ಮನರೇಗಾ ಅಡಿಯಲ್ಲಿ ಕೆಲಸಕ್ಕಾಗಿ ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿದರೂ ಕೆಲಸ ನೀಡಿಲ್ಲ. ಇದರಿಂದ ಬಡ ಕೂಲಿ ಕಾರ್ಮಿಕರಿಗೆ ದುಡಿಮೆ ಇಲ್ಲದಂತಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಆರೋಪಿಸಿದೆ,.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಾಡಂಗೇರಾ ಬಿ ಗ್ರಾಮದಲ್ಲಿ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಆಹೋರಾತ್ರಿ ಧರಣಿ ನಡೆಸಿದ್ದಾರೆ. ಮನರೇಗಾ ಉದ್ಯೋಗ ಒದಗಿಸುಂತೆ ಒತ್ತಾಯಿಸಿದ್ದಾರೆ.
“ಅಕ್ಟೋಬರ್ 18 ಮತ್ತು ನವೆಂಬರ್ 9ರಂದು ಎರಡು ಬಾರಿ ನಮೂನೆ-6ರಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಗಳ ಅವಧಿ ಮುಗಿದಿದ್ದರೂ, ಕೆಲಸ ನೀಡಲಾಗಿಲ್ಲ. ಅಲ್ಲದೆ, ಮತ್ತೆ ಅರ್ಜಿ ಸಲ್ಲಿಸಿಲು ಸ್ವೀಕೃತಿ ನೀಡುತ್ತಿಲ್ಲ. ಪಿಡಿಓ ಮಲ್ಲಿಕಾರ್ಜುನ ಗಿರಿ ಅವರು ಅರ್ಜಿ ವಿತರಣೆಯನ್ನು ತಡೆಹಿಡಿದಿದ್ದಾರೆ. ಪರಿಣಾಮವಾಗಿ ಬಡಕೂಲಿಕಾರರ ಹೊಟ್ಟೆಪಾಡು ಕಷ್ಟಕರವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು:
1. ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುತ್ತಿದ್ದು, ಯುಗಾದಿವರೆಗೆ ನಿರಂತರವಾಗಿ ಕೆಲಸ ಕೊಡಬೇಕು.
2. 15 ದಿನಗಳ ನಂತರ ಪ್ರತಿ ನಮೂನೆ-6 ಅರ್ಜಿಗೆ ಕಡ್ಡಾಯವಾಗಿ ಸ್ವೀಕೃತಿ ಕೊಡಬೇಕು.
3. ಹೊಸ ಜಾಬ್ ಕಾರ್ಡಗಳಿಗೆ ಅರ್ಜಿ ಸಲ್ಲಿಸಿರುವವರಿಗೆ ಕೂಡಲೇ ಜಾಬ್‌ಕಾರ್ಡ್ ವಿತರಿಸಿ, ಕೆಲಸ ನೀಡಬೇಕು.
4. ಕಚೇರಿ ಕೆಲಸದ ಅವಧಿಯಲ್ಲಿ ಕರೆ ಮಾಡಿದರೂ ಪಿಡಿಓ ಸಂಪರ್ಕಕ್ಕೆ ಸಿಗುವುದಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಪ್ರತಿಭಟನೆಯಲ್ಲಿ ದಾವಲಸಾಬ್ ನಧಾಫ್, ಚಂದ್ರರೆಡ್ಡಿ ಕಾಡಂಗೇರಾ. ಬಿ,ನಿಂಗಣ್ಣ ಕುರಕುಂದಿ,ಸಾಲರಸಾಬ್ ಖುರೇಷಿ, ಶೇಖರ್ ಇಬ್ರಾಹಿಂಪುರ,ಖಾದರಸಾಬ, ಆಶಪ್ಪ ದಿಡ್ಡಿ, ಹಣಮಂತ ಇನ್ನಿತರರು ಉಪಸ್ಥಿತರಿದ್ದರು.