ಭಾರತ ವಿಭಜನೆ ಎನ್ನುವ ಕಾಲಘಟ್ಟದ ಅಧ್ಯಯನವನ್ನು ಮಾಡಬಯಸುವವರು ಸಾದತ್ ಹಸನ್ ಮಂಟೊರಂಥ ಕತೆಗಾರರ ಸಾಹಿತ್ಯವನ್ನು ಓದುವುದರ ಜೊತೆಗೆ ಸೋಮ್ ಆನಂದರಂಥ ಪತ್ರಕರ್ತರ ಮಾತುಗಳನ್ನು ಸಹ ಆಲಿಸಬೇಕು.
ದಕ್ಷಿಣ ಭಾರತವು ದೇಶ ವಿಭಜನೆಯಿಂದ ಅಷ್ಟೇನೂ ಪ್ರಭಾವಿತವಾಗಿರಲಿಲ್ಲ. ದೇಶವಿಭಜನೆಯಾದಾಗ ನಾನಿನ್ನೂ ಹುಟ್ಟಿಯೇ ಇರಲಿಲ್ಲ. ನಾನು ಓದಿನಿಂದಲೇ ವಿಭಜನೆ ದುರಂತದ ಬಗ್ಗೆ ಅಷ್ಟಿಷ್ಟು ತಿಳಿದುಕೊಂಡಿದ್ದು. ಆ ಕಾಲದ ವಿದ್ಯಮಾನಗಳಿಗೆ ಸಾಕ್ಷಿಯಾದವರು ತಮ್ಮ ಬರಹಗಳ ಮೂಲಕ ಇತಿಹಾಸದ ಕರಾಳ ಅಧ್ಯಾಯವೊಂದನ್ನು ಪುನರ್ಸೃಷ್ಟಿಸಿದ್ದಾರೆ. ಆ ಪೈಕಿ ಸೋಮ್ ಆನಂದರ ಅಪರೂಪದ ಸಂಸ್ಮರಣೆಯೂ ಒಂದು. ಸೋಮ್ ಆನಂದರ ತಂದೆ ಒಲ್ಲದ ಮನಸ್ಸಿನಿಂದಲೇ ಲಾಹೋರ್ದಿಂದ ವಲಸೆ ಬಂದು ದೆಹಲಿಯಲ್ಲಿ ನೆಲೆ ನಿಂತರು.
ವಿವೇಕ, ವಿವೇಚನೆಯೆಲ್ಲ ಕಳೆದುಕೊಂಡ ಭಾರತ ವಿಭಜನೆ ಎನ್ನುವ ಕಾಲಘಟ್ಟದ ಅಧ್ಯಯನವನ್ನು ಮಾಡಬಯಸುವವರು ಸಾದತ್ ಹಸನ್ ಮಂಟೊರಂಥ ಕತೆಗಾರರ ಸಾಹಿತ್ಯವನ್ನು ಓದುವುದರ ಜೊತೆಗೆ ಸೋಮ್ ಆನಂದರಂಥ ಪತ್ರಕರ್ತರ ಮಾತುಗಳನ್ನು ಸಹ ಆಲಿಸಬೇಕು. ಭಾರತ ವಿಭಜನೆಯನ್ನು ವಸ್ತುನಿಷ್ಠವಾಗಿ ಚಿತ್ರಿಸಿರುವ ‘Pakistan and India Partition 1949’ ಎನ್ನುವ ಸಾಕ್ಷ್ಯ ಚಿತ್ರದಲ್ಲಿ ಸೋಮ್ ಆನಂದರು ತಾವು ಕಂಡುಂಡ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಸೋಮ್ ಆನಂದರು ಪ್ರಸಿದ್ಧ ಪತ್ರಕರ್ತರು. ಅವರು ವಿಭಜನೆ ನಂತರವೂ ಪಾಕಿಸ್ತಾನದ ಕ್ರಾಂತಿ ಕವಿ ಫೈಜ್ ಅಹಮದ್ ಫೈಜ್ರ ‘ಪಾಕಿಸ್ತಾನ್ ಟೈಮ್ಸ್’ ಪತ್ರಿಕೆಯ ವರದಿಗಾರರಾಗಿ ಮುಂದುವರಿದಿದ್ದರು. ಆ ಪತ್ರಿಕೆಯ ವರದಿಗಳಿಂದ ಕಟ್ಟಿಕೊಟ್ಟ ಜೈನಬ್ ಹಾಗೂ ಬೂಟಾಸಿಂಗ್ರ ದುರಂತ ಪ್ರೇಮ ಕತೆ ಮನ ಮಿಡಿಯುವಂತಹದ್ದು. ಅದು ಕಲ್ಪನಾಜನ್ಯ ಸಾಹಿತ್ಯಕ ಕೃತಿಯಲ್ಲ. ಅದೊಂದು ನೈಜ ಕತೆ. ನಾನು ಆ ಕತೆಯನ್ನೋದಿದ್ದೆ. ಅದನ್ನು ಅನುವಾದಿಸಲೇಬೇಕೆನಿಸಿತು. ಸೋಮ್ ಆನಂದರ ವಿಳಾಸ ಪತ್ತೆ ಹಚ್ಚಿ ಅವರ ಅನುಮತಿ ಕೋರಿದೆ. ಆಮೇಲೆ ಸಾಹಿರ್ ಲುಧಿಯಾನವಿ ಕುರಿತ ಪುಸ್ತಕ ಬರೆಯುವಾಗ ದೇಶ ವಿಭಜನೆಯ ಹಿನ್ನೆಲೆಯುಳ್ಳ ಅವರ ಬರಹಗಳನ್ನು ಬಳಸಿಕೊಂಡೆ.
ಅಂದ ಮಾತ್ರಕ್ಕೆ ಇಲ್ಲಿ ನಾವು ಮನ ಕಲಕುವ ಪ್ರಸಂಗಗಳನ್ನಷ್ಟೇ ಓದುವುದಿಲ್ಲ. ವಿಭಜನೆಗೆ ಜಿನ್ನಾರ ದ್ವಿರಾಷ್ಟ್ರ ಸಿದ್ಧಾಂತ ಒಂದು ಕಾರಣವಾಗಿತ್ತು. ಅದೇನೇ ಇರಲಿ ಜನಸಾಮಾನ್ಯರ ದೈನಂದಿನ ಬದುಕು ಹೇಗೆ ಆ ಸಿದ್ಧಾಂತದಿಂದ ಪ್ರಭಾವಿತವಾಗಿತ್ತು ಎಂಬುದಕ್ಕೆ ಹಲವು ಜೀವಂತ ನಿದರ್ಶನಗಳನ್ನು ನೀಡಿದ್ದಾರೆ. ಒಂದೆಡೆ ಆನಂದರು ಒಂದು ಮುಸ್ಲಿಂ ದಂಪತಿಯ ಸಾಮರಸ್ಯರಹಿತ ಜೀವನ ಚಿತ್ರ ಬಿಡಿಸಿದ್ದಾರೆ. ಆನಂದರ ಮನೆ ಪಕ್ಕದಲ್ಲಿ ವಾಸವಿದ್ದ ಆ ದಂಪತಿಗಳನ್ನು ಅರಿತುಕೊಳ್ಳಲು ಸೋಮ್ ಪ್ರಯತ್ನಿಸಿದ್ದಾರೆ.
ಗಂಡ ಒಬ್ಬ ಮೌಲವಿ. ಅವರನ್ನು ದೂರದಿಂದಲೇ ನೋಡಿದರೆ ಅವರೊಬ್ಬ ರಾಜಕಾರಣಿಯೆನ್ನುವುದು ಸ್ಪಷ್ಟವಾಗುತ್ತಿತ್ತು. ಖಾದಿ ಪೈಜಾಮ ಜುಬ್ಬಾ. ಹಾಗೂ ಗಾಂಧಿ ಟೋಪಿಯು ಅವರು ಕಾಂಗ್ರೆಸ್ ಮುಖಂಡ ಎನ್ನುವುದನ್ನು ಸೂಚಿಸುತ್ತಿತ್ತು. ಪುಸ್ತಕಗಳನ್ನು ಪ್ರಕಟಿಸುವುದು ಅವರ ವೃತ್ತಿ. ಅದೂ ಕೇವಲ ಪಠ್ಯ ಪುಸ್ತಕಗಳನ್ನು ಮಾತ್ರ ಅವರು ಮುದ್ರಿಸುತ್ತಿದ್ದರು. ಮೌಲಾನಾ ಆಜಾದ್ ಹಾಗೂ ಗಡಿನಾಡ ಪ್ರಾಂತ್ಯದ ಮುಖ್ಯ ಮಂತ್ರಿ ಡಾ.ಖಾನ್ ಸಾಹೇಬರೊಂದಿಗೆ ಅವರು ಮಧುರ ಹಾಗೂ ಆಪ್ತ ಸಂಬಂಧ ಹೊಂದಿದ್ದರು. ಇವೇ ಸಂಬಂಧಗಳಿಂದಾಗಿ ಅವರು ಗಡಿನಾಡ ಪ್ರಾಂತ್ಯದ ಶಾಲೆಗಳಲ್ಲಿ ತಮ್ಮ ಪಠ್ಯ ಪುಸ್ತಕಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರು.
ಮೌಲವಿ ಎನ್ನುವುದು ಯಾರೋ ಕೊಟ್ಟ ಬಿರುದಾಗಿರಲಿಲ್ಲ. ಅದು ಅವರ ಮನೆತನದ ಹೆಸರು. ಆದರೆ ಅವರು ಒಬ್ಬ ಹಳೆಯ ವಿಚಾರದ ವ್ಯಕ್ತಿಯಾಗಿದ್ದರು. ಇವರ ಮಡದಿ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಿದ್ದಳು. ಆನಂದ ಆಗಿನ್ನೂ ಬಾಲಕ. ಹೀಗಾಗಿ ಅವರ ಎದುರು ಆ ಮಹಿಳೆ ಪರ್ದಾ ಆಚರಣೆ ಅವಶ್ಯವಿರಲಿಲ್ಲ. ದಂಪತಿಗಳಿಗೆ ಸಂತಾನವಿರಲಿಲ್ಲ. ಹಾಗಾಗಿ ಆನಂದರನ್ನು ತಮ್ಮ ಸ್ವಂತ ಮಗುವಿನಂತೆ ಕಂಡರು. ಅವರೊಂದಿಗೆ ಬೆಳೆದ ಆನಂದರಿಗೆ ಇನ್ನೊಬ್ಬ ತಾಯಿ ಸಿಕ್ಕಂತೆನಿಸಿತು. ಆನಂದ ದೊಡ್ಡವರಾದಂತೆ ಅವರಿಗೆ ಮಹಿಳೆಯ ವ್ಯಕ್ತಿತ್ವ ಮೌಲವಿಯವರ ವ್ಯಕ್ತಿತ್ವಕ್ಕಿಂತ ಭಿನ್ನವೆನಿಸಿತು. ಮೌಲವಿಗೆ ರಾಜಕೀಯವೂ ಒಂದು ವ್ಯವಹಾರವಾಗಿತ್ತು. ಮೌಲವಿಯ ಮಡದಿ ಕಟ್ಟಾ ಮುಸ್ಲಿಂ ಲೀಗ್ ಅಭಿಮಾನಿಯಾಗಿದ್ದರು. ಅದಕ್ಕೆ ಕಾರಣ ಮುಹಮ್ಮದ್ ಅಲಿ ಜಿನ್ನಾ ಅವರ ವಿಚಾರಧಾರೆಯೇನಲ್ಲ. ಬದಲಾಗಿ ಅವರು ಪಾಶ್ಚಿಮಾತ್ಯ ಜೀವನ ಶೈಲಿ ರೂಢಿಸಿಕೊಂಡಿದ್ದರು ಎನ್ನುವುದು.
ಜಿನ್ನಾ ಅವರಂತೆ ಆಕೆ ಎಂದೂ ರೋಜಾ (ಉಪವಾಸ ವ್ರತ) ಆಗಲಿ ನಮಾಜ್ ಆಗಲಿ ಮಾಡಿದವರಲ್ಲ. ಅದಕ್ಕೆ ಬದಲಾಗಿ ತನ್ನ ಗಂಡ ತನ್ನನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿದ್ದು ಅವಳಿಗೆ ಅಸಹನೀಯವೆನಿಸಿತ್ತು. ಬುರ್ಖಾ ಧರಿಸುವುದನ್ನು ಆಕೆ ವಿರೋಧಿಸುತ್ತಿದ್ದರು. ಬುರ್ಖಾ ಧರಿಸುವುದು ಇಸ್ಲಾಂ ವಿರೋಧೀ ಆಚರಣೆ ಎಂದು ಅವರು ಸಾಧಿಸುತ್ತಿದ್ದರು. ಅವರು ಕುರ್ಆನ್ ಅಲ್ಲಾಹ್ನ ವಾಣಿ ಹೌದೇ ಅಲ್ಲವೆ ಎಂದು ಎತ್ತರದ ದನಿಯಲ್ಲಿ ಚರ್ಚೆ ಮಾಡುವುದಕ್ಕೆ ಹಿಂಜರಿದವರಲ್ಲ. ಇದರರ್ಥ ಅವರು ಧರ್ಮದಲ್ಲಿ ನಂಬಿಕೆಯಿಲ್ಲದವರೆಂದಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಅವರ ಜಾಯಮಾನದ ಒಂದಂಗವಾಗಿತ್ತು.
ಅವರು ಕಾಲೇಜಿಗೆ ಹೋದವರಲ್ಲ. ಆದರೆ ಗಾಲಿಬ್ನಿಂದ ಹಿಡಿದು ಸಿಗ್ಮಂಡ್ ಫ್ರಾಯ್ಡ್, ಮಾರ್ಕ್ಸ್ ಮುಂತಾದವರ ಕುರಿತು ಅವಳಿಗೆ ಅಷ್ಟಿಷ್ಟು ತಿಳಿವಳಿಕೆ ಇತ್ತು. ಅವರು ಒಂದು ಸುಶಿಕ್ಷಿತ ಮನೆಯಲ್ಲಿ ಬೆಳೆದಿದ್ದರು. ಅವರ ಹಿರಿಯ ಸೋದರ ಮಾವ ಮೌಲಾನಾ ಜಫರ್ ಅಲಿ ಖಾನ್ ‘ಜಮೀನದಾರ್’ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಆಧುನಿಕ ಉರ್ದುವಿನ ಪಿತಾಮಹರೆನಿಸಿಕೊಂಡಿದ್ದರು. ಮೊದಮೊದಲು ಕಾಂಗ್ರೆಸ್ ಸಮರ್ಥಕರಾಗಿದ್ದ ಅವರು ನಂತರ ಮುಸ್ಲಿಂ ಲೀಗ್ ಬೆಂಬಲಿಸಿದರು.
ಅವರ ಇನ್ನೊಬ್ಬ ಸೋದರ ಮಾವ ಸಹ ಪತ್ರಕರ್ತರಾಗಿದ್ದರು. ಅವರು ಹುಮಾಯೂಂ ಎನ್ನುವ ಪ್ರಸಿದ್ಧ ಉರ್ದು ಪತ್ರಿಕೆಯ ಸಂಪಾದಕರಾಗಿದ್ದರು. ಮೂರನೇ ಸೋದರ ಮಾವ ರಾಜಾ ಮೆಹದಿ ಅಲಿ ಖಾನ್ ಮುಂಬೈಯಲ್ಲಿ ಚಿತ್ರ ಗೀತೆ ರಚನಾಕಾರರಾಗಿದ್ದರು ಅವರ ತಾಯಿ ಸಹ ಮಹಿಳೆಯರಿಗಾಗಿ ಎರಡು ಪತ್ರಿಕೆಗಳನ್ನು ಹೊರ ತಂದಿದ್ದರು. ಸಂಪಾದಕಿಯಾಗಿ ಅವರು ಮಹಿಳಾ ಓದುಗರಲ್ಲಿ ತುಂಬ ಜನಪ್ರಿಯರಾಗಿದ್ದರು.
1946ರಲ್ಲಿ ನೆಹರೂ ಅವರ ನೇತೃತ್ವದಲ್ಲಿ ಹಂಗಾಮೀ ಸರ್ಕಾರ ರಚನೆಯಾಯಿತು. ಕಾಂಗ್ರೆಸ್ ಆ ಸಂತೋಷದ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಮನವಿ ಮಾಡಿತು. ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಮುಸ್ಲಿಂ ಲೀಗ್ ಸರ್ಕಾರದಲ್ಲಿ ಪಾಲ್ಗೊಳ್ಳಲಿಲ್ಲ. ಹಾಗಾಗಿ ಮುಸ್ಲಿಂ ಲೀಗ್ ಎಲ್ಲರೂ ತಮ್ಮ ತಮ್ಮ ಮನೆ ಮೇಲೆ ಕಪ್ಪು ಧ್ವಜ ಹಾರಿಸಿ ಪ್ರತಿಭಟನೆ ವ್ಯಕ್ತಪಡಿಸಲು ಕೇಳಿಕೊಂಡಿತು. ಬೆಳ್ಳಂ ಬೆಳಗ್ಗೆ ಎದ್ದ ಮೌಲವಿ ಸ್ನಾನ ಮಾಡಿ ತಮ್ಮ ಮನೆ ಮೇಲೆ ಧ್ವಜ ಹಾರಿಸಲು ಮಾಳಿಗೆ ಮೇಲೆ ಹತ್ತಿ ಹೋದರು.
ಮೌಲವಿಯ ಸಂಭ್ರಮವೆಲ್ಲ ಕ್ಷಣಾರ್ಧದಲ್ಲಿ ನಾಮಾವಶೇಷವಾಯಿತು. ಅವರಿಗೆ ಕೋಪ ನೆತ್ತಿಗೇರಿತು. ಅಲ್ಲಿ ಅವರು ಕಂಡದ್ದೇನು? ತಮ್ಮ ಮನೆ ಮೇಲೇ ಮುಸ್ಲಿಂ ಲೀಗ್ನ ಧ್ವಜ ಹಾರಾಡುತ್ತಿತ್ತು. ಮನೆಯೊಳಗೆ ಬಂದವರೇ ಕೂಗಾಡತೊಡಗಿದರು. ಮೌಲವಿ ಮನೆ ಮೇಲೆ ಎರಡು ಧ್ವಜಗಳ ಹಾರಾಟ ಕಂಡು ಹಾದಿಹೋಕರು ಮುಸಿಮುಸಿ ನಗುತ್ತಿದ್ದರು. ಆದದ್ದೇನೆಂದರೆ ತಮ್ಮ ಮನೆಗೆ ಆಗಮಿಸಿದ್ದ ಮೌಲವಿಯವರ ಮಡದಿಯ ಸೋದರಿಯರು ತಮ್ಮ ಭಾವನನ್ನು ಛೇಡಿಸಲೆಂದು ರಚಿಸಿದ್ದ ಪ್ರಹಸನವದಾಗಿತ್ತು. ಆದರೆ ಮೌಲವಿಯ ಅಟ್ಟಹಾಸಕ್ಕೆ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಗತೊಡಗಿದರು.
ಆ ದಂಪತಿಗಳ ನಿತ್ಯ ಜಗಳಕ್ಕೆ ರಾಜಕೀಯವೇ ಮುಖ್ಯ ಕಾರಣವಾಗಿತ್ತು. ಭಾರತೀಯ ಉಪಖಂಡದ ನಾರಿಯರು ತಮ್ಮ ಗಂಡನಿಗೆ ವಿಧೇಯರಾಗಿರುತ್ತಾರೆ ಎನ್ನುವುದು ಸರ್ವ ವಿದಿತ. ಮೌಲವಿಯ ಮಡದಿ ಬಹಳ ಪ್ರಗತಿಪರ ವಿಚಾರದವರಾಗಿದ್ದರು. ತನ್ನನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿದ ಮೌಲವಿ ಬಗ್ಗೆ ಅವಳಿಗೆ ಎಲ್ಲಿಲ್ಲದ ಅಸಹನೆ. ಕಾಂಗ್ರೆಸ್ನ ಇತರ ಮೌಲವಿಗಳೂ ತಮ್ಮ ಗಂಡನಂತೇ ಇರಬಹದೆಂದು ಅವರು ಭಾವಿಸಿದ್ದರು. ಆದರೆ ಅದೇ ಮುಹಮ್ಮದ್ ಅಲಿ ಜಿನ್ನಾರ ಮನೋಭಾವವನ್ನು ಮೆಚ್ಚಿಕೊಂಡ ಆ ಮಹಿಳೆ ಮುಸ್ಲಿಂ ಲೀಗ್ನ ಸಮರ್ಥನೆಗೆ ನಿಲ್ಲುತ್ತಿದ್ದರು.
ಇದನ್ನು ಓದಿದ್ದೀರಾ?: ಜಾತಿ ಗಣತಿ | ಸಾಮಾಜಿಕ ನ್ಯಾಯಕ್ಕಾಗಿ ಕಾಯುತ್ತಿದೆ ಬುಡಕಟ್ಟು ಕೊರಗ ಸಮುದಾಯ
ತಮ್ಮ ಮನೆಯ ಜಗಳ ಹೊರಗೆ ಯಾರಿಗೂ ಗೊತ್ತಾಗಬಾರದೆಂದು ಮೌಲವಿಯೇನೋ ಬಯಸುತ್ತಿದ್ದರು. ಆದರೆ ಅವರ ಸಿಂಹಗರ್ಜನೆಯಂಥ ಆರ್ಭಟ ಲಾಹೋರ್ ತುಂಬೆಲ್ಲ ಪ್ರತಿಧ್ವನಿಸುತ್ತಿತ್ತು. ಮನೆಯ ನೆಮ್ಮದಿಯನ್ನೇ ಹಾಳು ಮಾಡುವಂಥ ಇಂತಹ ಸನ್ನಿವೇಶ ನಿರ್ಮಾಣವಾದಾಗೆಲ್ಲ ಅವರು ಸೋಮ್ ಆನಂದರ ತಂದೆಯೆದುರು ಹಾಜರಾಗುತ್ತಿದ್ದರು. ತಮ್ಮ ಮಡದಿ ವಿರುದ್ಧ ಅವರು ದೂರುಗಳನ್ನು ಸಲ್ಲಿಸುತ್ತಿದ್ದರು. ಅವರು ಆನಂದರ ತಂದೆಯನ್ನು ಬಹುವಾಗಿ ಗೌರವಿಸುತ್ತಿದ್ದರು.
ಮೌಲವಿ ತಮ್ಮ ಸೋದರಿಯನ್ನು ಹಳ್ಳಿಯ ಒಬ್ಬ ಯುವಕನಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಮೌಲವಿಯ ಮಡದಿಯ ಸೋದರನೊಂದಿಗೆ ಅವಳ ವಿವಾಹ ನಿಶ್ಚಯವಾಗಿತ್ತು. ಮಡದಿಯು ಆ ಯುವತಿ ಸುಶಿಕ್ಷಿತ ಮನೆತನ ಸೇರಲೆಂದು ಬಯಸಿದ್ದರು. ಆದರೆ ಮೌಲವಿ ಹಟಕ್ಕೆ ಬಿದ್ದು ಅವಳನ್ನು ಹಳ್ಳಿಯ ಯುವಕನೊಂದಿಗೆ ಮದುವೆ ಮಾಡಿದ್ದರು. ಅಲ್ಲಿ ಅವಳು ಒಬ್ಬ ಕೈದಿಯಂತಿದ್ದಳು. ಅವಳು ತನ್ನ ಮೇಲೆ ನಡೆಯುತ್ತಿದ್ದ ಅತ್ಯಾಚಾರದಿಂದ ರೋಸಿ ಹೋಗಿದ್ದಳು. ತಮ್ಮ ಗಂಡನನ್ನು ಎದುರು ಹಾಕಿಕೊಂಡು ಮೌಲವಿಯ ಮಡದಿ ಆ ಯುವತಿಯನ್ನು ಲಾಹೋರ್ಗೆ ಕರೆ ತಂದರು.
ಕೊನೆಗೂ ಆಗಬಾರದ್ದು ಆಗಿ ಹೋಯಿತು. ದೇಶ ವಿಭಜನೆ ಆಯಿತು. ಎರಡೂ ದೇಶಗಳಲ್ಲಿ ಕಾನೂನು ಮತ್ತು ವ್ಯವಸ್ಥೆ ಒಂದು ಮಟ್ಟಕ್ಕೆ ಬಂದಿತು. ಉಭಯ ದೇಶಗಳ ಮಧ್ಯೆ ಮತ್ತೆ ಸಂಬಂಧಗಳಲ್ಲಿ ಸುಧಾರಣೆಯಾಯಿತು. ದೆಹಲಿಯಲ್ಲಿ ನೆಲೆಸಿದ ಆನಂದರು ಪಾಕಿಸ್ತಾನಕ್ಕೆ ಮೊದಲ ಸಲ ಭೇಟಿ ಕೊಟ್ಟಾಗ ತಮ್ಮೆಲ್ಲ ಸ್ನೇಹಿತರನ್ನು ಕಂಡರು. ಮೌಲವಿಯ ಮಡದಿಯನ್ನು ಕಾಣದೇ ವಾಪಸಾಗುವುದು ಅವರಿಗೆ ಸಾಧ್ಯವಿರಲಿಲ್ಲ. ”ನೀವು ಈಗ ಹೊಸ ದೇಶದ ನಿವಾಸಿ. ನಿಮ್ಮ ಸೋದರ ಮಾವ ರಾಜ ಮೆಹದಿ ಅಲಿ ಖಾನ್ ಇನ್ನೊಂದು ದೇಶದ ಪ್ರಜೆ. ತಮಗೆ ಹೇಗನಿಸುತ್ತಿದೆ?” ಎಂದು ಆನಂದ ಕೇಳಿದರು. ಅದಕ್ಕೆ ಆ ತಾಯಿ ನಿರುತ್ತರಳಾದಳು. ಅವಳ ಕಣ್ಣಂಚಿನಲ್ಲಿ ನಿಂತ ಎರಡು ಹನಿಗಳು ಅವಳ ಹೃದಯದಾಳದ ಭಾವನೆಗಳನ್ನು ಹೊರಹಾಕಿದ್ದವೇನೋ!

ಪ್ರಸಿದ್ಧ ಉರ್ದು ಕತೆಗಾರ ಸಾದತ್ ಹಸನ್ ಮಂಟೊ ಹಿಂದಿ ಚಿತ್ರ ಜಗತ್ತಿಗೆ ಅವರನ್ನು ಪರಿಚಯಿಸಿದರು. ‘ಆಠ್ ದಿನ್’ ಚಿತ್ರಕ್ಕೆ ರಾಜಾ ಮೆಹದಿ ಅಲಿಖಾನ್ ಚಿತ್ರಗೀತೆಗಳನ್ನು ಬರೆದರು. ಆ ಚಿತ್ರದ ಸಂಭಾಷಣೆ ಬರೆದ ಮಂಟೊ ಅದರಲ್ಲಿ ಒಬ್ಬ ಹುಚ್ಚ ಸೇನಾಧಿಕಾರಿಯ ಪಾತ್ರ ನಿರ್ವಹಿಸಿದ್ದರು. ‘ವತನ್ ಕೀ ರಾಹಮೇಂ ವತನ್ ಕೇ ನೌಜವಾನ್ ಶಹೀದ್ ಹೋಂ’ (ತಾಯ್ನಾಡಿಗಾಗಿ ತಾಯ್ನಾಡಿನ ಯೋಧರೇ ಹುತಾತ್ಮರಾಗಿರಿ) ಎನ್ನುವಂಥ ಹಾಡುಗಳನ್ನು ಬರೆದು ರಾಜಾ ಮೆಹದಿ ಅಲಿ ಖಾನ್ರು ದೇಶ ಪ್ರೇಮ ಮೆರೆದರು.
ಭಾರತದಲ್ಲೇ ನೆಲೆಸಲು ತೀರ್ಮಾನಿಸಿದ ಅವರು ಮಾತ್ರ ಪಾಕಿಸ್ತಾನದಲ್ಲಿ ಒಮ್ಮೆಯೂ ಕಾಲಿಡಲಿಲ್ಲ. ಭಾರತದಲ್ಲಿ ಹುಟ್ಟಿ ಬೆಳೆದಿದ್ದ ಮಂಟೊ ಹುಚ್ಚಾಸ್ಪತ್ರೆಯಾಗಿದ್ದ ಪಾಕಿಸ್ತಾನದಲ್ಲಿ ಕೊನೆಯುಸಿರೆಳೆದರು. ಯಾರು ಯಾವ ದೇಶಕ್ಕೆ ಸೇರಬಯಸಿದ್ದರು? ಯಾರು ಯಾವ ದೇಶದಲ್ಲಿ ಮಣ್ಣಾದರು? ಇದುವೇ ನಮ್ಮ ಇತಿಹಾಸದ ಕ್ರೂರ ವ್ಯಂಗ್ಯ, ಅಲ್ಲವೆ?

ಹಸನ್ ನಯೀಂ ಸುರಕೋಡ
ಲೇಖಕ, ಅನುವಾದಕ