾರ್ಮಿಕರೊಂದಿಗೆ ಸಭೆ ನಡೆಸುತ್ತೇನೆಂದು ಹೇಳಿದ್ದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಕಾರ್ಮಿಕರು ಕಾದು ಕುಳಿತಿದ್ದರು. ಆದರೂ, ಸಚಿವರು ಗ್ರಾಮದತ್ತ ಸುಳಿಯಲಿಲ್ಲ. ಹೀಗಾಗಿ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಗೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ತೆರಳಿದ್ದರು,. ಅದಕ್ಕೂ ಮುನ್ನ ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿಯಲ್ಲಿ ಮನರೇಗಾ ಕಾರ್ಮಿಕರೊಂದಿಗೆ ಸಭೆ ನಿಗದಿಯಾಗಿತ್ತು. ಅದಕ್ಕಾಗಿ ಕಾರ್ಮಿಕರು ಕಾದು ಕುಳಿತಿದ್ದರು. ಆದರೆ, ಸಚಿವರು ಗ್ರಾಮದತ್ತ ಸುಳಿಯಲೇ ಇಲ್ಲ.
ಸಚಿವರು ಬಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾರ್ಮಿಕ ಮಂಜಣ್ಣ, “ನಾವು ಮನರೇಗಾ ಕೂಲಿಯನ್ನು ಆಶ್ರಯಿಸಿ ಬದುತ್ತಿದ್ದೇವೆ. ಆದರೆ, ನಮಗೆ ಸರಿಯಾಗಿ ಕೂಲಿ ಕೊಡುತ್ತಿಲ್ಲ. ನಾವು ಹೇಗೆ ಜೀವನ ಮಾಡಬೇಕು? ಇವತ್ತು ಸಚಿವರು ಬರುತ್ತಾರೆ. ಅವರಿಗೆ ನಮ್ಮ ಸಮಸ್ಯೆಗಳನ್ನು ತಿಳಿಸಬೇಕೆಂದು ಕಾದಿದ್ದೇವೆ. ಆದರೆ, ಸಚಿವರು ಬರಲೇ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಚಿವರು ಬರುತ್ತಾರೆಂದು ಬೆಳಗ್ಗೆಯಿಂದಲೂ ಕಾಯಿಸಿದ್ದಾರೆ. ಊಟ, ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಸರ್ಕಾರ ಬಡವರಿಗಾಗಿ ಏನನ್ನೂ ಮಾಡಿಲ್ಲ” ಎಂದು ಕಿಡಿಕಾರಿದ್ದಾರೆ.