ಆಧುನಿಕ ಯುಗದಲ್ಲಿಯೂ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ಆಘಾತಕಾರಿ. ಅಸ್ಪೃಶ್ಯತೆ ಆಚರಣೆಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುತ್ತವೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ.
2016ರಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಿನಾಯಕ ನಗರದಲ್ಲಿ ದಲಿತ ಸಮುದಾಯದ ಸಾವಿತ್ರಮ್ಮ ಕುಟುಂಬಸ್ಥರು ಗಡಿಚೌಡೇಶ್ವರ ದೇವಾಯಲಕ್ಕೆ ತೆರಳಿದ್ದರು. ಈ ವೇಳೆ, ಅವರು ತಳ ಸಮುದಾಯದವರು ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಪ್ರವೇಶ ನಿಕಾರಿಸಲಾಗಿತ್ತು. ಪ್ರಶ್ನಿಸಿದ್ದಕ್ಕಾಗಿ ಸಾವಿತ್ರಮ್ಮ ಮತ್ತು ಕುಟುಂಬಸ್ಥರ ಮೇಲೆ ಪ್ರಬಲ ಜಾತಿಯವರು ಹಲ್ಲೆ ನಡೆಸಿದ್ದರು.
ಅವರ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಪಾಂಡುರಂಗ ಭಟ್, ಕುಮಾರಿ ಉಷಾ, ಕುಮಾರಿ ಶಾರದಾ, ವಿಲಾಸ್ ಲಾಡವ, ವೆಂಕಟನಾರಾಯಣ, ಚಿದಾನಂದ, ರವಿ ಮತ್ತು ಉಮಾ ಎಂಬವರು ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಪಾಂಉರಂಗ ಭಟ್ ಮತ್ತು ಏಳು ಮಂದಿ ಆರೋಪಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
“ದೇವಾಲಯಗಳು ಏಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರದೇಶಗಳಾಗಿವೆ. ಅಲ್ಲಿ, ಅಸ್ಪೃಶ್ಯತೆ ಆಚರಣೆ ಮಾಡುವುದು, ದಲಿತರಿಗೆ ಪ್ರವೇಶ ನಿರಾಕರಿಸುವುದು ಸಂವಿಧಾನಬಾಹಿರವಾಗಿದೆ. ಇಂತಹ ಬೆಳವಣಿಗೆಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಬೆಚ್ಚಿ ಬೀಳಿಸುತ್ತವೆ” ಎಂದು ಹೈಕೋರ್ಟ್ ಹೇಳಿದೆ.
“ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳಬೇಕು. ತಾರತಮ್ಯಗಳು ಇಲ್ಲಬೇಕು” ಎಂದು ಹೈಕೋರ್ಟ್ ಒತ್ತಿ ಹೇಳಿದೆ.