ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಪ್ರಕರಣಗಳನ್ನು ತಡೆಗಟ್ಟಲು ಇದೀಗ ಬೆಂಗಳೂರು ನಗರ ಆಗ್ನೇಯ ವಿಭಾಗದ ಪೊಲೀಸರು ವೀ ಕೇರ್ ಸಹಾಯವಾಣಿ ಆರಂಭಿಸಿದ್ದು, ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.
ವೀ ಕೇರ್ ಎಂಬ ಸಹಾಯವಾಣಿ ಸಂಖ್ಯೆ 8277946600 ಕರೆ ಮಾಡಿ ಜನರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತುಕತೆ ನಡೆಸಿ ಪರಿಹಾರ ಕಂಡುಕ್ಕೊಳ್ಳಬಹುದಾಗಿದೆ. ಬೆಂಗಳೂರಿನಲ್ಲಿ ಹೊರ ರಾಜ್ಯದ ಜನರು ವಾಸ ಮಾಡುತ್ತಿರುವುದರಿಂದ ಬೇರೆ ಭಾಷೆಗಳಲ್ಲಿ ಮಾತುಕತೆ ನಡೆಸಬಹುದಾಗಿದೆ.
“ಸಂಕಷ್ಟದಲ್ಲಿ ಇರುವವರಿಗೆ ಅಥವಾ ನೋವಲ್ಲಿ ಇರುವವರಿಗೆ ಸಕಾಲದಲ್ಲಿ ನೆರವು ಅಥವಾ ಧೈರ್ಯ ನೀಡಿದರೆ ಇಂತಹ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಬಹುದು. ನಗರದಲ್ಲಿ ಜನವರಿಯಿಂದ ಅಕ್ಟೋಬರ್‌ವರೆಗೆ 1,967 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಸಂಕಷ್ಟದಲ್ಲಿ ಇರುವವರು ಅಥವಾ ಪೋಷಕರು ಅಥವಾ ಸಂಬಂಧಿಕರು ಸಹಾಯಕ್ಕಾಗಿ ವೀ ಕೇರ್ ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ವಾಟ್ಸ್ಆ್ಯಪ್ ಮೂಲಕವೂ ಸಂಪರ್ಕ ಮಾಡಬಹುದು. ಜನರು ತಮ್ಮ ಸಂಕಟ ಮತ್ತು ನೋವನ್ನು ವೀ ಕೇರ್ ಸಹಾಯವಾಣಿಗೆ ಕರೆ ಮಾಡಿ ಹಂಚಿಕೊಳ್ಳಬಹುದಾಗಿದೆ. ಒತ್ತಡ ಮತ್ತು ಆತಂಕ ಎಲ್ಲ ವಯೋಮಾನದವರ ಮೇಲೆ ಪರಿಣಾಮ ಬೀರುತ್ತದೆ” ಎಂದು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಟ್ರಾಫಿಕ್ ಸಿಗ್ನಲ್‌ಗಳ ಬ್ಯಾಟರಿ ಕಳವು ಮಾಡಿ ಗುಜರಿಗೆ ಮಾರಾಟ; ಇಬ್ಬರ ಬಂಧನ
ಮಾನಸಿಕವಾಗಿ ಸವಾಲಿನ ಸಂದರ್ಭಗಳು ಮತ್ತು ಆತಂಕವನ್ನು ನಿಭಾಯಿಸಲು ಪೊಲೀಸ್ ಇಲಾಖೆಯ 50 ಮಹಿಳಾ ಸಿಬ್ಬಂದಿ ನಿಮ್ಹಾನ್ಸ್‌ನಲ್ಲಿ ತರಬೇತಿ ಪಡೆದಿದ್ದಾರೆ.
Proud to witness the launch of We Care helpline 8277946600 in the SE division today. Kudos to the women staff, trained by NIMHANS, ready to lend an empathetic ear to those in distress. Let’s join hands in preventing suicides& fostering mental well-being.#WeCare #SuicidePrevention pic.twitter.com/M7fdpDq3CL
— dcpse (@DCPSEBCP) November 25, 2023
ಜನರು ಕರೆ ಮಾಡಿದಾಗ ವೀ ಕೇರ್ ಸಿಬ್ಬಂದಿ ಫೋನ್ ಮೂಲಕ ಸಮಸ್ಯೆ ಪರಿಹಾರ ಮಾಡುತ್ತಾರೆ. ನಂತರದಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ ಚಿಕಿತ್ಸೆ ಪಡೆಯಲು ಸಹಾಯ ಮಾಡುತ್ತಾರೆ.