ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸೇವಾ ಯೋಜನೆ ಕೋಶ, ಮಹಿಳಾ ಅಧ್ಯಯನ ಕೇಂದ್ರ ಹಾಗೂ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವೆ ಪ್ರೊ. ಚಂದ್ರಮ್ಮ ಎಂ, ನಮ್ಮ ಸಂವಿಧಾನವು ಮಹಿಳೆಯರಿಗೆ ಸಮಾನ ವೇತನ ಕಾಯ್ದೆ, ಮಾತೃತ್ವ ಸವಲತ್ತು ಕಾಯ್ದೆ, ಬಹು ಪತ್ನಿತ್ವ ನಿಷೇಧ ಕಾಯ್ದೆ, ಅಂತರ್ ಜಾತಿ ವಿವಾಹ ಕಾಯ್ದೆ ಸೇರಿದಂತೆ ಹಲವಾರು ವಿಧಿಗಳನ್ನು ನೀಡಿದ್ದರೂ, ಇಂದಿಗೂ ಹಲವು ಕಡೆಗಳಲ್ಲಿ ಮಹಿಳೆಯರು ಇದರಿಂದ ವಂಚಿತರಾಗುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತದ ಅಸಂಘಟಿತ ವಲಯದ ಮಹಿಳಾ ಕಾರ್ಮಿಕ ವಲಯ ಇಂದಿಗೂ ದೌರ್ಜನ್ಯಕ್ಕೆ ಒಳಗಾಗುತ್ತಿವೆ. ಮಹಿಳೆಯರ ದೇಶದಲ್ಲಿ ಇಂದಿಗೂ ಎರಡನೇ ದರ್ಜೆಯ ಪ್ರಜೆಗಳಾಗಿಯೇ ಉಳಿದಿದ್ದಾರೆ. ನಮ್ಮ ಯಾವುದೇ ಧರ್ಮಗಳು ಮಹಿಳೆಯರಿಗೆ ಮೊದಲ ಆದ್ಯತೆ ನೀಡಿಲ್ಲ. ಆದರೆ, ನಮ್ಮ ಸಂವಿಧಾನ ಮಹಿಳೆಯರಿಗೆ ಸಿಗಬೇಕಾದ ಎಲ್ಲ ಹಕ್ಕುಗಳನ್ನು ನೀಡಿದೆ. ಇಂದಿನ ದಿನ ನಮ್ಮನ್ನು ನಾವೇ ಪ್ರಸಂಸಿಕೊಳ್ಳಬೇಕಿದೆ. ಏಕೆಂದರೆ, ಡಾ. ಅಂಬೇಡ್ಕರ್ ಅವರ ಚಿಂತನೆ ಏನಾಗಿತ್ತು? ಅವರ ಕನಸು ಏನಾಗಿತ್ತು? ಸಂವಿಧಾನದ ಮಾರ್ಗ ಸೂಚಿಸಿರುವುದು ಏನು? ಅದರ ಮಾರ್ಗದಲ್ಲಿ ನಾವು ನಡೆದಿದ್ದೇವೆಯೇ? ಇವೆಲ್ಲದರ ಕುರಿತು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಇಂಗ್ಲಿಷ್ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಪಿ ಕಣ್ಣನ್ ಮಾತನಾಡಿ, ನಮಗೆ ಸ್ವಾತಂತ್ರ್ಯ ಸಿಕ್ಕಿದ ಮೇಲು ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದ್ದು 1949, ನವೆಂಬರ್ 26ರಂದು. ಜನರಿಗೆ 1949ಕ್ಕೂ ಮೊದಲು ಪ್ರಜೆಯೆಂಬ ಕಲ್ಪನೆಯೇ ಇರಲಿಲ್ಲ. ಪ್ರಜೆ ಎಂಬ ಹಕ್ಕು ದೊರೆಕಿರುವುದು ಸಂವಿಧಾನದಿಂದ ಎಂದರು.
ಸಂವಿಧಾನ ದಿನದ ಅಂಗವಾಗಿ ನಡೆದ ರಸಪ್ರಶ್ನೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರೊ. ಚಂದ್ರಮ್ಮ ಎಂ. ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಪ್ರೊ. ಡಿ.ಎಂ. ಮದರಿ, ಡಾ. ರಾಜಕುಮಾರ್ ಮಾಲಿಪಾಟೀಲ್, ಹಲವು ವಿಭಾಗದ ಮುಖ್ಯಸ್ಥರಿದ್ದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ರಾಷ್ಟ್ರೀಯ ಯೋಜನಾ ಕೋಶದ ಸಂಯೋಜನೆ ಅಧಿಕಾರಿ ಪ್ರೊ. ಶಾಂತಾದೇವಿ ಟಿ. ಓದಿದರು. ಡಾ. ಸರೋಜ ಅತಿಥಿಗಳನ್ನು ಪರಿಚಯಿಸಿದರು. ಡಾ. ಶಶಿಕಲಾ ರಾಥೋಡ್ ಕಾರ್ಯಕ್ರಮ ನಿರೋಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಪ್ರೊ. ಬಿ.ಕೆ. ತುಳಸಿ ಮಾಲಾ ವಹಿಸಿದ್ದರು.