ರಕ್ತದಾನ, ನೇತ್ರದಾನ, ಅಂಗಾಂಗ ದಾನ, ಕೂದಲು, ಪುಸ್ತಕಗಳ ದಾನ ಹೀಗೆ ಹಲವಾರು ದಾನಗಳ ಬಗ್ಗೆ ನೀವು ಕೇಳಿರುತ್ತೀರಿ. ಹಾಗೇಯೇ ಪಾದರಕ್ಷೆ ದಾನದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇಲ್ಲವೆಂದಾದರೆ ಇಲ್ಲಿದೆ ಓದಿ.
‘ನಡಿಗೆ- ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕರಿಂದ ಬಳಸಿದ, ಸುಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ದಾನ ರೂಪದಲ್ಲಿ ಪಡೆದು ಅದನ್ನು ಹೊಸದಾಗಿ ಆರಾಮದಾಯಕ ಚಪ್ಪಲಿಯನ್ನಾಗಿ ಮಾಡಿ, ದೇಶಾದಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆರಹಿತರಿಗೆ ಉಚಿತವಾಗಿ ನೀಡುವ ವಿನೂತನ ಅಭಿಯಾನಕ್ಕೆ ಸಮಾಜ ಸೇವಕ ಅವಿನಾಶ್ ಕಾಮತ್ ಮತ್ತು ಅವರ ತಂಡ ಮುಂದಾಗಿದೆ. ಈ ವಿನೂತನ ಕಾರ್ಯದಲ್ಲಿ ಒಂದಿಡೀ ಸಮುದಾಯವೇ ಭಾಗವಹಿಸುತ್ತಿದೆ. ಈ ಅಭಿಯಾನ ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ.
ನವೆಂಬರ್ 30ರಿಂದ ಡಿಸೆಂಬರ್ 2ರವರೆಗೆ ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಆವರಣದಲ್ಲಿ ಹಳೆಯ ಪಾದರಕ್ಷೆಗಳ ಬೃಹತ್ ಸಂಗ್ರಹ ಅಭಿಯಾನವ ನಡೆಯಲಿದ್ದು, ಅಲ್ಲಿ ಸಾರ್ವಜನಿಕರು ತಾವು ಬಳಸಿದ ಸುಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ದಾನ ರೂಪದಲ್ಲಿ ನೀಡಬಹುದು. ಅದರಲ್ಲಿ ಹೀಲ್ಸ್, ಪಾಯಿಂಟೆಡ್ ಶೂಸ್, 10 ವರ್ಷದವರೆಗಿನ ಮಕ್ಕಳ ಪಾದರಕ್ಷೆಗಳನ್ನು ಸ್ವೀಕರಿಸಲು ಅವಕಾಶವಿರುವುದಿಲ್ಲ. ಉಳಿದಂತೆ ಫಾರ್ಮಲ್ ಶೂಸ್, ಸ್ಪೋರ್ಟ್ಸ್ ಶೂಸ್, ರಬ್ವರ್ ಶೂಸ್ ಇತರೇ ಚಪ್ಪಲಿಗಳನ್ನು ನೀಡಬಹದು. ಸಂಗ್ರಹವಾದ ಅಷ್ಟೂ ಚಪ್ಪಲಿಗಳನ್ನು ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಗ್ರೀನ್ ಸೋಲೋ ಸಂಸ್ಥೆಗೆ ಕಚ್ಚಾ ವಸ್ತುಗಳ ರೂಪದಲ್ಲಿ ನೀಡಿ, ಗ್ರೀನ್ ಸೋಲೋ ಸಂಸ್ಥೆಯವರು ಆ ಪಾದರಕ್ಷೆಗಳಿಂದ ಹೊಸ ಆರಾಮದಾಯಕ ಚಪ್ಪಲಿಗಳನ್ನು ತಯಾರಿಸಿ ದೇಶದಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆರಹಿತರಿಗೆ ಉಚಿತವಾಗಿ ನೀಡುತ್ತಾರೆ. ಪರಿಸರಕ್ಕೆ ಪೂರಕವಾಗಿರುವ ಈ ಚಟುವಟಿಕೆಯನ್ನು ಗ್ರೀನ್ ಸೋಲೋ ಸಂಸ್ಥೆ 2017 ರಿಂದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ. ಈವರೆಗೆ ಗ್ರೀನ್ ಸೋಲೋ ಸಂಸ್ಥೆ 6 ಲಕ್ಷಕ್ಕೂ ಅಧಿಕ ಪಾದರಕ್ಷೆಗಳನ್ನು ನೀಡಿದೆ.
ಮೂರು ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ಡಿಸೆಂಬರ್ 3 ರಂದು ಜರುಗುವ ಸಮಾರೋಪ ಸಮಾರಂಭದಲ್ಲಿ ಗ್ರೀನ್ ಸೋಲೋ ಸಂಸ್ಥಾಪಕ ರಮೇಶ್ ಛಾಮಿ ಮತ್ತು ಕ್ರಿಯಾನ್ಸ್ ಭಂಡಾರಿ ಭಾಗವಹಿಸಲಿದ್ದಾರೆ. ಅಂದು ಸಾರ್ವಜನಿಕರು ಮತ್ತು ಮಾಧ್ಯಮದ ಸಮ್ಮುಖದಲ್ಲಿ ಉಡುಪಿ ಭಾಗದ ಆಯ್ದ 75 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗ್ರೀನ್ ಸೋಲೋ ಸಂಸ್ಥೆ ಹಳೆಯ ಬಟ್ಟೆಗಳಿಂದ ತಯಾರಿಸಿರುವ ಬ್ಯಾಗ್, ಕುಳಿತುಕೊಳ್ಳಲು ಬಳಸುವ ಮ್ಯಾಟ್ ಮತ್ತು ಹಳೆಯ ಪಾದರಕ್ಷೆಗಳಿಂದ ಹೊಸದಾಗಿ ತಯಾರಿಸಿದ ಪಾದರಕ್ಷೆಗಳನ್ನು ವಿತರಿಸುತ್ತದೆ. ಕಾರ್ಯಕ್ರಮ ಮುಗಿದ ಒಂದು ತಿಂಗಳ ಅವಧಿಯೊಳಗೆ ಉಡುಪಿ ಭಾಗದ ಇನ್ನಷ್ಟು ಅಶಕ್ತ ವಿದ್ಯಾರ್ಥಿಗಳಿಗೆ ಬ್ಯಾಗ್, ಮ್ಯಾಟ್ ಮತ್ತು ಪಾದರಕ್ಷೆಗಳನ್ನು ವಿತರಿಸುತ್ತೇವೆ. ಈ ಯೋಜನೆಗೆ ಈಗಾಗಲೇ ಹಲವು ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಂದ ಸಹಕಾರ ದೊರೆಯುವ ಭರವಸೆ ಸಿಕ್ಕಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭತ್ತದ ಇಳುವರಿ ಕುಸಿತ; ಎಪಿಎಂಸಿಯಲ್ಲಿ ನೆರೆ ರಾಜ್ಯಗಳ ರೈತರ ಪಾರುಪತ್ಯ
ಅಭಿಯಾನದ ಉಸ್ತುವಾರಿ ವಹಿಸಿಕೊಂಡಿರುವ ಅವಿನಾಶ್ ಕಾಮತ್ ಈ ದಿನ.ಕಾಮ್ ಜೊತೆ ಮಾತನಾಡಿ, “ಕಳೆದ ಮೂರು ತಿಂಗಳಿನಿಂದ ಈ ಅಭಿಯಾನದ ತಯಾರಿ ನಡೆಯುತ್ತಿದ್ದು, ಕರಾವಳಿ ಮಾತ್ರವಲ್ಲ ಈ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಈ ರೀತಿಯ ಅಭಿಯಾನ ನಡೆಯುತ್ತಿದೆ. ಪರಿಸರ ಸ್ನೇಹಿ ಮತ್ತು ಸಮಾಜದಲ್ಲಿರುವ ಬಡ ನಿರ್ಗತಿಕ ಸಮುದಾಯಕ್ಕೆ ನಮ್ಮ ಕೈಯಲ್ಲಿ ಆದಷ್ಟು ನೆರವು ನೀಡುವುದೇ ನಮ್ಮ ಉದ್ದೇಶ. ಈಗಾಗಲೇ ಕುಂದಾಪುರ, ತೆಕ್ಕಟ್ಟೆ ಭಾಗದಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳು ಸಾವಿರಾರು ಚಪ್ಪಲಿಗಳನ್ನು ಸಂಗ್ರಹಿಸಿ ನಮ್ಮ ಅಭಿಯಾನದ ಜೊತೆ ಕೈ ಜೋಡಿಸಿವೆ. ಕಟಪಾಡಿಯ ತ್ರಿಶಾ ಕಾಲೇಜಿನ ವಿದ್ಯಾರ್ಥಿಗಳು ಮನೆ ಮನೆಗೆ ಹೋಗಿ ಹಳೆಯ ಚಪ್ಪಲಿ, ಶೂಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ವಿನೂತನ ಅಭಿಯಾನದಲ್ಲಿ ಎಲ್ಲರೂ ಸಹಕರಿಸುತ್ತಾರೆಂಬ ಭರವಸೆ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
