ತಂದೆ ಮನೆಯಿಂದ ವರದಕ್ಷಿಣೆ ಹಣ ತಂದಿಲ್ಲವೆಂದು ವಿಕೃತನೊಬ್ಬ ತನ್ನ ಪತ್ನಿಯ ಮರ್ಮಾಂಗಕ್ಕೆ ಆಸಿಡ್ ಎರಚಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬಾಗಲಗುಂಟೆ ನಿವಾಸಿ ಕಾವ್ಯ ವರದಕ್ಷಿಣೆ ದೌರ್ಜನ್ಯಕ್ಕೆ ತುತ್ತಾಗಿರುವ ಯುವತಿ. ಕಾವ್ಯ ಅವರು ಕಳೆದ ಮೇ ತಿಂಗಳಿನಲ್ಲಿ ಮಂಡ್ಯ ಮೂಲಕ ಸಂತೋಷ್ ಎಂಬಾತನನ್ನು ಮದುವೆಯಾಗಿದ್ದರು. ಮದ್ಯದ ವ್ಯಸನಿಯಾಗಿದ್ದ ಸಂತೋಷ್ ಆಕೆಗೆ ದಿನನಿತ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಆರೋಪಿ ಸಂತೋಷ್ ಮತ್ತು ಆತನ ತಾಯಿಯ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಉದ್ಯೋಗ ಮಾಡದ ಸಂತೋಷ್ ಪ್ರತಿದಿನ ಮದ್ಯಪಾನ ಮಾಡುತ್ತಿದ್ದ. ಮದುವೆಯಾದ ಹೊಸದರಲ್ಲಿ ದಂಪತಿಗಳು ಬೆಂಗಳೂರಿನ ಕುರುಬನಹಳ್ಳಿಯಲ್ಲಿ ವಾಸವಾಗಿದ್ದರು. ಆದರೆ, ಬಾಡಿಗೆ ಕಟ್ಟದ ಕಾರಣ ಮನೆ ಖಾಲಿ ಮಾಡಿದ್ದರು. ಆ ಬಳಿಕ, ಬಾಗಲಗುಂಟೆ ಬಳಿ ವಾಸವಾಗಿದ್ದರು ಎಂದು ಹೇಳಲಾಗಿದೆ.
ಕಾವ್ಯ ಅವರನ್ನು ಮದುವೆಯಾಗುವ ಸಮಯದಲ್ಲಿ ಆಕೆಯ ಪೋಷಕರಿಂದ ಸಂತೋಷ್ 20ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಪಡೆದಿದ್ದ. ಮಾತ್ರವಲ್ಲದೆ, ಹಣಕ್ಕೂ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ.
ಮದ್ಯಪಾನ ಮಾಡಿ ವರದಕ್ಷಿಣೆ ಹಣದ ವಿಚಾರಕ್ಕೆ ಕಾವ್ಯ ಜೊತೆ ಜಗಳ ಮಾಡಿ, ಹಲ್ಲೆ ನಡೆಸುತ್ತಿದ್ದ. ಇತ್ತೀಚೆಗೆ ಗಲಾಟೆ ಮಾಡಿದ್ದ ಸಂತೋಷ್, ಶೌಚಾಲಯ ಸ್ವಚ್ಛತೆಗಾಗಿ ತಂದಿಟ್ಟಿದ್ದ ಆಸಿಡ್‌ಅನ್ನು ಕಾವ್ಯಾಳ ಬೆನ್ನು, ಸೊಂಟ ಹಾಗೂ ಮರ್ಮಾಂಗಕ್ಕೆ ಎರಚಿ ವಿಕೃತಿ ಮರೆದಿದ್ದಾನೆ ಎಂದು ತಿಳಿದುಬಂದಿದೆ.
ವಿಕೃತ ಪತಿ ಮತ್ತು ಆತನ ತಾಯಿ ಪುಟ್ಟಮ್ಮ ವಿರುದ್ಧ ಸಂತ್ರಸ್ತೆ ಕಾವ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.