ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಿಗ್ನಲ್‌ಗಳ ಬ್ಯಾಟರಿ ಕಳವು ಮಾಡಿ ಗುಜರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿ ಮೂಲದ ಸೈಫ್ ಪಾಷಾ ಮತ್ತು ಸಲ್ಮಾನ್ ಖಾನ್ ಬಂಧಿತರು. ಇವರಿಂದ ಒಟ್ಟು ₹5 ಲಕ್ಷ ಮೌಲ್ಯದ 80 ಬ್ಯಾಟರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಸಿಗ್ನಲ್‌ಗಳಲ್ಲಿ ಹಾಕಿದ್ದ ಬ್ಯಾಟರಿ ಕಳ್ಳತನ ಮಾಡಿ ಅದನ್ನು ಗುಜರಿಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಇಬ್ಬರು ಸೇರಿ ಮೋಜು ಮಸ್ತಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಗರದ ಹಲವು ಜಂಕ್ಷನ್‌ಗಳ ಸಿಗ್ನಲ್‌ಗಳಿಗೆ ಹಾಕಿದ್ದ ಬ್ಯಾಟರಿಗಳು ಕಳೆದ ಏಳು ತಿಂಗಳಿನಿಂದ ಕಳ್ಳತನವಾಗುತ್ತಿದ್ದವು. ಈ ಘಟನೆಗೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಹರಿಶ್ಚಂದ್ರ ಘಾಟ್ | ಮೃತದೇಹ ಸುಟ್ಟ ವಾಸನೆಯಿಂದ ನಿತ್ಯ ನರಕ; ಸತ್ತು ಬದುಕುತ್ತಿರುವ ಜನ!
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಬರೋಬ್ಬರಿ 120 ಸಿಸಿಟಿವಿ ಪರಿಶೀಲನೆ ಮಾಡಿದಾಗ ಆರೋಪಿಗಳ ಚಲನವಲನ ಗೊತ್ತಾಗಿದೆ. ನಂತರ ಆರೋಪಿಗಳ ಜಾಡು ಹಿಡಿದ ಪೊಲೀಸರು ಅವರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.