ಗಿರಿಜನ ಉಪ ಯೋಜನೆಯಡಿ ತಾಲೂಕಿನ ಮಂಗಳೂರು ಮಾಳದ ಜೇನು ಕುರುಬ ಹಾಡಿಯ ಕುಟುಂಬಗಳಿಗಾಗಿ ಕೊಟ್ಟಿರುವ ಮನೆಗಳು ಸಂಪೂರ್ಣ ಶಿಥಿಲಗೊಂಡಿವೆ. ಕಳಪೆ ಗುಣಮಟ್ಟದ ವಸತಿ ನಿರ್ಮಾಣ ಮಾಡಿರುವ ಏಜೆನ್ಸಿ ನಿರ್ಮಿತಿ ಕೇಂದ್ರದ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಹುಣಸೂರಿನ ಗಿರಿಜನ ಅಭಿವೃದ್ಧಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಈ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ, ಹಾಡಿಯ ಜೇನು ಕುರುಬ ಗಿರಿಜನರನ್ನು ಮನೆಯ ಮಾಲೀಕರನ್ನಾಗಿ ಮಾಡುವಂತೆ ಒತ್ತಾಯಿಸಿ, ದಸಂಸ ನೇತೃತ್ವದಲ್ಲಿ ಗಿರಿಜನರು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ, “ಯಾವುದೇ ಮೂಲ ಸೌಕರ್ಯಗಳಿಲ್ಲದೆ, ಡೇರೆಗಳಲ್ಲಿ ಬದುಕುತ್ತಿದ್ದ ಜೇನು ಕುರುಬ ಗಿರಿಜನ ಹಾಡಿಯ ಕುಟುಂಬಗಳಿಗೆ ವಸತಿ, ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು, ಹಿಂದಿನ ಜಿಲ್ಲಾಧಿಕಾರಿಗಳು ವಿಶೇಷ ಆಸ್ಥೆ ವಹಿಸಿ ಮಂಗಳೂರು ಮಾಳದ ಬಳಿಯ ಸರ್ವೆ ನಂಬರ್ 90ರಲ್ಲಿ ಎರಡು ಎಕರೆ 34ಗುಂಟೆ ಜಮೀನನ್ನು 2011ನೇ ಸಾಲಿನಲ್ಲಿ ಕಾಯ್ದಿರಿಸಿ, ಹುಣಸೂರಿನ ಕಾರ್ಯನಿರ್ವಾಹಕ ಅಧಿಕಾರಿಗೆ ಹಸ್ತಾಂತರಿಸಲಾಗಿದೆ” ಎಂದು ತಿಳಿಸಿದರು.
ಈಗ್ಗೆ ಮೂರು ವರ್ಷ ಹಿಂದೆ ಮಂಗಳೂರು ಮಾಳದ ಜೇನು ಕುರುಬ ಗಿರಿಜನ ಹಾಡಿಯ ಮೂವತ್ತು ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಮನೆಗಳ ನಿರ್ಮಾಣದ ಗುತ್ತಿಗೆ ಪಡೆದಿದ್ದ ಏಜೆನ್ಸಿ ನಿರ್ಮಿತಿ ಕೇಂದ್ರವು ಕಳಪೆ ಗುಣಮಟ್ಟದ ವಸತಿ ನಿರ್ಮಾಣ ಮಾಡಿದೆ.
ಮನೆಗಳು ಸಂಪೂರ್ಣ ಶಿಥಿಲಗೊಂಡಿವೆ. ಮಳೆ ಬಂದರೆ ಸೋರುತ್ತಿವೆ. ಅವು ಯಾವಾಗಲಾದರೂ ಬೀಳುವ ಆತಂಕದಲ್ಲಿಯೇ, ಅದೇ ಶಿಥಿಲಗೊಂಡ ಮನೆಗಳಲ್ಲೇ ಗಿರಿಜನ ಕುಟುಂಬಗಳು ಬದುಕುತ್ತಿವೆ. ಹಾಗಾಗಿ ಗಿರಿಜನರಿಗೆ ಕಳಪೆ ಗುಣಮಟ್ಟದ ಮನೆಗಳನ್ನು ನಿರ್ಮಿಸಿ ಕೊಟ್ಟಿರುವ ಏಜೆನ್ಸಿ ನಿರ್ಮಿತಿ ಕೇಂದ್ರದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಹಾಡಿಯಲ್ಲಿನ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಅವರನ್ನು ಸಂಪೂರ್ಣ ಮನೆಯ ಮಾಲೀಕ ರನ್ನಾಗಿ ಮಾಡುವಂತೆ ಆಗ್ರಹಿಸಿದ್ದಾರೆ.
ಮೂಲಭೂತ ಸವಲತ್ತುಗಳಿಂದ ವಂಚಿತರಾಗಿ, ಕಹಿ ಬದುಕು ನಡೆಸುತ್ತಿರುವ ಜೇನು ಕುರುಬ ಗಿರಿಜನರಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹುಣಸೂರಿನ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗ್ರಾಮಪಂಚಾಯಿತಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು.
ಇಲ್ಲವಾದಲ್ಲಿ ಮಂಗಳೂರು ಮಾಳದ ಗಿರಿಜನ ಹಾಡಿಯ ಕುಟುಂಬಗಳ ಅಭಿವೃದ್ಧಿಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಜೇನು ಕುರುಬ ಗಿರಿಜನರ ಮಹಿಳಾ ಮುಖಂಡರಾದ ಲಕ್ಷ್ಮಮ್ಮ, ಈರಮ್ಮ, ಪಟ್ಟಮ್ಮ, ತಿಮ್ಮಮ್ಮ ಸೇರಿದಂತೆ ಅನೇಕ ಗಿರಿಜನ ಮಹಿಳೆಯರು ಹಾಜರಿದ್ದರು.