ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ವಂಚಿತಕೊಂಡ ಕೊರಗರು ಪ್ರಬಲ ಸಮುದಾಯಗಳ ಜೊತೆ ಸ್ಪರ್ಧೆಗಿಳಿಯಲು ಸಾಧ್ಯವಾಗದ ಕಾರಣ ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕಂತ ಉದ್ಯೋಗಗಳನ್ನು ಪಡೆಯಲು ಕಳೆದ 7 ದಶಕಗಳಿಂದ ಸಾಧ್ಯವಾಗಿಲ್ಲ!
ಸ್ವತಂತ್ರ ಭಾರತ 1947ರ ನಂತರದಲ್ಲಿ ಆರ್ಥಿಕವಾಗಿ ಬಂಡವಾಳಶಾಹಿ ವ್ಯವಸ್ಥೆ ಮತ್ತು ರಾಜಕೀಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನಲ್ಲಿ ಅಭಿವೃದ್ಧಿ ಕಾರ್ಯವನ್ನು ಜಾರಿ ಮಾಡಿತು. ಭಾರತ ಸಂವಿಧಾನ ಲಿಂಗ, ಜಾತಿ, ವರ್ಗ, ಮತ-ಧರ್ಮಗಳ ಭೇದವಿಲ್ಲದ ಮುಕ್ತ ಅವಕಾಶಗಳನ್ನು ಕಲ್ಪಿಸಿ ಸರ್ವಜನರ ಅಭಿವೃದ್ಧಿಯ ಕನಸನ್ನು ಕಂಡಿತು. ಈ ವ್ಯವಸ್ಥೆಗಳು ಸಾಮಾಜಿಕ ಅಭಿವೃದ್ಧಿಗೆ ಅಂದರೆ ಜನರ ಜೀವನ ಮಟ್ಟವನ್ನು, ಶಿಕ್ಷಣ, ಆರೋಗ್ಯ ಮತ್ತು ಜೀವಿತಾವಧಿಯನ್ನು ಹೆಚ್ಚಿಸುವಲ್ಲಿ ಪೂರಕವಾದವು. ಕೆಲವು ಪ್ರಬಲ ಸಮುದಾಯಗಳು ಈ ವ್ಯವಸ್ಥೆಯ ಅವಕಾಶಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಅಭಿವೃದ್ಧಿಯ ಶಿಖರವನ್ನು ಏರಿದ್ದಾರೆ. ಆದರೆ ಒಂದಷ್ಟು ಅರಣ್ಯಮೂಲ ಬುಡಕಟ್ಟುಗಳು ಇಂದಿಗೂ ಮೂಲಭೂತ ಅವಕಾಶಗಳಿಂದ ವಂಚಿತವಾಗಿದೆ. ಈ ಅಭಿವೃದ್ಧಿಯ ಪ್ರಕ್ರಿಯೆಗೆ ಒಳಗಾಗದೆ ಇರುವುದು ಕಾಣಬಹುದು. ದಿನನಿತ್ಯ ಹಸಿವು, ಬಡತನ, ಅಪೌಷ್ಟಿಕತೆ, ಅನಕ್ಷರತೆ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸುತ್ತಿದೆ. ಜೊತೆಗೆ ದಿನದಿಂದ ದಿನಕ್ಕೆ ಸಮುದಾಯಗಳ ಜನಸಂಖ್ಯೆ ಇಳಿಮುಖವಾಗುತ್ತಿದೆ.
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣದ ಕಾಸರಗೋಡು ತಾಲೂಕಿನ ನೀಲೇಶ್ವರದಿಂದ ಉತ್ತರದ ಕುಂದಾಪುರ ತಾಲೂಕಿನ ಬೈಂದೂರಿನವರೆಗೆ ಮೂಲ ನಿವಾಸಿಗಳಾದ ಕೊರಗರು ನೆಲೆಗೊಂಡಿದ್ದಾರೆ. ಜೊತೆಗೆ ಬೆರಳಣಿಕೆಯಷ್ಟು ಜನರು ಇತರ ಜಿಲ್ಲೆಗಳಲ್ಲಿಯೂ ವಾಸಿಸುತ್ತಿದ್ದಾರೆ. ಸಾಂಸ್ಕ್ರತಿಕ, ಭಾಷಿಕ ಮತ್ತು ಧಾರ್ಮಿಕವಾಗಿ ಬಹಳ ಮುಕ್ತವಾಗಿ ಪ್ರಕೃತಿಯೊಂದಿಗೆ ಬದುಕುತ್ತಿದ್ದಾರೆ. ಮೂಲನಿವಾಸಿಗಳಾದ ಕೊರಗ ನೈಜ ದುರ್ಬಲ ಬುಡಕಟ್ಟು ಸಮುದಾಯವು ಸುಮಾರು 14,000 ಜನಸಂಖ್ಯೆಯನ್ನು ಹೊಂದಿದೆ. ಕೆಲವು ತಜ್ಞರ ಪ್ರಕಾರ 1991 ರ ಜನಗಣತಿಯಲ್ಲಿ ಸುಮಾರು 45,000 ಹೆಚ್ಚು ಜನಸಂಖ್ಯೆಯನ್ನು ಹೊಂದಿತ್ತು. ಆದರೆ ಇಂದು ಕೊರಗರು ಋಣಾತ್ಮಕವಾಗಿ ನಶಿಸುತ್ತಿದ್ದಾರೆ.
ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ವಂಚಿತಕೊಂಡ ಕೊರಗ ಸಮುದಾಯ ಕಳೆದ 2 ದಶಕಗಳಿಂದ ಶಿಕ್ಷಣದ ಮೊರೆಹೋಗಿ ಇಂದು ಸಮುದಾಯದಲ್ಲಿ ಬೆರಳಣಿಕೆಯಷ್ಟು ವಿದ್ಯಾವಂತರಿದ್ದಾರೆ. ಸಮಾಜದ ಮುಕ್ತ ಅವಕಾಶದ ನಡುವೆಯು ಕೊರಗರಿಗೆ ಪ್ರಬಲ ಸಮುದಾಯಗಳ ಜೊತೆ ಸ್ಪರ್ಧೆಗಿಳಿಯಲು ಸಾಧ್ಯವಾಗದೇ ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕಂತ ಉದ್ಯೋಗಗಳನ್ನು ಪಡೆಯಲು ಕಳೆದ 7 ದಶಕಗಳಿಂದ ಸಾಧ್ಯವಾಗಿಲ್ಲ.
ಅಜಲು ಪದ್ಧತಿಯೊಂದು ಅನಿಷ್ಠ ಪದ್ಧತಿ, ಕೊರಗರು ತಮ್ಮ-ತಮ್ಮ ನಿರ್ದಿಷ್ಟ ಪ್ರದೇಶದೊಳಗೆ ಉನ್ನತ ಜಾತಿಯ ಜನರ ಸಂತೋಷಕ್ಕಾಗಿ ಅವರ ಸಮೃದ್ಧಿ-ಸುಭಿಕ್ಷೆಗಾಗಿ ಆರೋಗ್ಯಕ್ಕಾಗಿ ಯಾವುದೇ ಪ್ರತಿಫಲವನ್ನು, ಅಪೇಕ್ಷೆಯನ್ನು ಬಯಸದೇ ಸಾಮೂಹಿಕವಾಗಿ ಮತ್ತು ಸಾಮಾಜಿಕ ಕಳಕಳಿಯಿಂದ ಮಾಡುವ ಬಿಟ್ಟಿ ಚಾಕರಿ ಅಥವಾ ಜೀತ. ಈ ಪ್ರಕ್ರಿಯೆ ಕೊರಗ ಸಮುದಾಯವನ್ನು ಹೀನಾಯ ಸ್ಥಿತಿಗೆ ದೂಡುವುದರೊಂದಿಗೆ ಸಮಾಜದಲ್ಲಿ ಕೊರಗರು ನಿಕೃಷ್ಟತೆಯಿಂದ ಬಳಲುವಂತೆ ಸ್ಥಿತಿ ನಿರ್ಮಾಣ ಮಾಡುತ್ತದೆ.
ಅಜಲು-ಅಸ್ಪೃಶ್ಯತೆಯ ಪರಿಣಾಮ ಕೊರಗರು ಸಾಮಾಜಿಕ ವ್ಯವಸ್ಥೆಯಲ್ಲಿ ಕಟ್ಟ-ಕಡೆಯವರಾಗಿ, ಮೇಲ್ವರ್ಗದ ಜನರ ಅಥವಾ ನಾಗರಿಕ ಜನರ ಸಂಪರ್ಕವಿಲ್ಲದೇ ದೇಶದ ಆಭಿವೃದ್ಧಿ ಪಥದಲ್ಲಿ ಜೋಡಿಸಿಕೊಳ್ಳಲು ಸಾಧ್ಯವಾಗದೇ ಶೈಕ್ಷಣಿಕವಾಗಿ, ಆರೋಗ್ಯ, ಆರ್ಥಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ಅಂಚಿಕೃತಗೊಂಡಿದೆ. ಈ ಹಿಂದೆ ಪ್ರಬಲ ಜಾತಿಗಳು ನೀಡುವ ಎಂಜಲೆಲೆಯಲ್ಲಿ ಪಶು ಪ್ರಾಣಿಗಳ ಜೊತೆಯಲ್ಲಿ ಸಾಮಾಜಿಕ ನ್ಯಾಯ ಪಡೆಯುವ ನಿಕೃಷ್ಟ ಅವಕಾಶವಿತ್ತು. ಅಜಲು ಮತ್ತು ಅಸ್ಪೃಶ್ಯತೆ ಕೊರಗರನ್ನು ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಹಿಂಸಿಸಿದ್ದು ಮಾತ್ರವಲ್ಲದೇ ಭವಿಷ್ಯದ ಬಗ್ಗೆ ಆಲೋಚನೆಯನ್ನು ಮಾಡದ ಸಾಮಾಜಿಕವಾದ ಏಣಿ ಶ್ರೇಣಿ ವ್ಯವಸ್ಥೆ ನಿರ್ಮಾಣ ಮಾಡಿತ್ತು.
ಕಳೆದ ಏಳು ದಶಕಳಿಂದ ಈ ಎಲ್ಲಾ ಮುಕ್ತ ಅವಕಾಶಗಳಿದ್ದು ಸಹ ಕೊರಗರಿಗೆ ಇಂದು ಕೂಡ ಅಜಲು ಅಸ್ಪೃಶ್ಯತೆಯಿಂದ ಹೊರಬರಲು ಸಾಧ್ಯವಾಗದೇ ಇಂದಿಗೂ ನಿಕೃಷ್ಟವಾಗಿಯೂ ಬದುಕುತ್ತಿದ್ದಾರೆ. ಪ್ರಬಲ ಸಮುದಾಯಗಳಿಗೆ ಸ್ಪರ್ಧೆ ನೀಡಿ ಅವಕಾಶಗಳನ್ನು ಪಡೆಯಲು ಸಾಧ್ಯವಾಗದೇ ಹಿಮ್ಮಖ ಚಲನೆಗೆ ಹೋಗಿರುವ ಸಮುದಾಯವನ್ನು ಆರೋಗ್ಯ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಪ್ರತ್ಯೇಕವಾದ ಮೀಸಲಾತಿಯನ್ನು ನೀಡಿ ಸಮುದಾಯವನ್ನು ಅಭಿವೃದ್ಧಿ ಪಡಿಸಬೇಕಾಗಿದೆ.
ಇದನ್ನೂ ಓದಿ ಜಾತಿ ಗಣತಿ | ವರದಿ ಬಿಡುಗಡೆಯಾದರೆ ಸಮಾಜ ಒಡೆದು ಹೋಗುತ್ತದೆ ಎನ್ನುವುದು ರಾಜಕೀಯ ಷಡ್ಯಂತ್ರದ ಹೇಳಿಕೆ
ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಯಾದ ಜಾತಿ ಜನ ಗಣತಿಯು ಈ ಅಸಮಾನ ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ಮರು ಅವಕಾಶ ನೀಡಿ ಸಾಮಾಜಿಕ ನ್ಯಾಯ ನೀಡುತ್ತದೆ ಎಂಬ ಭರವಸೆಯನ್ನು ಅರಣ್ಯಮೂಲ ನೈಜ ದುರ್ಬಲ ಬುಡಕಟ್ಟು ಕೊರಗ ಸಮುದಾಯ ಇಟ್ಟುಕೊಂಡಿದೆ. ಸಮಸ್ತ ಜನಸಮುದಾಯ ಜೊತೆ ಜೊತೆಗೆ ಶೈಕ್ಷಣಿಕವಾಗಿ, ಆರೋಗ್ಯವಾಗಿ ಹಾಗೂ ಸಾಂಸ್ಕ್ರತಿವಾಗಿ ಮುಕ್ತವಾಗಿ ಬದುಕಲು ಈ ಪ್ರಜಾಪಭುತ್ವ ವ್ಯವಸ್ಥೆ ಮತ್ತು ಬಂಡವಾಳಶಾಹಿ ವ್ಯವಸ್ಥೆ ಮರು ವ್ಯಾಖ್ಯಾನಿಸುತ್ತದೆ ಎಂಬ ಭರವಸೆಯೊಂದಿಗೆ ಜಾತಿ ಗಣತಿಯು ಅನುಷ್ಠಾನವಾಗಬೇಕು ಎಂದು ಪ್ರಬಲವಾದ ಬೇಡಿಕೆಯನ್ನು ರಾಜ್ಯ ಸರಕಾರದ ಮುಂದಿಡುತ್ತಿದ್ದೇವೆ.

ಡಾ ಸಬಿತಾ ಕೊರಗ
ಸಹಾಯಕ ಪ್ರಾಧ್ಯಾಪಕರು ಸಮಾಜಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ