ದಲಿತರಿಗೆ ಮತ್ತು ದಲಿತ ಅಧಿಕಾರಿಗಳಿಗೆ ಆವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಹುಮನಾಬಾದ ಶಾಸಕ ಸಿದ್ದಲಿಂಗಪ್ಪಾ ಪಾಟೀಲ ಅವರ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಹುಮನಾಬಾದನಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಸಾಂಕೇತಿಕ ಧರಣಿ ನಡೆಸಿತು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರು ಶಾಸಕರ ವಿರುದ್ಧ ಘೋಷಣೆ ಕೂಗಿ ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ಹುಮನಾಬಾದ ಶಾಸಕ ಸಿದ್ದಲಿಂಗಪ್ಪಾ ಪಾಟೀಲರವರು ಶಾಸಕರಾಗಿ ಕೇವಲ ಆರು ತಿಂಗಳು ಕಳೆದಿದೆ. ಆದರೆ ಕೆಲವು ತಿಂಗಳುಗಳಿಂದ ಅತ್ಯಂತ ದರ್ಪದಿಂದ ವರ್ತಿಸುತ್ತಿದ್ದು, ಅವರ ಕಣ್ಣಿಗೆ ಯಾರೂ ಗೋಚರಿಸುತ್ತಿಲ್ಲ. ಕ್ಷೇತ್ರದ ದಲಿತರಿಗೆ ಮತ್ತು ದಲಿತ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವದಲ್ಲದೇ, ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದಾರೆ” ಪ್ರತಿಭಟನಾಕಾರರು ಆರೋಪಿಸಿದರು.
“ನ.22 ರಂದು ಹುಮನಾಬಾದ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗೋವಿಂದರ ಜೊತೆ ಸೌಜನ್ಯದಿಂದ ವರ್ತಿಸದೇ ದಲಿತ ಅಧಿಕಾರಿಯೆಂಬ ಅಸ್ಪ್ರಶ್ಯ ಮನೋಭಾವನೆಯಿಂದ ನೀನೊಬ್ಬ ನಾಲಾಯಕ್ ಅಧಿಕಾರಿ, ಕಮಿಷನ್ ಏಜೆಂಟ್ ಮತ್ತು ಕಾಂಗ್ರೆಸ್ ಏಜೆಂಟ್ ಎಂದು ದಲಿತ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾರೆ” ಎಂದು ದೂರಿದರು.
ಇದರಿಂದ ತಾಲೂಕಿನ ಇತರೆ ಇಲಾಖೆ ಅಧಿಕಾರಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ದಲಿತ ನೌಕರರ ಮೇಲೆ ತಮಗೆ ಅಷ್ಟೊಂದು ಹೀನ ಮನಸ್ಥಿತಿವಿದ್ದರೆ ತಾಲೂಕಿನ ಎಲ್ಲಾ ದಲಿತ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ನಿಮ್ಮ ಮನಸ್ಥಿತಿಯನ್ನು ಸಂತೈಸಿಕೊಳ್ಳಿ ಎಂದು ಖಂಡಿಸಿ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಗಡಿ ಭಾಗದ ಕಮಲನಗರ ತಾಲೂಕು ಕೆಂದ್ರದಲ್ಲೇ ಇಲ್ಲ ʼಸರ್ಕಾರಿ ಪ್ರೌಢ ಶಾಲೆʼ
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಲಕ್ಷ್ಮಣರಾವ ಬುಳ್ಳಾ, ಡಾ. ಅರುಣಕುಮಾರ್ ಕುರ್ನೆ, ನೀಲಕಂಠ ಶಟ್ಟಿ, ಕೈಲಾಸ ಮೇಟಿ, ರಮೇಶ ಡಾಕುಳಗಿ, ಶಾಂತಕುಮಾರ ಅರಳಿ, ಶರಣಪ್ಪಾ ಮೇತ್ರೆ, ಅಮರ ಉತ್ತಮ, ವೀರಪ್ಪ ಧುಮನಸೂರ, ಸುಧಾಕರ ಮಾಡಗೂಳ, ರಾಜೇಂದ್ರ ದಾಂಡೇಕರ್, ಮಲ್ಲಿಕಾರ್ಜುನ ಶರ್ಮಾ, ಪ್ರಕಾಶ ಕಾಡಗೂಂಡ ಸೇರಿದಂತೆ ಇತರರಿದ್ದರು.