ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿರುವ ಕಡಲೆ ಬಿತ್ತನೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಬೀಜ ವಿತರಣೆಯಾಗಿದೆ. ಕೃಷಿ ಇಲಾಖೆ 20,000 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯ ಗುರಿ ಹೊಂದಿತ್ತು. ಆದರೆ, 23,500ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಿಸಿದೆ.
ಕೃಷಿ ಇಲಾಖೆ ಅಂದಾಜು ಪ್ರಕಾರ, ಹಿಂಗಾರು ಹಂಗಾಮಿನಲ್ಲಿ 57,000 ಹೆಕ್ಟೇರ್ ಬಿತ್ತನೆ ಗುರಿ ಇದೆ. ಇದರಲ್ಲಿ ಕಡಲೆ ಪ್ರಮುಖ ಬೆಳೆಯಾಗಿದ್ದು, 28,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ 27,000 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದ್ದು, ಡಿಸೆಂಬರ್ ಮೊದಲ ವಾರದವರೆಗೆ ಕಾಲಾವಕಾಶವಿದೆ. ಬಿತ್ತನೆ ಪ್ರದೇಶ ನಿರೀಕ್ಷೆ ಮೀರಿ ಹೆಚ್ಚಾಗುವ ಸಾಧ್ಯತೆ ಇದೆ.
ಹಿರಿಯೂರು ತಾಲ್ಲೂಕಿನ ಐಮಂಗಲ, ಕಸಬಾ, ಚಿತ್ರದುರ್ಗ ತಾಲ್ಲೂಕಿನ ತುರುವನೂರು, ಕಸಬಾ ಹಾಗೂ ಚಳ್ಳಕೆರೆ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಕಡಲೆ ಪ್ರಮುಖ ಬೆಳೆ. ಕಪ್ಪು ಮಣ್ಣು ಹೊಂದಿದ ಜಮೀನು ಕಡಲೆ ಬೆಳೆಗೆ ಸೂಕ್ತ. ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಅಲ್ಲಲ್ಲಿ ಬೆಳೆಯಲಾಗುತ್ತದೆ. ಮುಂಗಾರು ಕೈಕೊಟ್ಟು ಸಂಕಷ್ಟಕ್ಕೆ ಸಿಲುಕಿದ ರೈತರು ಕಡಲೆ ಕೈಹಿಡಿಯುವು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕಡಲೆ ಬಿತ್ತನೆ ಸಾಮಾನ್ಯವಾಗಿ ಅ.15ರಿಂದ ಡಿಸೆಂಬರ್ ಮೊದಲ ವಾರದವರೆಗೆ ನಡೆಯುತ್ತದೆ. ಚಳಿಗಾಲದಲ್ಲಿ ಬೀಳುವ ಇಬ್ಬನಿಗೆ ಕಡಲೆ ಹುಲುಸಾಗಿ ಬೆಳೆಯುತ್ತದೆ. ಮಳೆ ಕೊರತೆ ಉಂಟಾಗಿ ರೈತರು ಕಡಲೆ ಬಿತ್ತನೆಗೂ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ನವೆಂಬರ್ ಮೊದಲ ವಾರ ಬಿದ್ದ ಮಳೆ ರೈತರಲ್ಲಿ ಮಂದಹಾಸ ಮೂಡಿಸಿದೆ.