ಜಾತಿಯನ್ನು ಗುರುತಿಸಲು ಬಳಸಿದ ಗುಣಲಕ್ಷಣಗಳಲ್ಲಿ ಆರ್ಥಿಕ ಹಾಗು ರಾಜಕೀಯ ಅಂಶಗಳು ಸೇರದಿರುವುದು ಮಾತ್ರ ಸಮಸ್ಯೆಯಲ್ಲ; ಜಾತಿ ಶ್ರೇಣೀಕರಣಕ್ಕೆ ಬಳಸಿದ ಶುದ್ಧ- ಅಶುದ್ಧ ಮಾನದಂಡಗಳು ಕೂಡ ಹಲವು ಸಮಸ್ಯೆಗಳನ್ನು ಸೃಷ್ಟಿಸಿವೆ.
ಜಾತಿ ಸಮೀಕ್ಷೆ ಅಥವಾ ಸಾಮಾಜಿಕ- ಆರ್ಥಿಕ ಸಮೀಕ್ಷೆ ಪರ-ವಿರೋಧಗಳನ್ನು ಸೃಷ್ಟಿಸಿದೆ. ಎರಡು ನೆಲೆಗಳಿಂದ ಪರ-ವಿರೋಧಗಳು ಹುಟ್ಟಿಕೊಂಡಿವೆ. ಒಂದು, ಜಾತಿ ಕುರಿತ ಅಪಕಲ್ಪನೆಗಳಿಂದ ಹುಟ್ಟಿಕೊಂಡ ವಿರೋಧ, ಮತ್ತೊಂದು ಜಾತಿಯ ರಾಜಕೀಯ ಬಳಕೆಯ ದೃಷ್ಟಿಯಿಂದ ಹುಟ್ಟಿಕೊಂಡ ವಿರೋಧ. ಜಾತಿ ಕುರಿತ ಕೆಲವು ಅಪಕಲ್ಪನೆಗಳು ಸಮೀಕ್ಷೆಯ ಪರ-ವಿರೋಧಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಜಾತಿಯನ್ನು ನಕರಾತ್ಮಕವಾಗಿ ನೋಡುವುದು ಇಂತಹ ಅಪಕಲ್ಪನೆಗಳ ಸಾಲಲ್ಲಿ ಬರುವ ಮೊದಲ ಅಂಶ. ಅಂದರೆ ಜಾತಿ ಇರುವಿಕೆಯನ್ನು ಒಪ್ಪಿಕೊಳ್ಳುವುದು, ಜಾತಿ ಮೂಲಕ ಗುರುತಿಸಿಕೊಳ್ಳುವುದು, ಜಾತಿ ಮತ್ತು ವ್ಯಕ್ತಿಯ ಅಭಿವೃದ್ಧಿಗೂ ಸಂಬಂಧ ಇದೆಯೆಂದು ನಂಬುವುದು, ಜಾತಿ ಬಗ್ಗೆ ಚರ್ಚಿಸುವುದು ಇವೆಲ್ಲವೂ ಆರೋಗ್ಯವಂತ ಸಮಾಜದ ಲಕ್ಷಣಗಳಲ್ಲವೆಂದು ನಂಬುವುದು. ಇದು ಸರಿಯಾದ ನಿಲುವಲ್ಲ. ಏಕೆಂದರೆ ಜಾತಿ ಅದರಷ್ಟಕ್ಕೇ ಅದು ಕೆಟ್ಟದೂ ಅಲ್ಲ ಒಳ್ಳೆಯದೂ ಅಲ್ಲ. ಜಾತಿಯನ್ನು ನಾವು ಕಟ್ಟಿಕೊಳ್ಳುವ ಪರಿ ಹಾಗು ಬಳಸುವ ವಿಧಾನ ಜಾತಿಗೆ ಕೆಟ್ಟ ಅಥವಾ ಒಳ್ಳೆಯ ಚಿತ್ರಣ ನೀಡುತ್ತವೆ.
ಎಲ್ಲ ಸಮಾಜಗಳಲ್ಲೂ ಜನರನ್ನು ಗುಂಪುಗಳಾಗಿ ವಿಂಗಡಿಸುವ ಮತ್ತು ವಿಂಗಡಿತ ಗುಂಪುಗಳನ್ನು ವಿವಿಧ ಹೆಸರುಗಳಿಂದ ಗುರುತಿಸುವ ಕ್ರಮವಿದೆ. ಇದೇ ರೀತಿ ನಮ್ಮ ಸಮಾಜದಲ್ಲಿ ವಿಂಗಡಿತ ಜನರ ಗುಂಪುಗಳನ್ನು ಗುರುತಿಸಲು ಜಾತಿ ಪದ (ಪರಿಭಾಷೆ) ಬಳಕೆಯಾಗುತ್ತಿದೆ. ಜನರು ಪರಸ್ಪರ ಅರ್ಥಮಾಡಿಕೊಳ್ಳಲು ಕೆಲವೊಂದು ಗುಣಲಕ್ಷಣಗಳನ್ನು (ಮಾನದಂಡಗಳನ್ನು) ಬಳಸಿಕೊಂಡು ಜನರನ್ನು ಗುಂಪುಗಳಾಗಿ ವಿಂಗಡಿಸುವ ಕ್ರಮ ಬೆಳೆದಿದೆ. ಅವರ್ಯಾರು? (ಬಣ್ಣ, ಎತ್ತರ, ಚಹರೆ) ಅವರ ಭಾಷೆ ಏನು? ಉಡುಗೆ ತೊಡುಗೆ ಏನು? ಊಟ ಉಪಚಾರ ಹೇಗೆ? ಅವರು ದೇವರು ನಂಬುತ್ತಾರೋ? ನಂಬಿದರೆ ಯಾವ ದೇವರು? ಈ ಎಲ್ಲ ಪ್ರಶ್ನೆಗಳು ಜನರನ್ನು ಅರ್ಥಮಾಡಿಕೊಳ್ಳಲು ಸಹಕರಿಸುತ್ತವೆ.
ಈ ಪ್ರಶ್ನೆಗಳ ಉತ್ತರವೇ ಜನರನ್ನು ಗುಂಪುಗಳಾಗಿ ವಿಂಗಡಿಸಲು ಬಳಸುವ ಮಾನದಂಡಗಳು.
ಹೆಚ್ಚುಕಡಿಮೆ ನಮ್ಮಲ್ಲೂ ಜನರನ್ನು ಗುಂಪುಗಳಾಗಿ (ಜಾತಿಗಳಾಗಿ) ವಿಂಗಡಿಸಲು ಇವೇ ಮಾನದಂಡಗಳನ್ನು (ಉಡುಗೆತೊಡುಗೆ, ದೇವರುದಿಂಡ್ರು, ಕಸುಬು, ಭಾಷೆ ಇತ್ಯಾದಿಗಳನ್ನು) ಬಳಸಿದ್ದಾರೆ. ವಿಂಗಡಿತ ಗುಂಪುಗಳನ್ನು ಸಮಾನಾಂತರವಾಗಿ ಜೋಡಿಸಿಲ್ಲ; ಪಿರಮಿಡ್ ರೂಪದಲ್ಲಿ ಜೋಡಿಸಿದ್ದಾರೆ. ಈ ಶ್ರೇಣೀಕೃತ ಜೋಡಣೆಯನ್ನು ಶುದ್ಧ ಅಶುದ್ಧಗಳ ಮಾನದಂಡವನ್ನು ಬಳಸಿಕೊಂಡು ಮಾಡಿದ್ದಾರೆ. ಯಾವ ಗುಂಪಿನ (ಜಾತಿಯ) ದೇವರು, ಊಟ-ಉಪಚಾರ, ಕಸುಬು, ಉಡುಗೆ-ತೊಡುಗೆ ಶುದ್ಧವಾಗಿದೆಯೋ ಆ ಜಾತಿ ಏಣಿಯ ಮೇಲಿದ್ದರೆ ಶುದ್ಧತೆ ಕಡಿಮೆಯಾದಂತೆ ಜಾತಿ ಏಣಿಯ ಕೆಳಕೆಳಗೆ ಬರುತ್ತದೆ ಮತ್ತು ಅತ್ಯಂತ ಅಶುದ್ಧ ಜಾತಿ ಏಣಿಯ ಬುಡದಲ್ಲಿರುತ್ತದೆ ಎಂದು ತೀರ್ಮಾನಿಸಲಾಯಿತು. ಹೀಗೆ ಜಾತಿಯನ್ನು ಗುರುತಿಸಲು ಮತ್ತು ಅವುಗಳನ್ನು ಶ್ರೇಣೀಕರಿಸಲು ಬಳಸಿದ ಮಾನದಂಡಗಳು ಸಮಸ್ಯೆಯ ಮೂಲವಾಗಿವೆ.
ಚಾರಿತ್ರಿಕವಾಗಿ ರೂಪುಗೊಂಡ ಗುಂಪುಗಳನ್ನು (ಜಾತಿಯನ್ನು) ಗುರುತಿಸಲು ದೇವರು, ಭಾಷೆ, ಉಡುಗೆತೊಡುಗೆ, ಊಟ, ಕಸುಬುಗಳನ್ನು ಬಳಸಿರುವುದು ಮೊದಲ ಸಮಸ್ಯೆ. ಜಾತಿ ಚರ್ಚೆಯಲ್ಲಿ ಯಾರು ಯಾರಿಂದ ಆಹಾರ ಸ್ವೀಕರಿಸಬಹುದು? ಸಸ್ಯಾಹಾರಿಗಳೇ? ಮಾಂಸಾಹಾರಿಗಳೇ? ಬೇಯಿಸಿದ ಆಹಾರ ಸ್ವೀಕರಿಸಬಹುದೇ? ಎಡಗೈಯಲ್ಲಿ ತಿನ್ನಬೇಕೇ? ಬಲಗೈಯಲ್ಲಿ ತಿನ್ನಬೇಕೇ? ಇವೇ ದೊಡ್ಡ ಚರ್ಚೆಯ ವಿಷಯಗಳಾಗಿವೆ. ಆದರೆ ಇದೇ ಆಹಾರವನ್ನು ಯಾರು ಬೆಳೆದಿದ್ದಾರೆ? ಹೇಗೆ ಬೆಳೆದಿದ್ದಾರೆ? ಬೆಳೆದವರ ಒಡೆತನದಲ್ಲಿ ಭೂಮಿ ಇತ್ತೇ ಅಥವಾ ಮತ್ತೊಬ್ಬರ ಭೂಮಿಯಲ್ಲಿ ಲಾವಣಿಗೆ ಅಥವಾ ಕೂಲಿಗೆ ಬೆಳೆದಿದ್ದಾರೋ? ಬೆಳೆದವರ ಸಂಪನ್ಮೂಲಗಳ ಒಡೆತನ ಏನು? ಅವರ ಶಿಕ್ಷಣ, ಆರೋಗ್ಯಗಳ ಸ್ಥಿತಿ ಏನು? ಈ ಎಲ್ಲ ಪ್ರಶ್ನೆಗಳು ಜಾತಿ ಚರ್ಚೆಯೊಳಗೆ ಬರಲೇ ಇಲ್ಲ.
ಇದನ್ನೂ ಓದಿ ಜಾತಿ ಗಣತಿ | ಸಾಮಾಜಿಕ ನ್ಯಾಯಕ್ಕಾಗಿ ಕಾಯುತ್ತಿದೆ ಬುಡಕಟ್ಟು ಕೊರಗ ಸಮುದಾಯ
ಇದೊಂದು ರೀತಿಯಲ್ಲಿ ನಮ್ಮ ಸಿನಿಮಾಗಳ ನಾಯಕ ನಾಯಕಿಯರ ಬದುಕಿನಂತೆ. ಅವರು ದಿನವಿಡೀ ಪಾರ್ಕ್‍ಗಳಲ್ಲಿ ಸುತ್ತಾಡುತ್ತಾರೆ, ಪ್ರೇಮಗೀತೆ ಹಾಡುತ್ತಾರೆ, ಕಾರಲ್ಲಿ ಓಡಾಡುತ್ತಾರೆ, ಐಷರಾಮಿ ಹೊಟೇಲುಗಳಲ್ಲಿ ತಿನ್ನುತ್ತಾರೆ. ಆದರೆ ಸಿನಿಮಾದ ಕೊನೆತನಕ ಇವೆಲ್ಲ ಸುಖಗಳನ್ನು ಅನುಭವಿಸಲು ಅವರಿಗೆ ಎಲ್ಲಿಂದ ಆದಾಯ ಬರುತ್ತಿದೆ ಎಂದು ತೋರಿಸುವುದೇ ಇಲ್ಲ. ಇವೆಲ್ಲವನ್ನು ಕೆಲವರು ಅನುಭವಿಸಬೇಕಾದರೆ ಮತ್ತೆ ಕೆಲವರು ಈ ಸಂಪನ್ಮೂಲಗಳನ್ನು ಉತ್ಪಾದಿಸಲು ದುಡಿದಿರಲೇಬೇಕು. ದುಡಿತದ ಬದುಕು ಸಿನಿಮಾದಲ್ಲೂ ಅವಕಾಶ ಪಡೆಯಲಿಲ್ಲ, ನಮ್ಮ ಜಾತಿ ವ್ಯಾಖ್ಯಾನದಲ್ಲೂ ಅವಕಾಶ ಪಡೆಯಲಿಲ್ಲ.
ಜಾತಿಯನ್ನು ಗುರುತಿಸಲು ಬಳಸಿದ ಗುಣಲಕ್ಷಣಗಳಲ್ಲಿ ಆರ್ಥಿಕ ಹಾಗು ರಾಜಕೀಯ ಅಂಶಗಳು ಸೇರದಿರುವುದು ಮಾತ್ರ ಸಮಸ್ಯೆಯಲ್ಲ; ಜಾತಿ ಶ್ರೇಣೀಕರಣಕ್ಕೆ ಬಳಸಿದ ಶುದ್ಧ ಅಶುದ್ಧ ಮಾನದಂಡಗಳು ಕೂಡ ಹಲವು ಸಮಸ್ಯೆಗಳನ್ನು ಸೃಷ್ಟಿಸಿವೆ. ಇದು ಕೆಲವರಿಗೆ ಅನುಕೂಲವಾಗಿ ಪರಿಣಮಿಸಿದರೆ ಹಲವರಿಗೆ ನಷ್ಟ ಮಾಡಿದೆ. ಜಾತಿ ಶ್ರೇಣೀಕರಣದ ಬುಡದಲ್ಲಿರುವವರ ಕಸುಬು, ಊಟ, ದೇವರು, ಉಡುಗೆತೊಡುಗೆ ಎಲ್ಲವೂ ಅಶುದ್ಧ. ಆದುದರಿಂದ ಇವು ಉಳಿದವರು ಸ್ವೀಕರಿಸಲು ಯೋಗ್ಯವಲ್ಲ. ಇಂತಹ ಶ್ರೇಣೀಕರಣದಿಂದ ತಳ ಜಾತಿಗಳು ಚರಿತ್ರೆಯಲ್ಲೂ ಸಾಕಷ್ಟು ಅನ್ಯಾಯ ಅನುಭವಿಸಿವೆ. ನಮ್ಮ ಚರಿತ್ರೆ, ಸಂಸ್ಕೃತಿ ಕಥನಗಳಲ್ಲಿ ಗುಡಿಗೋಪುರಗಳು, ಮಠಮಂದಿರಗಳು, ರಾಜಮಹಾರಾಜರು, ಅವರ ಸೋಲು-ಗೆಲುವುಗಳು ತುಂಬಿ ತುಳುಕುತ್ತಿವೆ. ಇದೇ ಗುಡಿ-ಗೋಪುರಗಳನ್ನು, ಅರಮನೆಗಳನ್ನು ಕಟ್ಟಿದವರು, ಅವರ ಬದುಕು ಬವಣೆಗಳು ನಮ್ಮ ಸಂಸ್ಕೃತಿಕ ಕಥನಗಳಲ್ಲಿ ಅವಕಾಶ ಪಡೆಯಲೇ ಇಲ್ಲ. ಇತರರ ಸಮೀಪ ವಾಸ ಮಾಡುವುದು, ಭೂಮಿ ಹೊಂದುವುದು, ಶುಭ್ರ ಬಟ್ಟೆ ಧರಿಸುವುದು, ಚಪ್ಪಲಿ ಹಾಕುವುದು, ತಮ್ಮ ಮಕ್ಕಳಿಗೆ ಸುಂದರವಾದ ಹೆಸರಿಡುವುದು, ಇತರರಿಂದ ಗೌರವ ನಿರೀಕ್ಷಿಸುವುದು ಇವೆಲ್ಲವೂ ಇವರಿಗೆ ಗಗನ ಕುಸುಮಗಳಾಗಿದ್ದವು. ಸ್ವಾತಂತ್ರ್ಯ ನಂತರವೂ ಈ ಸ್ಥಿತಿ ಸಂಪೂರ್ಣ ಬದಲಾಗಿಲ್ಲ. ಇವರು ಹೊಟೇಲು ಅಂಗಡಿ ತೆರೆದರೆ ಗಿರಾಕಿಗಳು ಬರುವುದಿಲ್ಲ. ಇವರು ಮನೆ ಬಾಡಿಗೆಗೆ ಕೊಡಲಿಚ್ಚಿಸಿದರೆ ಜನ ಬರುವುದಿಲ್ಲ. ಇವರ ದೇವರಿಗೆ ಊರವರೆಲ್ಲ ನಡೆದುಕೊಳ್ಳುವುದಿಲ್ಲ. ಇವರ ಬದುಕಿನ ಕತೆಗಳು ಸಿನಿಮಾಗಳಾಗುವುದಿಲ್ಲ, ಟಿವಿ ಸೀರಿಯಲ್‍ಗಳಾಗುವುದಿಲ್ಲ. ಇವರ ನಾಯಕರು ಊರ ನಾಯಕರಾಗುವುದಿಲ್ಲ. ಇವರ ಹೆಸರುಗಳು ಬೀದಿ, ಪಾರ್ಕ್, ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಗಳ ಹೆಸರುಗಳಾಗುವುದಿಲ್ಲ.
ಈ ಎಲ್ಲ ಕಾರಣಗಳಿಂದ ಚಾರಿತ್ರಿಕವಾಗಿ ರೂಪುಗೊಂಡ ಏಣಿಶ್ರೇಣಿಗಳು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಇಂದು ಕೂಡ ಮುಂದುವರಿಯುತ್ತಿವೆ. ಕೆಲವು ಅಧ್ಯಯನಗಳ ಪ್ರಕಾರ ನಮ್ಮಲ್ಲಿ ಸುಮಾರು 24 ಕೋಟಿ ಅತ್ಯಂತ ಬಡವರಿದ್ದಾರೆ. ಅತ್ಯಂತ ಬಡವರೆಂದರೆ ಮೂರು ಹೊತ್ತಿನ ಊಟ, ವಸತಿ, ಶಿಕ್ಷಣ, ಆರೋಗ್ಯಗಳಿಗೆ ಪರದಾಡುವವರು. ಅತ್ಯಂತ ಬಡವರಲ್ಲಿ ಅರ್ಧದಷ್ಟು (ಶೇ.41) ದಲಿತಬುಡಕಟ್ಟು ಜನರಿದ್ದರೆ ಮೂರನೇ ಒಂದು ಭಾಗದಷ್ಟು ಹಿಂದುಳಿದ ಜಾತಿ ಜನರಿದ್ದಾರೆ. ಶೇ.16ರಷ್ಟು ಮುಸ್ಲಿಮರು ಕೂಡ ಅತ್ಯಂತ ಬಡವರು. ಮೇಲ್ಜಾತಿಗಳಲ್ಲಿ ಅತ್ಯಲ್ಪ ಸಂಖ್ಯೆಯ (ಶೇ.9ರಷ್ಟು) ಜನರು ಅತ್ಯಂತ ಬಡವರಿದ್ದಾರೆ.
ಇದೇ ಸಂದರ್ಭದಲ್ಲಿ ನಮ್ಮಲ್ಲಿ ಸುಮಾರು 4 ಕೋಟಿ ಶ್ರೀಮಂತರಿದ್ದಾರೆ. ಇವರು ಬಡತನ ರೇಖೆಗಿಂತ ಹಲವುಪಟ್ಟು ಹೆಚ್ಚು ಆದಾಯ ಹೊಂದಿರುವವರು. ಅತ್ಯಂತ ಬಡವರಲ್ಲಿ ದಲಿತ ಬುಡಕಟ್ಟುಗಳು ಹೇಗೆ ಹೆಚ್ಚಿದ್ದಾರೋ ಅದೇ ರೀತಿಯಲ್ಲಿ 4 ಕೋಟಿ ಶ್ರೀಮಂತರಲ್ಲಿ ಅರ್ಧಕ್ಕಿಂತಲೂ ಹೆಚ್ಚು (ಶೇ.65) ಮೇಲ್ಜಾತಿ ಜನರಿದ್ದಾರೆ. ದಲಿತ ಬುಡಕಟ್ಟು ಮತ್ತು ಮುಸ್ಲಿಮರಲ್ಲಿ ಅತ್ಯಲ್ಪ ಜನರು (ಶೇ.7) ಶ್ರೀಮಂತರಿದ್ದಾರೆ. ಇವರಿಗೆ ಹೋಲಿಸಿದರೆ ಹಿಂದುಳಿದ ಜಾತಿಗಳು ವಾಸಿ. ನಾಲ್ಕು ಕೋಟಿ ಶ್ರೀಮಂತರಲ್ಲಿ ಹಿಂದುಳಿದ ಜಾತಿಗಳ ಶೇ.21 ಜನರಿದ್ದಾರೆ. ಹೀಗೆ ಆರೇಳು ದಶಕಗಳ ಅಭಿವೃದ್ಧಿಯ ನಂತರವೂ ಚಾರಿತ್ರಿಕ ಏಣಿಶ್ರೇಣಿಗಳು ಮುಂದುವರಿಯುತ್ತಿವೆ. ಈ ಬಗೆಯ ಮುಂದುವರಿಕೆಗೆ ಒಂದು ಕಾರಣ ಜಾತಿಯನ್ನು ಸಾಮಾಜಿಕ ಸಾಂಸ್ಕೃತಿಕ ಅಂಶಗಳ ಮೂಲಕ ಗುರುತಿಸುವುದು. ಈ ಲೋಪವನ್ನು ಕರ್ನಾಟಕ ಸರಕಾರ ನಡೆಸುವ ಜಾತಿ ಸಮೀಕ್ಷೆ ಸರಿಪಡಿಸಬಹುದು. ಈ ಸಮೀಕ್ಷೆಯಲ್ಲಿ ಜಾತಿಯನ್ನು ಗುರುತಿಸಲು ತಿನ್ನುವ ಆಹಾರ ದೇವರಿಗಿಂತ ಹೆಚ್ಚು ಶಿಕ್ಷಣ, ಆರೋಗ್ಯ, ಭೂಮಿ, ಸಂಪನ್ಮೂಲಗಳ ಒಡೆತನಗಳು ಮುಖ್ಯವೆಂದು ಪರಿಗಣಿಸಲ್ಪಡುತ್ತಿವೆ. ಎಲ್ಲ ಜಾತಿಗಳಲ್ಲಿರುವ ಭೂಮಿ ಇಲ್ಲದ, ಉನ್ನತ ಶಿಕ್ಷಣ ಇಲ್ಲದ, ನಿಶ್ಚಿತ ಆದಾಯ ಇಲ್ಲದ, ಕೂಲಿನಾಲಿ ಮಾಡಿ ಬದುಕುವ ಕುಟುಂಬಗಳನ್ನು ಈ ಸಮೀಕ್ಷೆ ಗುರುತಿಸಬಹುದು.
ಇದನ್ನೂ ಓದಿ ಜಾತಿ ಗಣತಿ | ವರದಿ ಬಿಡುಗಡೆಯಾದರೆ ಸಮಾಜ ಒಡೆದು ಹೋಗುತ್ತದೆ ಎನ್ನುವುದು ರಾಜಕೀಯ ಷಡ್ಯಂತ್ರದ ಹೇಳಿಕೆ
ರಾಜಕೀಯ ದೃಷ್ಟಿಯಿಂದ ವಿರೋಧ
ಜಾತಿ ಸಮೀಕ್ಷೆಯ ರಾಜಕೀಯ ಬಳಕೆಯ ದೃಷ್ಟಿಯಿಂದ ಹುಟ್ಟಿಕೊಳ್ಳುವ ವಿರೋಧವನ್ನು ಪರಿಶೀಲಿಸುವ. ಇಲ್ಲಿ ಮೇಲ್ನೋಟಕ್ಕೆ ಎರಡು ರಾಜಕೀಯ ಬಣಗಳು ಕಾಣುತ್ತಿವೆ. ಒಂದು ಜಾತಿ ಸಮೀಕ್ಷೆಯನ್ನು ಸಮರ್ಥಿಸುವ ರಾಜಕೀಯ ಪಕ್ಷಗಳ ಬಣ ಮತ್ತೊಂದು ವಿರೋಧಿಸುವ ಪಕ್ಷಗಳ ಬಣ. ಸಮರ್ಥಿಸುವ ಪಕ್ಷಗಳು ವಾದ ಸರಳವಾಗಿದೆ. ಹಲವು ದಶಕಗಳು ಅಭಿವೃದ್ಧಿ ನಂತರವೂ ತಳಸ್ತರದ ಸಮುದಾಯಗಳು ಇನ್ನೂ ಏಳಿಗೆ ಕಂಡಿಲ್ಲ. ಇವುಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸ್ವಷ್ಟ ಚಿತ್ರಣ ಅವರ ಅಭಿವೃದ್ಧಿಗೆ ಅನಿವಾರ್ಯ ಎನ್ನುವುದು ಇವರ ವಾದ. ಈ ವಾದವನ್ನು ಮುಖಬೆಲೆಯಲ್ಲಿ ತೆಗೆದುಕೊಳ್ಳುವುದು ಕಷ್ಟ. ಏಕೆಂದರೆ ಈ ಅಂಕಿಅಂಶಗಳು ವಿವಿಧ ಸಮುದಾಯಗಳ ಅಭಿವೃದ್ದಿ ಮೇಲೆ ಮಾಡುವ ಪರಿಣಾಮ ರಾಜಕೀಯ ಪಕ್ಷಗಳು ಮತ್ತು ಸರಕಾರಗಳು ಈ ಅಂಕಿಅಂಶಗಳನ್ನು ಬಳಸಿಕೊಳ್ಳುವ ವಿಧಾನದ ಮೇಲೆ ನಿಂತಿದೆ.
ಈ ಅಂಕಿಅಂಶಗಳನ್ನು ಪ್ರಗತಿಪರ ರಾಜಕೀಯಕ್ಕೆ ಬಳಸಲು ಸಾಧ್ಯವಾದಂತೆ ಉಪಜಾತಿ ರಾಜಕೀಯಕ್ಕೂ ಬಳಸಬಹುದು. ಪ್ರಗತಿಪರ ರಾಜಕೀಯಕ್ಕೆ ಬಳಸಿದರೆ ವಿವಿಧ ಜಾತಿಗಳ ನಡುವಿನ ಅಭಿವೃದ್ಧಿ ಅಂತರ ಕಡಿಮೆಯಾಗಬಹುದು. ಒಂದು ವೇಳೆ ಇವೇ ಅಂಕಿಅಂಶಗಳು ಉಪಜಾತಿಗಳ ಗುರುತಿನ ರಾಜಕೀಯಕ್ಕೆ ಬಳಕೆಯಾದರೆ ಇನ್ನೊಂದಿಷ್ಟು ಉಪಜಾತಿಗಳ ಬಲಾಢ್ಯರು ಸೃಷ್ಟಿಯಾಗಬಹುದು. ಇದೇ ರೀತಿಯಲ್ಲಿ ಬಡತನ ನಿವಾರಣ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಅಂಕಿಅಂಶಗಳು ಅನಿವಾರ್ಯವೆನ್ನುವ ವಾದವನ್ನು ಮುಖಬೆಲೆಯಲ್ಲಿ ತೆಗೆದುಕೊಳ್ಳುವುದು ಕಷ್ಟ. ಏಕೆಂದರೆ ತೊಂಬತ್ತರದ ನಂತರ ಸರಕಾರಗಳು ಅನುಸರಿಸುತ್ತಿರುವ ಅಭಿವೃದ್ಧಿ ನೀತಿಗಳು ಬಡತನದ ಸೃಷ್ಟಿಯಲ್ಲಿ ಪರಿಸರಕ್ಕಿಂತ ವ್ಯಕ್ತಿಯ ಪಾತ್ರ ದೊಡ್ಡದಿದೆ ಎನ್ನುವ ನಿಲುವನ್ನು ಪ್ರತಿಪಾದಿಸುತ್ತಿವೆ. ಆದರೆ ವಾಸ್ತವದಲ್ಲಿ ಬಡತನದ ಸೃಷ್ಟಿಯಲ್ಲಿ ಒಟ್ಟು ಪರಿಸರದ ಪಾತ್ರ ದೊಡ್ಡದಿದೆ. ಕಾರ್ಮಿಕ ಕಾನೂನುಗಳು, ಪರೋಕ್ಷ ತೆರಿಗೆಗಳು, ಅನಧಿಕೃತ ಉದ್ಯೋಗಳು, ಅಸಂಘಟಿತ ವಲಯ ಇವೆಲ್ಲವೂ ಬಡತನವನ್ನು ಸೃಷ್ಟಿಸುತ್ತಿವೆ. ಇವನ್ನು ಸುಧಾರಿಸದಿದ್ದರೆ ಬಡತನ ನಿವಾರಣೆ ಸಾಧ್ಯವಿಲ್ಲ. ಆದುದರಿಂದ ಜಾತಿ ಸಮೀಕ್ಷೆ ಜೊತೆಗೆ ನಮ್ಮ ಅಭಿವೃದ್ಧಿ ನೀತಿಗಳನ್ನು ತಳಸ್ತರದ ಜನರ ಪರ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಕೂಡ ಇದೆ.
ಜಾತಿ ಸಮೀಕ್ಷೆಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ನಿಲುವು ಸ್ಪಷ್ಟವಾಗಿದೆ. ಹಲವು ದಶಕಗಳ ಕಾಲ ಜಾತಿ ಮತ್ತು ಧರ್ಮದ ಗುರುತಿನ ರಾಜಕೀಯದಿಂದ ಎಲ್ಲ ಜಾತಿ ಮತ್ತು ಧರ್ಮಗಳಿಂದಲೂ ಒಂದು ಸಣ್ಣ ಮೇಲ್ವರ್ಗ ಸೃಷ್ಟಿ ಆಗಿದೆ. ಇವರು ಇಂದಿನ ರೂಲಿಂಗ್ ಕ್ಲಾಸ್ ಆಗಿದ್ದಾರೆ. ಜಾತಿ, ಧರ್ಮ ಗುರುತಿನ ರಾಜಕೀಯದ ಅತೀ ಹೆಚ್ಚಿನ ಲಾಭ ಪಡೆದ ಇವರು ಪಿರಮಿಡ್ ತುದಿಯಲ್ಲಿದ್ದಾರೆ. ಇವರಲ್ಲಿ ಅತೀ ಹೆಚ್ಚು ಅಧಿಕಾರ, ಸಂಪತ್ತು ಮತ್ತು ಸ್ಥಾನಮಾನ ಕ್ರೋಢೀಕರಣಗೊಂಡಿದೆ.
ಜಾತಿ ಸಮೀಕ್ಷೆಯಿಂದ ಹೊಸ ರಾಜಕೀಯ ಸಮೀಕರಣಗಳು ಸೃಷ್ಟಿಯಾಗಿ ಅವು ಎಲ್ಲಿ ತಮ್ಮ ವರ್ಗ ಆಸಕ್ತಿಗೆ ದಕ್ಕೆ ತರಬಹುದೋ ಎನ್ನುವ ಗುಮಾನಿ ಇವರನ್ನು ಕಾಡುತ್ತಿದೆ. ಇವರಲ್ಲಿ ಎರಡು ಗುಂಪುಗಳಿವೆ. ಒಂದು ಜಾತಿ ರಾಜಕೀಯದ ಬಲದಿಂದ ಮೇಲೆ ಬಂದವರು ಮತ್ತೊಂದು ಧರ್ಮದ ರಾಜಕೀಯದಿಂದ ಮೇಲೆ ಬಂದವರು. ಜಾತಿ ರಾಜಕೀಯದಿಂದ ಮೇಲೆ ಬಂದವರು ಜಾತಿ ಸಮೀಕ್ಷೆಯನ್ನು ಸಮರ್ಥಿಸುವ ಪಕ್ಷದಲ್ಲೂ ಇದ್ದಾರೆ. ಉದಾಹರಣೆಗೆ ಇಂದು ಕಾಂಗ್ರೆಸ್ ಪಕ್ಷ ಜಾತಿ ಸಮೀಕ್ಷೆಯನ್ನು ಸಮರ್ಥಿಸುತ್ತಿದೆ. ಆದರೆ ಅದರೊಳಗೂ ಸಮೀಕ್ಷೆಯನ್ನು ವಿರೋಧಿಸುವವರಿದ್ದಾರೆ. ಧರ್ಮದ ಗುರುತಿನ ಬಲ ನಂಬಿ ರಾಜಕೀಯ ಮಾಡುವ ಬಿಜೆಪಿ ಮೊದಲಿನಿಂದಲೂ ಜಾತಿ ರಾಜಕೀಯಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಏಕೆಂದರೆ ಜಾತಿ ಗುರುತುಗಳು ಬಲಗೊಂಡಂತೆ ಅವರ ಧರ್ಮದ ಗುರುತಿನ ರಾಜಕೀಯ ಹಿಂದಕ್ಕೆ ಸರಿಯುವ ಸಾಧ್ಯತೆ ಇದೆ.
ಇವರ ವಿರೋಧಗಳು ನಮ್ಮಲ್ಲಿ ರೂಪುಗೊಂಡ ವರ್ಗ ಚಿತ್ರಣಕ್ಕೆ ಅಲ್ಪಸ್ವಲ್ಪ ಸ್ಪಷ್ಟತೆಯನ್ನು ಕೊಡುತ್ತಿವೆ. ಕರ್ನಾಟಕದಲ್ಲಿ ಎರಡು ಪ್ರಮುಖ ಸಮುದಾಯಗಳು (ಲಿಂಗಾಯತ ಮತ್ತು ಒಕ್ಕಲಿಗರ ಗುಂಪುಗಳು) ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲೂ ಇದ್ದಾರೆ. ಬಿಜೆಪಿ ಧರ್ಮದ ಗುರುತಿನ ರಾಜಕೀಯ ಮಾಡಿದರೂ ಕರ್ನಾಟಕದಲ್ಲಿ ಅದು ಜಾತಿ ಗುರುತನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಆದುದರಿಂದ ಕರ್ನಾಟಕಕ್ಕೆ ಸೀಮಿತಗೊಂಡಂತೆ ವಾದಿಸುವುದಾದರೆ ಇಲ್ಲಿ ಜಾತಿ ಸಮೀಕ್ಷೆಗೆ ವಿರೋಧ ಧರ್ಮದ ನೆಲೆಯ ರಾಜಕೀಯದಿಂದ ಸೃಷ್ಟಿಯಾಗಿಲ್ಲ; ಜಾತಿ ನೆಲೆಯ ರಾಜಕೀಯದಿಂದಲೇ ಸೃಷ್ಟಿ ಅಗಿದೆ ಎನ್ನಬಹುದು. ಈಗಾಗಲೇ ಸ್ಪಷ್ಟಪಡಿಸಿದಂತೆ ಎರಡು ಪ್ರಮುಖ ಸಮುದಾಯಗಳು ತಮ್ಮ ವಿರೋಧವನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ. ವಿರೋಧಕ್ಕೆ ಇವರು ನೀಡುವ ಕಾರಣಗಳು ವಿರೋಧದ ಹಿಂದಿರುವ ನಿಜವಾದ ಉದ್ದೇಶವನ್ನು ಹೊರ ಹಾಕುವುದಿಲ್ಲ. ನಿಜವಾದ ಉದ್ದೇಶ ಈ ಎರಡು ಪ್ರಮುಖ ಸಮುದಾಯಗಳ ಮೇಲ್ವರ್ಗ ಹಲವು ದಶಕಗಳಿಂದ ಅಭಿವೃದ್ಧಿಯ ಹೆಚ್ಚಿನ ಪಾಲು ಪಡೆದಿವೆ.
ಇಲ್ಲಿ ಗಮನಿಸಬೇಕಾದ ಅಂಶ ಈ ಎರಡೂ ಸಮುದಾಯಗಳಲ್ಲೂ ಒಂದು ಸಣ್ಣ ವರ್ಗ ಹೆಚ್ಚಿನ ಪಾಲು ಪಡೆದಿದೆ ಹೊರತು ಸಮುದಾಯಕ್ಕೆ ಸೇರಿದ ಎಲ್ಲರೂ ಪಡೆದಿಲ್ಲ. ಆದುದರಿಂದ ಈ ಎರಡೂ ಸಮುದಾಯಗಳಲ್ಲೂ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಭೂರಹಿತರು, ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸಣ್ಣ, ಅತೀ ಸಣ್ಣ ಕೃಷಿಕರು, ವ್ಯಾಪಾರಿ, ಉದ್ದಿಮೆದಾರರಿದ್ದಾರೆ. ಇವರ ಆರ್ಥಿಕ ಸ್ಥಿತಿಗೂ ಇತರ ಸಮುದಾಯಗಳ ತಳಸ್ತರದ ಜನರ ಆರ್ಥಿಕ ಸ್ಥಿತಿಗೂ ವಿಶೇಷ ವ್ಯತ್ಯಾಸ ಇಲ್ಲ. ಆದರೆ ಹಲವು ವರ್ಷಗಳ ಬಲಾಢ್ಯ ಜಾತಿ ರಾಜಕಾರಣ ಮತ್ತು ಅದು ದಾಟಿಸುವ ಅಲ್ಪಸ್ವಲ್ಪ ಸವಲತ್ತುಗಳು ಈ ಸಮುದಾಯಗಳ ತಳಸ್ತರ ಜನರಿಗೆ ಬೇರೆ ಸಮುದಾಯಗಳ ತಳಸ್ತರದ ಜನರೊಂದಿಗೆ ಗುರುತಿಸಲು ಅಡ್ಡಿಯಾಗಿವೆ.
ಇವೆಲ್ಲ ಜಾತಿ ಸಮೀಕ್ಷೆಯನ್ನು ವಿರೋಧಿಸುವ ಬಲಾಢ್ಯ ಸಮುದಾಯಗಳಿಗೆ ಅಸ್ತ್ರಗಳಾಗಿವೆ. ಇದಕ್ಕೆ ಸುಲಭ ಪರಿಹಾರವಿಲ್ಲ. ಈ ಸಮಸ್ಯೆಯನ್ನು ಸರಕಾರವೇ ಪರಿಹರಿಸಬೇಕೆಂದು ತಳಸ್ತರದಲ್ಲಿರುವ ಸಮುದಾಯಗಳು ಬಯಸಬಹುದು. ನಾನು ಈಗಾಗಲೇ ಮೇಲೆ ತಿಳಿಸಿದಂತೆ ಜಾತಿ ಸಮೀಕ್ಷೆಯನ್ನು ಬೆಂಬಲಿಸುವ ಪಕ್ಷದಲ್ಲಿರುವ ಬಲಾಢ್ಯರು ಕೂಡ ಇದರ ವಿರುದ್ಧ ಇರುವುದರಿಂದ ಜಾತಿ ಸಮೀಕ್ಷೆಯನ್ನು ಸರಕಾರವೇ ಜಾರಿ ತರಬೇಕೆನ್ನುವ ನಿಲುವು ಹೆಚ್ಚಿನ ಫಲ ನೀಡಲು ಸಾಧ್ಯವಿಲ್ಲ.
ಏಕೆಂದರೆ ಸರಕಾರದ ಏಳುಬೀಳುಗಳು ಪಕ್ಷದೊಳಗಿನ ಪರ ವಿರೋಧಗಳ ಮೇಲೆ ನಿಂತಿದೆ. ವಿರೋಧಿಸುವವರು ತಮ್ಮ ಸಂಘಟಿತ ವಿರೋಧವನ್ನು ವ್ಯಕ್ತಪಡಿಸಿದಷ್ಟು ಪ್ರಮಾಣದಲ್ಲಿ ಇದರಿಂದ ಲಾಭ ಪಡೆಯಲಿರುವ ತಳ ಸಮುದಾಯಗಳ ಸಂಘಟಿತ ಬೆಂಬಲ ಕಾಣುತ್ತಿಲ್ಲ. ಎಲ್ಲಿ ತನಕ ಜಾತಿ ಸಮೀಕ್ಷೆಯನ್ನು ಜಾರಿಗೆ ತರಬೇಕೆನ್ನುವವರ ಸಂಘಟಿತ ಧ್ವನಿ ವಿರೋಧಿಸುವವರ ಧ್ವನಿಗಿಂತ ಗಟ್ಟಿಯಾಗಿರುವುದಿಲ್ಲವೋ ಅಲ್ಲಿವರೆಗೆ ಸರಕಾರ ಇದನ್ನು ಜಾರಿ ತರುವ ಸಾಧ್ಯತೆಗಳು ಕಡಿಮೆ ಇರಬಹುದು. ಒಂದು ವೇಳೆ ಜಾತಿ ಸಮೀಕ್ಷೆ ಜಾರಿಗೆ ತರಬೇಕೆನ್ನುವವರು ಸಂಘಟಿತರಾಗಿ ಒತ್ತಡ ತರದಿದ್ದರೂ ಇದು ಜಾರಿಗೆ ಬಂದರೆ ಈ ಸಮೀಕ್ಷೆಯ ಅನುಷ್ಠಾನ ಅದರ ಮೂಲ ಉದ್ದೇಶಕ್ಕೆ ಅನುಗುಣವಾಗಿ ಇರುವ ಸಾಧ್ಯತೆಗಳು ಕಡಿಮೆ ಇರಬಹುದು.

ಪ್ರೊ ಚಂದ್ರ ಪೂಜಾರಿ
ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ