ಸಾಮಾನ್ಯ ಜನರು ವಿದ್ಯುತ್‌ನಂತಹ ಮೂಲ ಸೌಕರ್ಯಗಳಿಗಾಗಿ ಹೆಣಗಾಡುತ್ತಿದ್ದರೆ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಾಗ್ದಾಳಿ ನಡೆಸಿದ್ದಾರೆ.
ಕಾಶ್ಮೀರದ ಬಂಡಿಪೋರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರಾಡಳಿತ ಪ್ರದೇಶ ಜನರು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಭೀಕರವಾದ ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಕಾಶ್ಮೀರಿಗಳು ಹೆಪ್ಪುಗಟ್ಟುವ ಚಳಿಯ ನಡುವೆ 16 ಗಂಟೆಗಳವರೆಗೆ ವಿದ್ಯುತ್ ಕಡಿತವನ್ನು ಸಹಿಸಿಕೊಳ್ಳಬೇಕಾಗಿದೆ. 2019ರ ಆಗಸ್ಟ್ ನಂತರ ಜನರು ಚಿಂತಿಸಬೇಡಿ, ಎಲ್ಲವೂ ಚೆನ್ನಾಗಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತು. ಆದರೆ ಬಿಜೆಪಿ ನಗುವುದನ್ನು ಬಿಟ್ಟರೆ ಬೇರೇನು ಮಾಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯಪಾಲರೆ, ಕನಿಷ್ಠ ಮೂಲಸೌಕರ್ಯವನ್ನು ವ್ಯವಸ್ಥೆ ಮಾಡಿ. ನೀವು ಹೋದಲ್ಲೆಲ್ಲಾ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತನಾಡುತ್ತೀರಿ. ಆದರೆ ನಮಗೆ ಇಲ್ಲಿ ಒಂದೇ ಒಂದು ಎಂಜಿನ್ ಕೂಡ ಸಿಗುವುದಿಲ್ಲ. ರಾಜಭವನವು ಏನನ್ನಾದರೂ ಖರೀದಿಸಬೇಕಾದರೆ, ಯಾವುದೇ ಟೆಂಡರ್‌ಗಳ ಅಗತ್ಯವಿಲ್ಲ. ಗವರ್ನರ್ ಸಾಹಬ್ ಅವರ ಐಷಾರಾಮಿ ವಸ್ತುಗಳ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಬಾರದು ಮತ್ತು ಟೆಂಡರ್ ನೀಡದೆ ತಕ್ಷಣವೇ ಅವರಿಗೆ ವಸ್ತುಗಳನ್ನು ಖರೀದಿಸಬೇಕು ಎಂದು ಆದೇಶ ನೀಡಲಾಗಿದೆ. ಆದರೆ ಇಲ್ಲಿನ ಜನರು ವಿದ್ಯುತ್ ಸಮಸ್ಯೆಯಿಂದ ನಿತ್ಯವು ಬಳಲುತ್ತಿದ್ದಾರೆ” ಎಂದು ಒಮರ್ ಅಬ್ದುಲ್ಲಾ ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣದಂತೆ ದೆಹಲಿಯಲ್ಲೂ ಕಾಂಗ್ರೆಸ್ ಬಿಜೆಪಿಯ ಟೈರ್ ಪಂಕ್ಚರ್ ಮಾಡಲಿದೆ: ರಾಹುಲ್ ಗಾಂಧಿ
“ಕೇಂದ್ರ ಸರ್ಕಾರ ನಮ್ಮ ಅಸಹಾಯಕತೆಯ ಲಾಭವನ್ನು ಪಡೆದಿದೆ. ನಮ್ಮ ಯೋಜನೆಗಳನ್ನು ನಮಗೆ ಹಿಂತಿರುಗಿಸದಂತೆ ನಿಮ್ಮನ್ನು ಯಾವ ಶಕ್ತಿ ತಡೆಯುತ್ತಿದೆ. ವಿದ್ಯುತ್ ಸೌಲಭ್ಯ ಪಡೆಯಲು ನಾವು ನಿಮ್ಮ ಮುಂದೆ ಭಿಕ್ಷೆ ಬೇಡಬೇಕೆ” ಎಂದು ಒಮರ್ ಅಬ್ದುಲ್ಲಾ ಬೇಸರ ವ್ಯಕ್ತಪಡಿಸಿದರು.
ವಿದ್ಯುತ್ ಕಳ್ಳತನವನ್ನು ಕಡಿಮೆ ಮಾಡಲು ಕೇಂದ್ರಾಡಳಿತ ಪ್ರದೇಶದಾದ್ಯಂತ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ಯೋಜನೆಗೆ ರಾಜ್ಯಪಾಲರು ಕೆಲವು ತಿಂಗಳ ಹಿಂದೆ ಚಾಲನೆ ನೀಡಿದ್ದರು. ಇದರಿಂದ ಸಾರ್ವಜನಿಕರಿಗೆ ವಿದ್ಯುತ್ ಸಮಸ್ಯೆಯುಂಟಾದ ಕಾರಣ ಆಗಸ್ಟ್‌ನಲ್ಲಿ ಪ್ರತಿಭಟನೆ ವ್ಯಕ್ತವಾಯಿತು. ಕೆಲವು ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು. ಆದರೆ ಸರ್ಕಾರವು ತನ್ನ ಆದೇಶ ಬದಲಿಸಲಿಲ್ಲ.
ಚಳಿಗಾಲದಲ್ಲಿ ಕಣಿವೆ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯು ತೀವ್ರವಾಗಿ ಕುಸಿಯುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯುತ್ ಬೇಡಿಕೆ 3,200 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ. ಆದರೆ ಬೇಸಿಗೆಯ ಅವಧಿಯಲ್ಲಿ 1,350 ಮೆಗಾವ್ಯಾಟ್‌ಗಳ ಆಂತರಿಕ ಉತ್ಪಾದನೆ ಮಾತ್ರ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.