ದುಡಿಯುವ ವರ್ಗದ ಜನರನ್ನ, ರೈತರನ್ನು, ಕಾರ್ಮಿಕರನ್ನು ಬೀದಿಗೆ ತಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡ್ತಾಯಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ನೀಡಿದ್ದ ಎಲ್ಲ ಭರವಸೆಗಳನ್ನ ಮರೆತು, ಕೇವಲ ಗ್ಯಾರಂಟಿ ಯೋಜನೆಗಳಲ್ಲೇ ತೇಲಾಡುತ್ತಿದೆ ಎಂದು ರೈತ ಹೋರಾಟಗಾರ ಬಸವರಾಜಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾಧರಣಿಯಲ್ಲಿ ಅವರು ಮಾತನಾಡಿದರು. “ಬಡ ವಿರೋಧಿ, ಬಂಡವಾಳಶಾಹಿ ಪರವಾದ ನೀತಿಗಳನ್ನು ಜಾರಿಗೆ ತಂದು ಅಸಮಾನತೆಯನ್ನು ಸೃಷ್ಟಿ ಮಾಡಿದೆ. ಅಸಮಾನತೆ ತೊರೆದು ಸಮಾನತೆ, ಸಮತಾವಾದ ಆಶಯದೊಂದಿಗೆ ದೇಶದ ಜನರು ಬದುಕಬೇಕೆಂಬ ಆಶಯ ಸ್ವಾತಂತ್ರ್ಯ ಹೋರಾಟದ್ಧಾಗಿತ್ತು. ಆದರೆ, ಇಂದಿನ ಸರ್ಕಾರ ಸ್ವಾತಂತ್ರ್ಯದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ” ಎಂದಿದ್ದಾರೆ.
“ವಿದ್ಯುತ್ ಖಾಸಗಿಕರಣ ನೀತಿಯನ್ನು ಜಾರಿಗೆ ತರಲ್ಲವೆಂದು ಲಿಖಿತವಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಈಗ ತನ್ನ ಮಾತನ್ನು ತಪ್ಪುತ್ತಿದೆ. ಕೇಂದ್ರವು ಮಂದಿರದ ಹೆಸರಿನಲ್ಲಿ ಚುನಾವಣೆಯನ್ನ ಎದುರಿಸುತ್ತಿದೆ. 2014ರಲ್ಲಿ ರಾಮ ಮಂದಿರ ಕಟ್ಟುತ್ತೇವೆ ಎಂದಿದ್ದರು. ಈಗ ಅದನ್ನು ಉದ್ಘಾಟನೆ ಮಾಡ್ತೀನಿ, ಉಚಿತವಾಗಿ ಅಯೋಧ್ಯೆಗೆ ಕರೆದುಕೊಂಡು ಹೋಗ್ತಿವಿ ಅಂತ ಹೇಳಿಕೊಳ್ಳುತ್ತಿದೆ. ಮಂದಿರ ಕಟ್ಟುವುದರಿಂದ ರೈತರ, ಬಡವರ ಸಮಸ್ಯೆಗಳ ಪರಿಹಾರ ಆಗ್ತವೆ ಅನ್ನೋದಾದ್ರೆ, ಜಿಲ್ಲೆಗೊಂದು, ತಾಲೂಕಿಗೊಂದು ಮಂದಿರ ಕಟ್ಟಬಹುದು. ಆದರೆ, ಮಂದಿರ ಕಟ್ಟುವುದರಿಂದ ಸಂಪತ್ತು ಸೃಷ್ಟಿಯಾಗುವುದಿಲ್ಲ. ದೇಶದ ಜನರ ದುಡಿಮೆಯಿಂದ ಸಂಪತ್ತು ಬರುತ್ತದೆ. ಆ ಸಂಪತ್ತು ಮೋದಿ ಸ್ನೇಹಿತರ ಬಳಿ ಕ್ರೋಡೀಕರಣ ಆಗುತ್ತಿದೆ” ಎಂದು ಕಿಡಿಕಾರಿದರು.
“ರಾಜ್ಯದಲ್ಲಿ ಜನರನ್ನು ಬೀದಿ ಪಾಲು ಮಾಡುವಂತಹ ನೀತಿಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ಕಳೆದ ಚುನಾವಣೆಯಲ್ಲಿ ರಾಜ್ಯದ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳ ಮುಂದೆ 35 ಹಕ್ಕೊತ್ತಾಯಗಳನ್ನು ಸಂಯುಕ್ತ ಹೋರಾಟ ಸಮಿತಿ ಮುಂದಿಟ್ಟಿತ್ತು. ಅವುಗಳನ್ನ ತಮ್ಮ ಭರವಸೆಗಳಲ್ಲಿ ಸೇರಿಸಿಕೊಳ್ಳುವವರಿಗೆ ಮತ ಚಲಾಯಿಸುವುದಿಲ್ಲವೆಂದು ಕರೆ ಕೊಟ್ಟಿತ್ತು. ನಮ್ಮ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಬಂದು ಆರು ತಿಂಗಳಾಗಿವೆ. ಆದರೂ, ರೈತ, ಕಾರ್ಮಿಕ, ದಲಿತ, ಯುವಜನ ವಿರೋಧಿ ನೀತಿಗಳನ್ನು ಹಿಂಪಡೆಯುವಲ್ಲಿ, ಜನಪರ ನೀತಿಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇವಲ ಗ್ಯಾರಂಟಿ ಯೋಜನೆಗಳಲ್ಲೇ ತೇಲಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಬರ ಉಂಟಾಗಿದೆ. ಇನ್ನೂ ಬರ ಪರಿಹಾರ ನೀಡಿಲ್ಲ. ಒಂದು ಹೆಕ್ಟೇರ್‌ಗೆ ಕನಿಷ್ಠ 40,000 ರೂ. ಪರಿಹಾರ ನೀಡಬೇಕು. ರೈತರು, ಕಾರ್ಮಿಕರು ಗುಳೆ ಹೋಗುವುದನ್ನ ತಪ್ಪಿಸಿ, ಆಯಾ ಗ್ರಾಮಗಳಲ್ಲಿ ಉದ್ಯೋಗ ನೀಡುವ ಕೆಲಸವನ್ನ ಸರ್ಕಾರ ಮಾಡಬೇಕು. ಜಾತಿ ಪ್ರಮಾಣ ಪತ್ರ, ಪಹಣಿ, ಆದಾಯ ದೃಢೀಕರಣ ಪತ್ರ ಪಡೆಯಲು ಶುಲ್ಕವನ್ನ ಹೆಚ್ಚಿಸಲಾಗಿದೆ. ಅದನ್ನು ಕಡಿಮೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ರಾಮಮಂದಿರ ತೆರೆದ ತಕ್ಷಣ ಮತ್ತೆ ಅಧಿಕಾರಕ್ಕೆ ಬರ್ತೀವಿ ಅಂತ ಬಿಜೆಪಿ ಭಾವಿಸಿದೆ. ಆದರೆ, ಅವರು ಜನರನ್ನ ಕಡೆಗಣಿಸಿದ್ರೆ, ಅವರಿಗೆ ರಾಜ್ಯದಲ್ಲಾದ ಪರಿಸ್ಥಿತಿಯೇ ಎದುರಾಗಲಿದೆ” ಅಂತ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.