ರಾಜ್ಯದಲ್ಲಿ ಅಥವಾ ದೇಶದಲ್ಲಿ ಅತಿವೃಷ್ಠಿ, ಅನಾವೃಷ್ಠಿ ಬಂದರೆ ಆಳುವವರಿಗೆ ಹಬ್ಬ ಎಂಬ ಮಾತುಗಳಿದ್ದವು. ಸರ್ಕಾರಗಳು ಪರಿಹಾರದ ಹೆಸರಿನಲ್ಲಿ ಲೂಟಿ ಮಾಡುತ್ತವೆ ಎಂಬ ಆರೋಪಿಗಳಿದ್ದವು. ಆದರೆ, ಈಗ ದೇಶದ ಜನರ ಅನಾರೋಗ್ಯದಲ್ಲೂ ಮೋದಿ ಸರ್ಕಾರ ಲೂಟಿ ಮಾಡುತ್ತಿದೆ. ಕೊರೊನಾ ಸಮಯದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಘೋಷಿಸಿತ್ತು. ಆದರೆ, ಅದರ ಫಲ ಯಾರಿಗೆ ದೊರೆಯಿತು ಎಂದು ರೈತ ಹೋರಾಟಗಾರ ರವಿಕುಮಾರ್ ಪುಣಚ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಮಹಾಧರಣಿಯಲ್ಲಿ ಅವರು ಮಾತನಾಡಿದರು. “ಪ್ರಧಾನಮಂತ್ರಿ ಫಲಸ್ ಭೀಮಾ ಯೋಜನೆಯ ಹೆಸರಿನಲ್ಲಿಯೂ ಲೂಟಿ ನಡೆಯುತ್ತಿದೆ. ದುಡಿಮೆ ಅವಧಿಯನ್ನು 12 ಗಂಟೆಗಳಿಗೆ ವಿಸ್ತರಿಸಿ, ಕಾರ್ಮಿಕರ ಶ್ರಮದ ಲೂಟಿಯೂ ನಡೆಯುತ್ತಿದೆ. ಇದನ್ನ ತಡೆಯಲು ಸಂಘರ್ಷವನ್ನು ಮಾಡಬೇಕಾಗಿದೆ” ಎಂದರು.
“ಭಾರತ ಎಂದು ಹೇಳಿದರೆ ಹೊಸ ವ್ಯಾಖ್ಯಾನ ನೀಡುವ ಪ್ರಯತ್ನ ಮೋದಿ ಸರ್ಕಾರ ಮಾಡುತ್ತಿದೆ. ಅಖಂಡ ಭಾರತ ಎಂದು ಹೇಳುತ್ತಾ, ರಾಜ್ಯಗಳಿಗೆ ಇರುವ ಅಧಿಕಾರವನ್ನು ಕಿತ್ತು ರಾಜ್ಯದ ಸಂಪತ್ತನ್ನು ಕಾರ್ಪೋರೇಟ್ಗಳಿಗೆ ಲೂಟಿ ಮಾಡುವ ಅವಕಾಶ ಮೋದಿ ಸರ್ಕಾರ ನೀಡುತ್ತಿದೆ. ನಾವು ಈ ದೇಶದ ಮಾಲಿಕರು, ಅವರು ನಮ್ಮ ಸೇವಕರಾಗಿದ್ದಾರೆ. ನೀಟ್ ಸೇರಿದಂತೆ ಹಲವಾರು ಕಾನೂನು ತಂದು ಇಲ್ಲಿನ ಯುವಕರಿಗೆ ಉದ್ಯೋಗ ನೀಡುವ ಅವಕಾಶ ಕೂಡಾ ಇಲ್ಲದಂತೆ ಈ ಸರ್ಕಾರ ಮಾಡಿದೆ” ಎಂದರು.