- ಸಿಬಿಐ ಪ್ರಕರಣ- ಯಾರ ನಾಲಿಗೆಯಲ್ಲಿ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ
- ಬಿಜೆಪಿಯೊಳಗಿನ ಎಲ್ಲರ ಮನಸ್ಥಿತಿಯನ್ನು ನಾವು ಅರಿಯುತ್ತಿದ್ದೇವೆ: ಡಿಕೆಶಿ
ನನ್ನ ವಿರುದ್ಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ನಂತರ ಅನೇಕರು ಮಾತನಾಡುತ್ತಿದ್ದಾರೆ. ಯಾರ್‍ಯಾರ ಮನಸ್ಸು ಮತ್ತು ನಾಲಿಗೆ ಮೇಲೆ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಮಾಧ್ಯಮಗಳು ಸಿಬಿಐ ತನಿಖೆಗೆ ನೀಡಿದ್ದ ಆದೇಶ ಹಿಂಪಡೆದ ಸರ್ಕಾರದ ನಿರ್ಧಾರದ ಬಗ್ಗೆ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಕುರಿತು ಕೇಳಿದಾಗ ಅವರು ಈ ರೀತಿ ಉತ್ತರಿಸಿದರು.
”ತನಿಖೆಗೆ ಅನುಮತಿ ವಾಪಸ್ ಪಡೆದಿರುವ ಬೆಳವಣಿಗೆಯಿಂದ ಎಲ್ಲರ ಮನಸ್ಥಿತಿಯೂ ಅರ್ಥವಾಗುತ್ತಿದೆ. ಯಾರು ಗೆಳೆಯರು, ಅವರ ಭಾವನೆ ಏನಿದೆ ಎಂಬುದು ಈಗ ತಿಳಿಯುತ್ತಿದೆ. ಸಿಬಿಐ ತನಿಖೆಗೆ ಅನುಮತಿ ಹಿಂಪಡೆದಿರುವ ಬಗ್ಗೆ ಈಗ ಮಾತನಾಡಲು ಹೋಗುವುದಿಲ್ಲ. ಮುಂದೆ ಅದರ ಬಗ್ಗೆ ಖಂಡಿತವಾಗಿಯೂ ಮಾತನಾಡುತ್ತೇನೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ” ಎಂದರು.
ಬೋಗಸ್ ಜನತಾ ದರ್ಶನ, ಸರ್ಕಾರ ಈಗ ಎಚ್ಚರವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ ”ಹೊಸದಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಲ್ಲಿ ಜೋಶ್ ಇದೆ. ಹೊಸದರಲ್ಲಿ ಜೋರಾಗಿ ಬಟ್ಟೆ ಒಗೆಯಲಿ. ನಾವು ಎಲ್ಲರ ಮನಸ್ಥಿತಿ ಅರಿಯುತ್ತಿದ್ದೇವೆ” ಎಂದು ಛೇಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿಯುತ್ತಿರುವ ಬಿಜೆಪಿಯಲ್ಲಿ ಗಳ ಇರಿಯುತ್ತಿರುವ ನಾಯಕರು
ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಪ್ಲಾನ್ ಮಾಡುತ್ತಿದ್ದಾರೆ ಎಂಬ ಆರ್. ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, ”ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಮಾತನಾಡಲು ಆಗುವುದಿಲ್ಲ. ಅವರು ಅವರದೇ ಪಕ್ಷದ ವಕ್ತಾರರಾಗಿ ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ” ಎಂದು ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆ ನಂತರ ಸರ್ಕಾರ ಬೀಳುತ್ತದೆ ಎನ್ನುವ ಆರ್.ಅಶೋಕ ಅವರ ಆರೋಪದ ಬಗ್ಗೆ ಕೇಳಿದಾಗ ”ಇನ್ನು ಸಮಯವಿದೆಯಲ್ಲ, ಮಾತನಾಡಲಿ ಬಿಡಿ” ಎಂದರು
ತೆಲಂಗಾಣದಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ಕೇಳಿದಾಗ ”ಕರ್ನಾಟಕದಂತೆ ನಿಖರವಾಗಿ ಇಲ್ಲಿ ಹೇಳಲು ಬರುವುದಿಲ್ಲ. ನಾನು ಕರ್ನಾಟಕದ ಪ್ರತಿಯೊಂದು ಕ್ಷೇತ್ರದ ಚಿತ್ರಣವನ್ನು ಅವಲೋಕಿಸಿದ್ದೆ. ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವುದು ನಿಶ್ಚಿತ. ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ರಚನೆ ಆಗಲಿದ್ದು, ಸಚಿವ ಸಂಪುಟದ ಮೊದಲ ಸಭೆಯಲ್ಲಿ ಡಿ.9 ರಂದು ಎಲ್ಲಾ 6 ಗ್ಯಾರಂಟಿಗಳನ್ನು ಜಾರಿಗೆ ತರಲು ಅನುಮೋದನೆ ನೀಡುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
”ಕರ್ನಾಟಕ ಮಾದರಿಯಂತೆ ತೆಲಂಗಾಣದಲ್ಲಿ 6 ಗ್ಯಾರಂಟಿಗಳನ್ನು ನೀಡಲಾಗಿದೆ. ದಲಿತ ಸಿಎಂ ಸೇರಿದಂತೆ ಕೆಸಿಆರ್ ಅವರ ನೇತೃತ್ವದ ಸರ್ಕಾರ 10 ವರ್ಷಗಳಲ್ಲಿ ತಾನು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ತೆಲಂಗಾಣ ರಾಜ್ಯ ರಚನೆಗೆ ಸೋನಿಯಾ ಗಾಂಧಿ ಅವರೇ ಕಾರಣ. ತೆಲಂಗಾಣದ ಜನರಿಗೆ ಸೋನಿಯಾಗಾಂಧಿ ಅವರ ಋಣ ತೀರಿಸಬೇಕು ಎನ್ನುವ ಭಾವನೆ ಬಂದಿದೆ” ಎಂದರು.
ಶಾಸಕ ಬಾಲಕೃಷ್ಣರವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕೇಳಿದಾಗ ”ಆ ಬಗ್ಗೆ ವಿಚಾರಿಸಿಕೊಂಡು ಮಾತನಾಡುತ್ತೇನೆ” ಎಂದರು. ದೆಹಲಿ ಭೇಟಿ ವಿಚಾರವಾಗಿ ಕೇಳಿದಾಗ, ”ನನ್ನ ವಕೀಲರಾಗಿದ್ದ ಸಿದ್ದಾರ್ಥ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದು, ಅದನ್ನು ಮುಗಿಸಿ ಕರ್ನಾಟಕಕ್ಕೆ ಮರಳುತ್ತೇನೆ” ಎಂದು ತಿಳಿಸಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.