ಸಮಾಜದಲ್ಲಿ ನಾಗರಿಕರಂತೆ ಬಟ್ಟೆ ತೊಟ್ಟು ಒಳ್ಳೆಯವರಂತೆ ವರ್ತಿಸುತ್ತೇವೆ. ಆದರೆ ನಾವು ಯಾರೂ ಬಸವಣ್ಣನವರಂತೆ ಅಂತರಂಗದ ಕದವನ್ನು ತೆರೆದು ನಮ್ಮನ್ನು ನಾವು ಅವಲೋಕಿಸಿಕೊಂಡಿಲ್ಲ. ಅಂತರಂಗದ ಒಳಗಡೆ ರಣರಂಗ, ಹೊರಗಡೆ ಮಾತ್ರ ಸಿಂಗರಿಸಿಕೊಂಡು ಸಭ್ಯತೆಯ ಮುಖವಾಡ ಹಾಕಿ ಕುಳಿತಿದ್ದೇವೆ. ದೇವಸ್ಥಾನಕ್ಕೆ ನೀಡುವ ಕಾಣಿಕೆ- ಹರಕೆಗಳಲ್ಲಿಯೇ ನಮ್ಮ ಭ್ರಷ್ಟ ಮನಸ್ಸು ಇದೆ ಎಂದು ಬಸವವಾದಿ ಚಿಂತಕ ಗೋವಿಂದರಾಜ ಬಾರಿಕೇರ ಮಾರ್ಮಿಕವಾಗಿ ನುಡಿದರು.
ಯಾದಗಿರಿ ಜಿಲ್ಲೆ ಶಹಾಪುರ ನಗರದ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು- 109ರ ಕಾರ್ಯಕ್ರಮದಲ್ಲಿ ಬಸವ ತತ್ವ ಒಂದು ಅಂತರ್ಯಾತ್ರೆ ಎಂಬ ವಿಷಯ ಕುರಿತು ಮಾತನಾಡಿದರು.
“ದೇವರಿಗಿಂತ ಭಿನ್ನವಾದುದು ಸತ್ಯ. ಸತ್ಯದ ಕೂರಲಗನ್ನು ಇಟ್ಟುಕೊಂಡೆ ಶರಣರು ಬದುಕಿದರು. ಶರಣರ ಅಂತರಂಗ ಬಹಿರಂಗ ಬೇರೆ ಬೇರೆಯಾಗಿರಲಿಲ್ಲ. ಎರಡೂ ಕೂಡ ಒಂದೆ ಆಗಿದ್ದವು. ಜ್ಞಾನವೇ ಶ್ರೇಷ್ಠ ಎಂಬ ಬಾಲಿಶವಾದ ಮಾತುಗಳನ್ನು ತಿರಸ್ಕರಿಸಿ ಅಂತರಂಗದ ಧ್ವನಿಗೆ ಶರಣರು ಜೀವ ನೀಡಿದರು. ಸಂಗ್ರಹಗೊಂಡ ಜ್ಞಾನ ಕೆಡುತ್ತದೆ. ಯಾವ ಶ್ಲೋಕಗಳು, ವೇದಗಳು, ಪುರಾಣಗಳು, ಆಗಮಗಳು ಎದೆಯ ದನಿಗೆ ಸಾಟಿಯಿಲ್ಲ. ಸ್ವಯಂ ಬೆಳೆಯುವ ಮರಕ್ಕೆ ಬಸವಣ್ಣನವರು ಅವಕಾಶ ನೀಡಿದರು” ಎಂದರು.
“ಭ್ರಮಿತ ಲೋಕದ ಪಳಿಯುಳಿಕೆಗಳಾದ ಗುಡಿ, ಚರ್ಚು, ಮಸೀದಿ ಇತ್ಯಾದಿಗಳನ್ನು ಕಟ್ಟಿ ಸತ್ಯವನ್ನು ಹೂತು ಹಾಕಿದವರ ನಡುವೆ ಬಸವಣ್ಣ, ʼಎನ್ನ ಕಾಲೆ ಕಂಬ ದೇಹವೇ ದೇಗುಲʼ ಎಂಬ ಹೊಸ ಮಾತುಗಳ ಮೂಲಕ ಜಡತ್ವದ ಸಂಕೇತವಾದ ಪೌರೋಹಿತ್ಯವನ್ನು ಕಿತ್ತು ಬಿಸಾಡಿ ದೇವರ ಲೋಕ- ಮರ್ತ್ಯಲೋಕ, ಪಾತಾಳ ಲೋಕಕ್ಕೂ ಬಸವಣ್ಣನವರು ಮಾರ್ಗವನ್ನು ಕಂಡು ಹಿಡಿದರು. ಲಿಂಗಾಂಗ ಅನುಸಂಧಾನದಲ್ಲಿ ನೀನೇ ಲಿಂಗವಾಗು ಎನ್ನುವ ಮೂಲಕ ಸಂಪ್ರದಾಯದ ಚೌಕಟ್ಟನ್ನು ದಾಟಿದ ಪ್ರಪಂಚದ ಏಕೈಕ ಪುರುಷ ಬಸವಣ್ಣನವರಾಗಿದ್ದರು” ಎಂದು ಮಾರ್ಮಿಕವಾಗಿ ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಂಧನೂರಿನ ವೀರಭದ್ರಗೌಡ ಅಮರಾಪುರ ಮಾತನಾಡಿ, “ಅಂತರಂಗ ಬಹಿರಂಗ ನಮ್ಮಲ್ಲಿ ಎಂದಿಗೂ ಭಿನ್ನ ಭಿನ್ನವಾಗಿವೆ. ಮಂಡೆ ಬೋಳಾಗಿದೆ. ಮನ ಬೋಳಾಗಿಲ್ಲ. ಮೇಲ್ನೋಟಕ್ಕೆ ತೋರಿಸಿಕೊಳ್ಳುವುದು ಒಂದಾದರೆ ಅಂತರಂಗದಲ್ಲಿ ಇರುವುದೇ ಬೇರೆ. ಬಸವಣ್ಣ ಅಂತರಂಗ ಹಾಗೂ ಬಹಿರಂಗ ಶುದ್ಧಿಯನ್ನು ಇಟ್ಟುಕೊಂಡಿದ್ದರಿಂದಲೆ ಅವರ ವಚನ ಚಳವಳಿ ಇಲ್ಲಿಯವರೆಗೂ ಜೀವಂತವಾಗಿ ಉಳಿಯಲು ಸಾಧ್ಯವಾಯಿತು” ಎಂದು ನುಡಿದರು.
ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, “ವೈದಿಕತ್ವದ ದಾಳಿಗೆ ಭಾರತೀಯ ಮನಸ್ಸುಗಳು ತತ್ತರಗೊಂಡಿವೆ. ವಚನ ಸಾಹಿತ್ಯ ಹಾಗೂ ಶರಣರ ಚಿಂತನೆಗಳ ಮೇಲೆ ಸತತ ಹಲ್ಲೆ ನಡೆದಿದೆ. ಪುರೋಹಿತರ ಕಪಿಮುಷ್ಟಿಯಲ್ಲಿ ಸಿಲುಕಿರುವ ಮನಸ್ಸುಗಳಿಗೆ ಸತ್ಯವನ್ನು ಎದುರಿಸುವ ಶಕ್ತಿ ಇಲ್ಲವಾಗಿದೆ. ಆದ್ದರಿಂದಲೇ ಗುಡಿ, ಚರ್ಚು, ಮಸೀದಿಗಳ ಬೆಳವಣಿಗೆ ದಾಖಲೆಯ ಮಟ್ಟ ಮುಟ್ಟುತ್ತಿದೆ. ʼದೇಹವೆ ದೇವಾಲಯ, ಶಿರವೇ ಹೊನ್ನ ಕಳಶʼವೆಂಬ ಬಸವಣ್ಣನವರ ತತ್ವ ಅರಿತಾಗ ಮಾತ್ರ ನಿರ್ಭಯವಾಗಿ ಬಾಳಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?ಮಹಾಧರಣಿ | ಎರಡನೇ ಸ್ವಾತಂತ್ರ್ಯ ಹೋರಾಟ ಕಟ್ಟಬೇಕಿದೆ: ಎಸ್.ಆರ್ ಹಿರೇಮಠ್
ಅತಿಥಿಗಳಾಗಿ ಮಲ್ಲಿನಾಥಗೌಡ ಮಾಲಿ ಪಾಟೀಲ, ಶರಣೆ ಲಕ್ಷ್ಮಿ ಮಲ್ಲಿನಾಥಗೌಡ ಸಭೆಯನ್ನು ಉದ್ಘಾಟಿಸಿದರು. ಶಿವಯೋಗಪ್ಪ ಹವಾಲ್ದಾರ, ಸಿದ್ಧಲಿಂಗಪ್ಪ ಆನೇಗುಂದಿ, ಶರಣು ಬೊಮ್ಮನಳ್ಳಿ, ಶರಣು ಯಡ್ರಾಮಿ, ದೇವಿಂದ್ರಪ್ಪ ಬಡಿಗೇರ, ಸಿದ್ಧರಾಮ ಹೊನ್ಕಲ್, ಗುಂಡಪ್ಪ ತುಂಬಗಿ, ಬಸವರಾಜ ಮುಂಡಾಸ, ಪ್ರಕಾಶ ರಾಜೂರು, ಸಂಗಮ್ಮ ಹರನೂರ, ಭೀಮನಗೌಡ, ಚಂದ್ರು ಮುಡಬೂಳ, ತಿಪ್ಪಣ್ಣ ಜಮಾದಾರ, ಸಿದ್ದು ಕೆರವಟಗಿ, ವಿಶ್ವನಾಥ ಬಂಕಲದೊಡ್ಡಿ, ಕಾಮಣ್ಣ ವಿಭೂತಿಹಳ್ಳಿ, ಬಸವರಾಜ ಹುಣಸಗಿ, ಶರಣಪ್ಪ ಹುಣಸಗಿ, ಪ್ರಕಾಶ ರಾಜೂರು, ಚೇತನ ಮಾಲಿ ಪಾಟೀಲ ಮಳಗ, ಮಂಜಯ್ಯ ಹಿರೇಮಠ ಸತ್ಯಂಪೇಟೆ ಸೇರಿದಂತೆ ಹಲವರು ಇದ್ದರು.