ಗಣೇಶ ಕಟ್ಟೆ ನವೀಕರಣ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಮುನ್ನೆಚ್ಚರಿಕೆಯಾಗಿ ನಿಷೇದಾಜ್ಞೆ ಜಾರಿಗೊಳಿಸಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸ್ಪಿ ಅಡ್ಡೂರು ಶ್ರೀನಿವಾಸಲು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಗಣೇಶ ಪ್ರತಿಷ್ಠಾಪನೆ ಕಟ್ಟೆ ನವೀಕರಣಕ್ಕೆ ಹಿಂದೂ ಯುವಕರು ಮುಂದಾಗಿದ್ದರು. ಆದರೆ, ಗಣೇಶ ಕಟ್ಟೆಗೆ ಹೊಂದಿಕೊಂಡಂತೆ ಮಸೀದಿ ಇರುವ ಜಾಗದ ವಿಚಾರವಾಗಿ ಸಂಘರ್ಷ ಉಂಟಾಗಿದೆ ಎನ್ನಲಾಗಿದೆ. ಎರಡು ಕೋಮಿನ ಜನರಿಂದ ಕಲ್ಲು ತೂರಾಟ ಮತ್ತು ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ಸದ್ಯ ಪರಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಎಸ್ಪಿ ಅಡ್ಡೂರು ಶ್ರೀನಿವಾಸಲು ಪ್ರತಿಕ್ರಿಯಿಸಿ, “ನೆಲೋಗಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಾಗ ಖಾಲಿಮಾಡಿಸುವ ವಿಚಾರವಾಗಿ ವ್ಯಕ್ತಿಯೊಬ್ಬ ವಾಟ್ಸಪ್ ಗ್ರೂಪ್ ನಲ್ಲಿ ಮಾಹಿತಿ ಹಾಕಿದ್ದ. ಅಂಗಡಿ ಖಾಲಿ ಮಾಡಿ ಎಂದು ಬೆದರಿಕೆ ಹಾಕುತ್ತಿರುವುದಾಗಿ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದನು. ಈ ವಿಚಾರವಾಗಿ ಎರಡೂ ಸಮುದಾಯಗಳ ಮಧ್ಯೆ ಸೋಮವಾರ ಗಲಾಟೆ ಶುರುವಾಗಿದೆ” ಎಂದು ಎಸ್ ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.