ಮೋದಿ ಸರ್ಕಾರದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಮಹಿಳೆಯರು. ಹತ್ರಾಸ್, ಉನ್ನೋವೋದಲ್ಲಿ ನಡೆದ ಅತ್ಯಾಚಾರ, ಬಿಲ್ಕೀಸ್ ಬಾನೋ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಇಂದಿಗೂ ನ್ಯಾಯ ಸಿಕ್ಕಿಲ್ಲ. ಆರೋಪಿಗಳನ್ನು ರಕ್ಷಿಸಲಾಗುತ್ತಿದೆ. ‘ಮಹಿಳೆಯರು ಇರುವುದೇ ಬೋಗಿಸಲಿಕ್ಕೆ’ ಅಂತ ಮೋದಿ ಸರ್ಕಾರ ಹೇಳಿದೆ. ಮೋದಿ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಮಹಿಳಾ ಸಂಘಟನೆಗಳ ಮುಖಂಡೆ ಮೀನಾಕ್ಷಿ ಬಾಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ದುಡಿಯುವ ಜನರ ಮಹಾಧರಣಿಯಲ್ಲಿ ಅವರು ಮಾತನಾಡಿದರು. “ಕೃಷಿಯಲ್ಲಿ ಮಹಿಳೆಯರ ದುಡಿಮೆ ಹೆಚ್ಚಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯ ಶ್ರಮವಿದೆ. ಕುಟುಂಬದ ನೊಗವನ್ನ ಮಹಿಳೆಯರು ಹೊತ್ತಿದ್ದಾರೆ” ಎಂದರು.
“ಮಹಿಳೆಯರು ನೋವನ್ನು ಅನುಭವಿಸಿಯೂ, ಜಗತ್ತನ್ನು ಸಂಭಾಳಿಸಿಕೊಂಡು ಬಂದಿದ್ದಾರೆ. ಪುರುಷರಿಗಿಂತ ಹೆಚ್ಚು ದುಡಿಯುವವರು ಮಹಿಳೆಯರು. ದುಡಿಯುವ ವರ್ಗದ ವಿಮೋಚನೆಯೊಂದಿಗೆ ಮಹಿಳೆಯರ ವಿಮೋಚನೆಯಾಗುತ್ತದೆ. ಮಹಿಳೆಯನ್ನು ಭೋಗದ ವಸ್ತುವೆಂದು ಮನುಸ್ಮೃತಿ ಹೇಳುತ್ತದೆ. ಮನುಸ್ಮೃತಿಯೇ ಮೋದಿ ಸರ್ಕಾರದ ಜೀವಾಳ” ಎಂದು ತಿಳಿಸಿದರು.
“ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಮನುವಾದ ಹೇಳುತ್ತದೆ. ಹೆಣ್ಣನ್ನು ಗಂಡು ರಕ್ಷಿಸುತ್ತಾನೆ ಎಂದು ಹೇಳುತ್ತದೆ. ಆದರೆ, ಮಹಿಳೆಗೆ ರಕ್ಷಣೆ ಎಲ್ಲಿದೆ. ಎಲ್ಲೆಡೆ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿವೆ. ಮೋದಿ ಸರ್ಕಾರ ಅತ್ಯಾಚಾರಿಗಳನ್ನು ರಕ್ಷಿಸುತ್ತಿದೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬ್ರಿಜ್ ಭೂಷಣ್ ಸಿಂಗ್‌ನನ್ನು ಸರ್ಕಾರ ರಕ್ಷಿಸುತ್ತಿದೆ” ಎಂದು ಕಿಡಿಕಾರಿದರು.
“ಮಹಿಳಾ ಮಿಸಲಾತಿ ಮಸೂದೆಯನ್ನು ಅಂಗೀಕರಿಸಿ, ಮಹಿಳೆಯರ ಮತ ಪಡೆಯಲು ಮೋದಿ ಸರ್ಕಾರ ಹವಣಿಸುತ್ತಿದೆ. ಆದರೆ, ಅವರ ಕಾಯ್ದೆ ಆಟಕ್ಕುಂಟು-ಲೆಕ್ಕಕ್ಕಿಲ್ಲ ಎಂಬಂತಿದೆ. ಕಾಯ್ದೆಯನ್ನು ಜಾರಿಗೆ ತರಲು ಕನಿಷ್ಠ 10 ವರ್ಷ ಸತಾಯಿಸುತ್ತಾರೆ. ಅವರ ಹುನ್ನಾರ ಏನೆಂಬುದು ನನಗೆ ಗೊತ್ತಿಲ್ಲವೆಂದು ಸರ್ಕಾರ ಭಾವಿಸಿದೆ. ಮಹಿಳೆಯರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರ ಆಟ ದೇಶದ ಮಹಿಳೆಯರ ಮುಂದೆ ನಡೆಯುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರಿತುಕೊಳ್ಳಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.