ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಹಾಗೂ ತಮಿಳುನಾಡಿನ ಮಾಜಿ ರಾಜ್ಯಪಾಲರಾದ ನ್ಯಾ. ಫಾತಿಮಾ ಬೀವಿ ಅವರು ಗುರುವಾರ ಕೇರಳದ ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
1927 ಏಪ್ರಿಲ್ 30 ರಂದು ಕೇರಳದ ತಿರುವಂಕೂರಿನ ಗ್ರಾಮವೊಂದರಲ್ಲಿ ಜನಿಸಿದ ಫಾತಿಮಾ ಬೀವಿ ಅವರು 1950ರಲ್ಲಿ ಚಿನ್ನದ ಪದಕದೊಂದಿಗೆ ಎಲ್‌ಎಲ್‌ಬಿ ಪದವಿ ಪಡೆದು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ಎಂಟು ವರ್ಷಗಳ ನಂತರ ಅವರು ನ್ಯಾಯಾಂಗ ಸೇವೆಗೆ ಮ್ಯಾಜಿಸ್ಟ್ರೇಟ್ ಆಗಿ ಸೇರಿಕೊಂಡರು ಮತ್ತು 1974 ರಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದರು.
ಬೀವಿ ಅವರು 1983 ರಲ್ಲಿ ಕೇರಳ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು 1989 ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
ಈ ಸುದ್ದಿ ಓದಿದ್ದೀರಾ? ಬಿರಿಯಾನಿಗಾಗಿ 60 ಬಾರಿ ಇರಿದು ಮೃತದೇಹದ ಮೇಲೆ ನೃತ್ಯವಾಡಿದ 18ರ ಯುವಕ
1993 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದ ನಂತರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಮತ್ತು ತಮಿಳುನಾಡಿನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು.
ನ್ಯಾಯಮೂರ್ತಿ ಫಾತಿಮ ಬೀವಿ ಅವರ ನಿಧನಕ್ಕೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸಂತಾಪ ಸೂಚಿಸಿದ್ದಾರೆ.
“ನ್ಯಾಯಮೂರ್ತಿ ಬೀವಿ ಅವರು ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಮತ್ತು ತಮಿಳುನಾಡು ರಾಜ್ಯಪಾಲರಾಗಿ ತಮ್ಮದೆ ಆದ ವಿಶಿಷ್ಟ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ. ಅವರು ತನ್ನ ಹೆಸರಿಗೆ ಅನೇಕ ದಾಖಲೆಗಳನ್ನು ಹೊಂದಿದ್ದ ಧೈರ್ಯಶಾಲಿ ಮಹಿಳೆ. ಇಚ್ಛಾಶಕ್ತಿ ಮತ್ತು ಸದುದ್ದೇಶ ಹೊಂದಿರುವ ಗುರಿಯು ಎಂತಹ ಸಂದರ್ಭದಲ್ಲಿಯೂ ಗೆಲುವು ತಂದುಕೊಡುತ್ತದೆ ಎನ್ನುವುದನ್ನು ತಮ್ಮ ಸ್ವಂತ ಜೀವನದ ಮೂಲಕ ತೋರಿಸಿದ ವ್ಯಕ್ತಿತ್ವ ಅವರದು” ಎಂದು ಜಾರ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.