ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ತವರು ಜಿಲ್ಲೆ ರಾಮನಗರದಲ್ಲಿ ಕೇಳಿಬಂದಿದ್ದ ಅನ್ನಭಾಗ್ಯ ಅಕ್ಕಿ ಕಳವು ಪ್ರಕರಣದಲ್ಲಿ ಗೋದಾಮಿನ ವ್ಯವಸ್ಥಾಪಕನಾಗಿದ್ದ ಚಂದ್ರಶೇಖರ್ ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆತನೇ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾನೆಂದು ಆರೋಪಿಸಲಾಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನಲ್ಲಿ 1,500 ಕ್ವಿಂಟಾಲ್ ಅಕ್ಕಿ ಕಳುವಾಗಿದೆ ಎಂದು ಬುಧವಾರ ಸುದ್ದಿಯಾಗಿತ್ತು. ಅಕ್ಕಿ ಬಂದ ಒಂದೇ ವಾರದಲ್ಲಿ ಅಕ್ಕಿ ಕಳುವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಪಟ್ಟಣ ಪೊಲೀಸರು, ಗೋದಾಮಿನ ನೌಕರ ಚಂದ್ರು ಎಂಬಾತನನ್ನು ಬಂಧಿಸಿದ್ದಾರೆ.
ಟಿಎಪಿಸಿಎಂಎಸ್ ಗೋದಾಮಿನಿಂದ ಚನ್ನಪಟ್ಟಣ ತಾಲೂಕಿನ 65 ನ್ಯಾಯಬೆಲೆ ಅಂಗಡಿಗಳಿಗೆ ಪಡಿತರವನ್ನು ಸರಬರಾಜು ಮಾಡಲಾಗುತ್ತದೆ. ಅದಕ್ಕಾಗಿ, ಕಳೆದ ವಾರ 1,400 ಕ್ವಿಂಟಾಲ್ ಪಡಿತರ ಅಕ್ಕಿ ಗೋದಾಮಿಗೆ ಬಂದಿತ್ತು. ಎರಡು ತಿಂಗಳ ಪಡಿತರ ವಿತರಣಗಾಗಿ ಒಟ್ಟಿಗೆ ಅಕ್ಕಿ ಬಂದಿತ್ತು. ಈ ಹಿಂದೆ ಗೋದಾಮಿನಲ್ಲಿ ಉಳಿದಿದ್ದ ಅಕ್ಕಿ ಮತ್ತು ಇತ್ತೀಚೆಗೆ ಬಂದಿದ್ದ ಅಕ್ಕಿಯಲ್ಇ 1,500 ಅಕ್ಕಿ ಕಳುವಾಗಿತ್ತು ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಗೋದಾಮನ್ನು ಸೀಜ್ ಮಾಡಲಾಗಿದ್ದು, ಅದರ ಪರವಾನಗಿಯನ್ನು ಅಧಿಕಾರಿಗಳು ರದ್ದು ಮಾಡಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಆಹಾರ ಇಲಾಖೆಯ ಉಪನಿರ್ದೇಶಕಿ ರಮ್ಯಾ, “ಇನ್ನು ಮುಂದೆ ಆಹಾರ ಇಲಾಖೆಯ ಗೋದಾಮಿನಿಂದಲೇ ಪಡಿತರ ಸರಬರಾಜು ಮಾಡಲಾಗುತ್ತದೆ. ಅಕ್ಕಿ ಕಳವು ಹಿನ್ನೆಲೆ ಡಿಸೆಂಬರ್ ತಿಂಗಳ ಪಡಿತರ ವಿತರಣೆ ವಿಳಂಬವಾಗುವ ಸಾಧ್ಯತೆಯಿದೆ. ಹೆಚ್ಚುವರಿ ಅಕ್ಕಿ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದು ಹೇಳಿದ್ದಾರೆ.