2019ರ ಲೋಕಸಭೆ ಚುನಾವಣೆಯಲ್ಲಿ ರೈಲ್ವೆ ಇಲಾಖೆಯನ್ನು ಬೇಕಾಬಿಟ್ಟಿ ಬಳಸಿಕೊಂಡಿದ್ದ ಬಿಜೆಪಿ ಈ ವಿಧಾನಸಭಾ ಚುನಾವಣೆಗಳಿಗೂ ಟ್ರೇನುಗಳ ಬಳಸಿಕೊಂಡಿದೆ. ರಾಜ್ಯದ ಹಲವು ರೈಲುಗಳು ರದ್ದಾಗಿದ್ದು, ಅದರ ಹಿಂದೆ ರಾಜಸ್ಥಾನ ಬಿಜೆಪಿ ಉಸ್ತುವಾರಿಯಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೈವಾಡ ಇದೆಯೆನ್ನುವ ಆರೋಪ ವ್ಯಕ್ತವಾಗಿದೆ.
ಇದಕ್ಕೊಂದು ತಾಜಾ ಉದಾಹರಣೆ, ಇತ್ತೀಚೆಗೆ ನೈಋತ್ಯ ರೈಲ್ವೆ ಹಲವು ಟ್ರೇನುಗಳ ಎಲ್ಲ ಸೀಟುಗಳು ಪೂರ್ತಿ ಬುಕ್ ಆಗಿದ್ದರೂ ಕೊನೆಯ ಕ್ಷಣದಲ್ಲಿ ಅವನ್ನು ರದ್ದುಪಡಿಸುತ್ತಿರುವುದು. ಟ್ರೇನ್ ನಂಬರ್: 07339/07340 ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲ್ವೆ ಇಲಾಖೆಯ ವಾಣಿಜ್ಯ ವಿಭಾಗದ ದಾಖಲೆಗಳ ಪ್ರಕಾರ ಶೇ.೧೦೦ ಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ ಓಡುತ್ತಿತ್ತು. ವಾರದ ಕೊನೆಯ ದಿನಗಳಲ್ಲಿ ವೆಯ್ಟಿಂಗ್ ಲಿಸ್ಟ್‌ನಲ್ಲಿಯೇ ನೂರಾರು ಪ್ರಯಾಣಿಕರು ಉಳಿದಿರುತ್ತಿದ್ದರು.
ಈಗ ಈ ರೈಲನ್ನು ‘ಲೋ ಆಕ್ಯುಪೆನ್ಸಿ’ ಕಾರಣ ಕೊಟ್ಟು ‘ಮುಂದಿನ ಆದೇಶದವರೆಗೆ’ ರದ್ದು ಮಾಡಿದೆ. ವಿಚಿತ್ರ ಎಂದರೆ, ಇದೇ ಟ್ರೇನಿನ ರದ್ದತಿಗೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಬೇರೆಯದೇ ಕಾರಣ ಕೊಟ್ಟು ಅದರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರ ಪ್ರಕಾರ ಹೊಸದುರ್ಗ ರೋಡ್ ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ನಿರ್ಮಾಣ ನಡೆಯುತ್ತಿರುವುದರಿಂದ ಈ ಟ್ರೇನನ್ನು ರದ್ದುಪಡಿಸಲಾಗಿದೆ. ಅಧಿಕಾರಿಗಳ ಮಧ್ಯದಲ್ಲಿನ ಈ ಗೊಂದಲದ ನಂತರ CRIS ವೆಬ್‌ಸೈಟ್‌ನಲ್ಲಿ ರೈಲ್ವೆ ಅಧಿಕಾರಿಗಳಿಗೆ ಮಾತ್ರ ಲಭ್ಯವಿದ್ದ ಮಾಹಿತಿ ವಿನಿಮಯದ ವಿಭಾಗವನ್ನು ಬ್ಲಾಕ್ ಮಾಡಲಾಗಿದೆ!
ಈ ವಿಷಯವಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ನೆಟ್ಟಿಗರು ನೈಋತ್ಯ ರೈಲ್ವೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಸಲ್ಲ, ಸದರಿ ಟ್ರೇನಿನ ರೇಕ್ ರಾಜಸ್ಥಾನದ ಬಿಕಾನೇರ್‌ಗೆ ಹೊರಟಿರುವುದನ್ನೂ ಜಾಗೃತ ಪ್ರಯಾಣಿಕರು ಪತ್ತೆ ಮಾಡಿದ್ದಾರೆ. ಈ ಟ್ರೇನಿನ ಹಿಂದೆ-ಮುಂದೆ ಓಡುವ ರಾಣಿ ಚೆನ್ನಮ್ಮ ಎಕ್ಸಪ್ರೆಸ್, ಗೋಲಗುಂಬಜ್ ಎಕ್ಸ್‌ಪ್ರೆಸ್, ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಭರ್ಜರಿ ಜನದಟ್ಟಣೆಯಲ್ಲಿ ಓಡುತ್ತಿರುವಾಗ, ಇದೊಂದೇ ಟ್ರೇನಿಗೆ ‘ಲೋ ಆಕ್ಯುಪೆನ್ಸಿ’ ಉಂಟಾಗಲು ಕಾರಣವೇನು ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.
ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಟ್ರೇನ್ ನಂಬರ್ 17309 ಯಶವಂತಪುರ-ವಾಸ್ಕೊ ರದ್ದತಿಯ ಮುಂದಿನ ಬಲಿಪಶು ಅಗಲಿದೆ. ಈ ವರದಿಯನ್ನು ಓದಿದ ನಂತರ ಅಧಿಕಾರಿಗಳು ಈ ಟ್ರೇನನ್ನು ಬಿಟ್ಟು ಬೇರೆ ಟ್ರೇನುಗಳಿಗೆ ಕತ್ತರಿ ಹಾಕಬಹುದು.
ರೈಲ್ವೆಯ ಈ ಕತ್ತರಿ ಪ್ರಯೋಗದ ಬಗ್ಗೆ ಕನ್ನಡದ ಕೆಲವು ಮಾಧ್ಯಮಗಳು “ಶಕ್ತಿ ಯೋಜನೆಯಿಂದಾಗಿ ಟ್ರೇನುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ” ಎಂಬ ಸುಳ್ಳು ಸುದ್ದಿಯನ್ನು ಬಿತ್ತರಿಸಿ, ಮೋದಿ ಭಜನೆ ಮಾಡುತ್ತಿವೆ. ಈ ಸುದ್ದಿಯಿಂದ ವಿಚಲಿತರಾದ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆಯವರು, “ನಾವು ಶಕ್ತಿ ಯೋಜನೆಯ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಅದು ನಮ್ಮ ಹೇಳಿಕೆ ಅಲ್ಲವೇ ಅಲ್ಲ” ಎಂದು ಒಂದು ಸ್ಪಷ್ಟೀಕರಣವನ್ನೇ ನೀಡಿದ್ದಾರೆ
ಇದು ಯಾಕೆ ಹೀಗೆ ಅಂತ ಕೇಳಿದರೆ, “ಏನು ಮಾಡೋದು. ಇದು ರೈಲ್ವೆ ಬೋರ್ಡ್‌ನ ಆದೇಶ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿರುವುದರಿಂದ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲ ರಾಜಸ್ಥಾನಿಯರನ್ನು ಕರೆದೊಯ್ಯಲು ವಿಶೇಷ ಟ್ರೇನ್‌ಗಳನ್ನು ತಮ್ಮ ಪ್ರಭಾವ ಬಳಸಿ ಓಡಿಸುತ್ತಿದ್ದಾರೆ” ಎಂದು ರೈಲ್ವೆಯ ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಲ್ಹಾದ ಜೋಶಿ ಬಗ್ಗೆ ಕನ್ನಡಿಗರ ಕಿಡಿ ಕಾರುತ್ತಿದ್ದಾರೆ.
“ಕೊನೆಯ ಕ್ಷಣದಲ್ಲಿ ಟ್ರೇನುಗಳನ್ನು ರದ್ದುಪಡಿಸುತ್ತಿರುವುದರಿಂದ ಸಾವಿರಾರು ಪ್ರಯಾಣಿಕರು ನಮಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ” ಎನ್ನುತ್ತಾರೆ ಕರ್ನಾಟಕದ ಬಿಜೆಪಿ ಸಂಸದರು.
ದಕ್ಷಿಣ ಕರ್ನಾಟಕದ ಬಿಜೆಪಿ ಸಂಸದರೊಬ್ಬರು ಹೇಳುವಂತೆ, ಡಿಸೆಂಬರ್‌ನಲ್ಲಿ ಅಯೋಧ್ಯೆಗೆ ಐದು ವಿಶೇಷ ಟ್ರೇನುಗಳನ್ನು ಓಡಿಸಲೇಬೇಕೆಂಬ ಮೌಖಿಕ ಆದೇಶ ನೈಋತ್ಯ ರೈಲ್ವೆಗೆ ಬಂದಿದೆ. ಈಗಾಗಲೇ ರೇಕ್‌ಗಳ ಕೊರತೆ, ಸಿಬ್ಬಂದಿ ಕೊರತೆಯಿಂದ ತತ್ತರಿಸಿರುವ ನೈಋತ್ಯ ರೈಲ್ವೆಯ ಅಧಿಕಾರಿಗಳು ಈಗ ಐದು ರೈಲುಗಳನ್ನು ಸುಮಾರು ಒಂದು ತಿಂಗಳವರೆಗೆ ರದ್ದುಪಡಿಸಲು ಹರಸಾಹಸ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ: ಸರಿಯಾದ ಕೈಗಳಲ್ಲಿ ಸಂವಿಧಾನವಿದ್ದರೆ ಅದರ ಉದ್ದೇಶಗಳು ಸಾರ್ಥಕ: ಸಿದ್ದರಾಮಯ್ಯ
“ರೈಲ್ಚೆಯಲ್ಲಿ ಇಷ್ಟೊಂದು ಪ್ರಮಾಣದ ರಾಜಕೀಯ ಪ್ರವೇಶ ಮತ್ತು ದಬ್ಬಾಳಿಕೆ ಯಾವತ್ತೂ ಆಗಿರಲಿಲ್ಲ” ಎಂದು ನಿವೃತ್ತಿಯ ಅಂಚಿನಲ್ಲಿರುವ ಅಧಿಕಾರಿಗಳು ಗೊಣಗುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಗಿಂತ ಮೂರ್ನಾಲ್ಕು ತಿಂಗಳ ಮುಂಚಿನಿಂದಲೇ ಆಯಾ ಲೋಕಸಭಾ ಕ್ಷೇತ್ರದಲ್ಲಿರುವ ರೈಲ್ವೆ ಸೌಲಭ್ಯಗಳ ಬಗ್ಗೆ ಪ್ರಧಾನಿಯ ಭಾವಚಿತ್ರದೊಂದಿಗೆ ಕರಪತ್ರ ಮುದ್ರಿಸಿ, ಪ್ರತಿ ಗ್ರಾಮ ಪಂಚಾಯಿತಿಗೂ ಹಂಚಿದ್ದನ್ನು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.