ಈ ದಿನ ಸಂಪಾದಕೀಯ | ಉರಿಯುತ್ತಿರುವ ಬಿಜೆಪಿಯಲ್ಲಿ ಗಳ ಇರಿಯುತ್ತಿರುವ ನಾಯಕರು

Date:

ಬಿಜೆಪಿಯೊಳಗೇ ಸಂಘ ಪರಿವಾರ, ಹಿರಿಯರು, ಅಸಮಾಧಾನಿತರು, ನೊಂದವರು, ಕಡೆಗಣಿಸಲ್ಪಟ್ಟವರು ಕೊತ ಕೊತ ಕುದಿಯುತ್ತಿದ್ದಾರೆ. ಒಂದು ರೀತಿಯಲ್ಲಿ ಬಿಜೆಪಿ ಬೇಯುತ್ತಿರುವ ಮನೆಯಂತೆ ಕಾಣಿಸುತ್ತಿದೆ. ನಾಯಕರು ಗಳ ಇರಿಯಲು ಮುಂದಾಗಿರುವ ಮಂದಿಯಂತೆ ಗೋಚರಿಸುತ್ತಿದ್ದಾರೆ. ಇಂತಹ ಬಿಜೆಪಿಯಿಂದ ರಾಜ್ಯವಾಗಲಿ, ದೇಶವಾಗಲಿ ಉದ್ಧಾರವಾಗುವುದು ಸಾಧ್ಯವೇ?

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ವಿ. ಸೋಮಣ್ಣ, ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ, ಶ್ರೀಗಳನ್ನು ಭೇಟಿ ಮಾಡಿ, ‘ಕೇಂದ್ರ ಸಚಿವ ಅಮಿತ್‌ ಶಾ ಬಂದು ಮನೆಯಲ್ಲಿ ಕೂತುಕೊಂಡು ಜೀವ ತೆಗೆದರು. ಪ್ರಧಾನಿ ಮೋದಿಯವರು ದಿಲ್ಲಿಗೆ ಕರೆಸಿಕೊಂಡು ನಾಲ್ಕು ದಿನ ಇರಿಸಿಕೊಂಡು ನೀವು ಚುನಾವಣೆಗೆ ನಿಂತುಕೊ ಅಂದರು. ಅನಿವಾರ್ಯವಾಗಿ ಎರಡು ಕಡೆ ಸ್ಪರ್ಧೆಗೆ ಒಪ್ಪಿಕೊಳ್ಳಬೇಕಾಯಿತು. ಸ್ವಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸಿದ್ದು ಮಹಾಪರಾಧವಾಗಿದೆ’ ಎಂದು ಅವರ ಕಾಲಬುಡದಲ್ಲಿ ಕೂತು ಒಡಲಾಳದ ನೋವನ್ನು ನಿವೇದಿಸಿಕೊಂಡಿದ್ದರು, ಕಣ್ಣೀರು ಹಾಕಿದ್ದರು, ಕರುಣೆ ಗಿಟ್ಟಿಸಿದ್ದರು.

ಮಠದಿಂದ ಹೊರಗೆ ಬಂದವರು, ‘ಡಿ. 6ರ ನಂತರ ದೆಹಲಿಗೆ ತೆರಳುತ್ತೇನೆ. ಅತೃಪ್ತ ನಾಯಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌, ಅರವಿಂದ ಲಿಂಬಾವಳಿ, ರಮೇಶ್‌ ಜಾರಕಿಹೊಳಿ ಅವರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಹೈಕಮಾಂಡ್‌ ಭೇಟಿ ಮಾಡುತ್ತೇನೆ, ನ್ಯಾಯ ಕೇಳುತ್ತೇನೆ, ಮುಂದಿನ ದಾರಿ ಬಗ್ಗೆ ಹೇಳುತ್ತೇನೆ’ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣನವರನ್ನು ಬಲಿ ಹಾಕಬೇಕೆಂದು ಬಯಸಿದ ರಾಜ್ಯ ಬಿಜೆಪಿ ನಾಯಕರು ಮತ್ತು ಬಿಜೆಪಿ ಹೈಕಮಾಂಡ್‌, ವ್ಯವಸ್ಥಿತವಾಗಿ ಅವರನ್ನು ಖೆಡ್ಡಾಕ್ಕೆ ಕೆಡವಿದ್ದರು. ಮಗ ಡಾ. ಅರುಣ್‌ ಸೋಮಣ್ಣರಿಗೆ ಟಿಕೆಟ್‌ ಕೇಳಿದರೂ ಕೊಡದೆ, ಸ್ವಕ್ಷೇತ್ರ ಕೈ ತಪ್ಪುವಂತೆ ಮಾಡಿದ್ದೂ ಅಲ್ಲದೆ, ಎರಡು ಹೊಸ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಂದಿಗ್ಧಕ್ಕೂ ಸಿಲುಕಿಸಿ, ಸೋಲುವಂತೆ ನೋಡಿಕೊಂಡಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜ್ಯ ಬಿಜೆಪಿ ನಾಯಕರು ಮತ್ತು ಬಿಜೆಪಿ ಹೈಕಮಾಂಡ್‌, ಸೋಮಣ್ಣನವರ ಮೇಲೆ ಹೀಗೆ ಹಗೆ ಸಾಧಿಸಿ, ಸೋಲುವಂತೆ ಮಾಡಿದ್ದು ಏಕೆ? ಬಿಜೆಪಿಯವರು ಬಿಜೆಪಿಯವರನ್ನೇ ಬಲಿ ಹಾಕಿದ್ದು ಏಕೆ?

ಸೋಮಣ್ಣನವರು ತತ್ವ-ಸಿದ್ಧಾಂತಗಳನ್ನು ನಂಬಿ ರಾಜಕಾರಣ ಮಾಡಿದವರಲ್ಲ. ಪಕ್ಷನಿಷ್ಠೆ, ವ್ಯಕ್ತಿನಿಷ್ಠೆಗೂ ಬದ್ಧರಲ್ಲ. 1983ರಿಂದ 2023ರವರೆಗಿನ ನಲವತ್ತು ವರ್ಷಗಳಲ್ಲಿ ಸೋಮಣ್ಣನವರ ರಾಜಕಾರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಸೋಮಣ್ಣ ಜನ ನಂಬಿ ರಾಜಕಾರಣ ಮಾಡಿದವರೇ ಹೊರತು, ಪಕ್ಷ ನಂಬಿದವರಲ್ಲ ಎಂಬುದು ಅರ್ಥವಾಗುತ್ತದೆ.

1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಿನ್ನಿಪೇಟೆ ಸೋಮಣ್ಣ, ಆ ಅವಧಿಯಲ್ಲಿಯೇ ಬಂದೀಖಾನೆ ಸಚಿವರಾಗಿ ದೇವೇಗೌಡರ ನೀಲಿಗಣ್ಣಿನ ಹುಡುಗನಾದರು. ಗೌಡರು ಸೋತು ಸೈಡಿಗೆ ಸರಿಯುತ್ತಿದ್ದಂತೆ, 2004ರಲ್ಲಿ ಕಾಂಗ್ರೆಸ್‌ ಸೇರಿ, ನಗರ ಪ್ರದೇಶದಲ್ಲಿ ಪಕ್ಷಕ್ಕೆ ಬಲ ತುಂಬುವ ಆಟ ಹಾಕಿದರು. ಕಾಂಗ್ರೆಸ್‌ ನಲ್ಲಿ ಕಡೆಗಣಿಸುತ್ತಿದ್ದಂತೆ, 2010ರಲ್ಲಿ ಜಾತಿಯನ್ನು ಮುಂದೆ ಮಾಡಿ ಬಿಜೆಪಿ ಸೇರಿ ಯಡಿಯೂರಪ್ಪನವರ ಆಪ್ತ ಬಳಗದಲ್ಲೊಬ್ಬರಾದರು.

ಯಡಿಯೂರಪ್ಪನವರಿಗೆ ಆ ಕ್ಷಣಕ್ಕೆ ಪ್ರತಿಸ್ಪರ್ಧಿಯಾದ ಅನಂತಕುಮಾರ್‌ ಹಣಿಯಲು ಸೋಮಣ್ಣನವರು ಬೇಕಾಗಿತ್ತು. ಕಾಡಿಬೇಡಿ ಯಡಿಯೂರಪ್ಪನವರ ಕ್ಯಾಬಿನೆಟ್ ನಲ್ಲಿ ಸಚಿವರಾದರು. ಆದರೆ ಮಗ ವಿಜಯೇಂದ್ರ ಕಮಿಷನ್ ಕೇಳಿದಾಗ ಕೆರಳಿ, ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದರು. ಕುರ್ಚಿಗೆ ಕಂಟಕ ತಂದರು. ಆನಂತರ ಸಿಎಂ ಆದ ಬೊಮ್ಮಾಯಿಯವರಿಗೂ ಜಾತಿ ಕಾರ್ಡ್ ಬಳಸಿ ಆಪ್ತರಾದರು. ಅವರನ್ನೂ ಕೈವಶ ಮಾಡಿಕೊಂಡು, ಬೆಂಗಳೂರು ನಗರ ಉಸ್ತುವಾರಿಗೆ ಅಶೋಕ್‌ ಮತ್ತು ಅಶ್ವತ್ಥನಾರಾಯಣರೊಂದಿಗೆ ಪೈಪೋಟಿಗೆ ಬಿದ್ದರು.

ಅನಂತಕುಮಾರ್‌ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಳ್ಳುವ ಮೂಲಕ ಸಂಘಪರಿವಾರದ ಕೆಂಗಣ್ಣಿಗೆ; ವಿಜಯೇಂದ್ರರ ವಿರುದ್ಧ ಕಿಡಿಕಾರುವ ಮೂಲಕ ಯಡಿಯೂರಪ್ಪನವರ ಕೋಪಕ್ಕೆ; ಬೆಂಗಳೂರು ನಗರದ ಮೇಲೆ ಹಿಡಿತ ಸಾಧಿಸಲು ಹೋಗಿ ಅಶೋಕ್‌ ಮತ್ತು ಅಶ್ವತ್ಥನಾರಾಯಣ ಸಿಟ್ಟಿಗೆ ಕಾರಣರಾದ ಸೋಮಣ್ಣ- ಕಳೆದ ಚುನಾವಣೆಯಲ್ಲಿ ಸ್ವಕ್ಷೇತ್ರ ಕಳೆದುಕೊಳ್ಳುವಂತಾಯಿತು. ಬಿಜೆಪಿಯ ನಾಯಕರೇ ಬಿಜೆಪಿಯ ಸೋಮಣ್ಣರನ್ನು ಸೋಲಿಸಲು ಕಾರಣಗಳು ಕೂಡಿಬಂದಂತಾಯಿತು.

ರಾಜಕಾರಣಿಯಾದವನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋಲನ್ನು ಪಾಠವೆಂದು ಪರಿಗಣಿಸಿ, ಜನರ ವಿಶ್ವಾಸ ಗಳಿಸಲು ಕಾಯಬೇಕು. ಆದರೆ ಸೋಮಣ್ಣ, ಅಧಿಕಾರವಿಲ್ಲದೆ ಅರೆಗಳಿಗೆಯೂ ಇರಲಾರದೆ, ನೀರಿನಿಂದ ಹೊರಬಿದ್ದ ಮೀನನಂತಾಡುತ್ತಿದ್ದಾರೆ.

ಆದರೆ, ಬಿಜೆಪಿಯೊಳಗೇ ಇರುವ ಸೋಮಣ್ಣರ ವಿರೋಧಿಗಳಾದ ಯಡಿಯೂರಪ್ಪನವರ ಮಗ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ, ಆರ್.‌ ಅಶೋಕ್‌ ವಿಪಕ್ಷ ನಾಯಕರಾಗಿ ನೇಮಕಗೊಂಡಿದ್ದಾರೆ. ಪಕ್ಷದಲ್ಲಿ ಆಯಕಟ್ಟಿನ ಸ್ಥಾನ ಅಲಂಕರಿಸಿದ್ದಾರೆ. ಬಿಜೆಪಿಯಲ್ಲಿ ಉಳಿಯಲು ಆಗದೇ, ಹೊರಬರಲು ಆಗದೇ ವಿಚಿತ್ರ ಒದ್ದಾಟದಲ್ಲಿರುವ ಸೋಮಣ್ಣ, ಸ್ವಾರ್ಥ ರಾಜಕಾರಣಕ್ಕಾಗಿ ಜಾತಿಯನ್ನು, ಸ್ವಾಮೀಜಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ತಮ್ಮಂತೆಯೇ ಬೇಲಿ ಮೇಲೆ ಕೂತ ಯತ್ನಾಳ್‌, ಬೆಲ್ಲದ್‌, ಲಿಂಬಾವಳಿ, ಜಾರಕಿಹೊಳಿಯವರನ್ನು ಬಳಸಿಕೊಂಡು ಬಿಜೆಪಿಯನ್ನು ಬ್ಲ್ಯಾಕ್‌ ಮೇಲ್‌ ಮಾಡಲು ನೋಡುತ್ತಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು, ಸಚಿವರಾದ ರಾಜಣ್ಣ ಮತ್ತು ಜಿ. ಪರಮೇಶ್ವರ್‌ ಭೇಟಿ ಮಾಡಿ, ಬಿಜೆಪಿಗೆ ಸಂದೇಶ ರವಾನಿಸಿದ್ದಾರೆ. ಬಿಜೆಪಿಯ ಹಿರಿಯರಾದ ಜಿ.ಎಸ್.‌ ಬಸವರಾಜು ಅವರಿಂದ, ‘ಸೋಮಣ್ಣರಿಗೆ ಟಿಕೆಟ್‌ ಕೊಟ್ಟರೆ, ಅವರ ಪರವಾಗಿ ದುಡಿಯಲು ಸಿದ್ಧ’ ಎಂದು ಹೇಳಿಕೆ ಕೊಡಿಸಿದ್ದಾರೆ.

ಇದು ಭಾರತೀಯ ಜನತಾ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಲಹವಾದರೂ, ಸೋಮಣ್ಣ ಸೃಷ್ಟಿಸುತ್ತಿರುವ ಗೊಂದಲವೆನಿಸಿದರೂ, ರಾಷ್ಟ್ರೀಯ ಪಕ್ಷಕ್ಕೆ ಸಮರ್ಥ ನಾಯಕನಿಲ್ಲ ಎನ್ನುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಪಕ್ಷದೊಳಗಿನ ಗೊಂದಲಗಳನ್ನು ನಿಭಾಯಿಸುವ, ಗೋಜಲುಗಳನ್ನು  ನಿವಾರಿಸುವ ನಾಯಕನಿಲ್ಲದೆ ಸೊರಗುತ್ತಿದೆ. ಇದರ ಜೊತೆಗೆ ಬಿಜೆಪಿಯೊಳಗೇ ಸಂಘ ಪರಿವಾರ, ಹಿರಿಯರು, ಅಸಮಾಧಾನಿತರು, ನೊಂದವರು, ಕಡೆಗಣಿಸಲ್ಪಟ್ಟವರು ಕೊತ ಕೊತ ಕುದಿಯುತ್ತಿರುವುದನ್ನೂ ಕಾಣಬಹುದಾಗಿದೆ. ಒಂದು ರೀತಿಯಲ್ಲಿ ಬಿಜೆಪಿ ಬೇಯುತ್ತಿರುವ ಮನೆಯಂತೆ ಕಾಣಿಸುತ್ತಿದೆ. ನಾಯಕರು ಗಳ ಇರಿಯಲು ಮುಂದಾಗಿರುವ ಮಂದಿಯಂತೆ ಗೋಚರಿಸುತ್ತಿದ್ದಾರೆ. ಇಂತಹ ಬಿಜೆಪಿಯಿಂದ ರಾಜ್ಯವಾಗಲಿ, ದೇಶವಾಗಲಿ ಉದ್ಧಾರವಾಗುವುದು ಸಾಧ್ಯವೇ ಎಂದು ಜನರಿಗೆ ಅನಿಸತೊಡಗಿದರೆ, ಆಶ್ಚರ್ಯವಿಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...