ಕವನಗಳು ಕನ್ನಡದ ಕಳೆಯನ್ನು ಹೆಚ್ಚಿಸುತ್ತವೆ. ನೊಂದವರ ಪಾಲಿನ ಆಶಾಧ್ವನಿಯಾಗಿ ಇರಬೇಕೆಂದು ನಿಡಗುಂದಿ ತಾಲೂಕು ತಹಶೀಲ್ದಾರ್ ಎ ಬಿ ಅಮರವಾಡಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜವಾಹರ ನವೋದಯ ವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ನಿಡಗುಂದಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವನ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕವನಗಳನ್ನು ರಚನೆ ಮಾಡಿದರೆ ಸತ್ತಂತಿರುವವರನ್ನು ಬಡಿದೆಬ್ಬಿಸುವಂತಿರಬೇಕು. ಓದುವವರ ಮನಸ್ಸನ್ನು ಸೊರೆಗೊಳ್ಳುವಂತೆ ಇರಬೇಕು. ಮುಖ್ಯವಾಗಿ ಸಮಾಜಮುಖಿ ಮೌಲ್ಯವನ್ನು ಎತ್ತಿ ತೋರಿಸುವಂತಿರಬೇಕು” ಎಂದು ಹೇಳಿದರು.
ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ವಿ ಶಾಂತಿ ಮುಖ್ಯ ಅತಿಥಿಯಾಗಿ ಮಾತನಾಡಿ, “ಮಕ್ಕಳು ಮಾತೃಭಾಷೆಯಲ್ಲಿ ಪಾಂಡಿತ್ಯ ಪಡೆಯಬೇಕು. ಮಾತು ವೈರಿಗಳ ಮುಂದೆ ಗತ್ತಿನಂತೀರಬೇಕು. ಹೆದರಿಸುವವರ ಮುಂದೆ ಕತ್ತಿಯಂತಿರಬೇಕು. ಆತ್ಮೀಯರ ಮುಂದೆ ಮುತ್ತಿನಂತಿರಬೇಕು. ಹಿರಿಯರ ಮುಂದೆ ಹತ್ತಿಯಂತಿರಬೇಕು. ಕವನಗಳ ಅರ್ಥ ಎಲ್ಲರಿಗೂ ತಿಳಿಯುವ ಹಾಗಿರಬೇಕು” ಎಂದರು.
ಮುಖ್ಯ ಅತಿಥಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಿದ್ರಾಮಪ್ಪ ನಾಗಠಾಣ ಮಾತನಾಡಿ, “ಕನ್ನಡ ಅನ್ನದ ಭಾಷೆಯಾಗಿದೆ. ಆಡಳಿತ ಭಾಷೆಯಾಗಿದೆ. ಜಾನಪದ ಕವಿಗಳು ವಿದ್ಯಾಭ್ಯಾಸ ಮಾಡದಿದ್ದರೂ ಅನುಭವ ಜ್ಞಾನ ಅಪಾರವಾಗಿತ್ತು” ಎಂದರು.
ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, “ಕವನ ರಚಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ. ಪ್ರತಿಭಾವಂತರು ಸಾಹಿತ್ಯ ಆಸಕ್ತರು ಕವನ ರಚಿಸುವಲ್ಲಿ ಕ್ರೀಯಾಶೀಲತೆ ಹೊಂದಿರುತ್ತಾರೆ. ಹಾಗೂ ಜಾನಪದ, ಸಾಂಸ್ಕೃತಿಕ, ಸಾಹಿತ್ಯಿಕ, ಚಟುವಟಿಕೆಗಳಿಂದ ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆಯನ್ನು ಗುರುತಿಸಿ ಅವರಿಗೂ ಕವನ ಬರೆಯುವ ಹವ್ಯಾಸ ಬೆಳೆಸಲು ಸ್ಪೂರ್ತಿ ನೀಡಿದಂತಾಗುತ್ತದೆ” ಎಂದರು.
ನಿಡಗುಂದಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಗಮೇಶ ಕೆಂಬಾವಿ ಪ್ರಾಸ್ತಾವಿಕವಾಗಿ ಮಾತನಾಡಿ, “ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ, ಹೋಬಳಿ, ಹಾಗೂ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಮಕ್ಕಳಿಗೆ ಉಪಯುಕ್ತವಾಗುವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಹೆಮ್ಮೆಯ ವಿಷಯ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ಲಂ ನಿವಾಸಿಗಳ ನಿವೇಶನ ಅಭಿವೃದ್ಧಿಪಡಿಸಲು ಅಧಿಕಾರಿಗಳ ನಿರ್ಲಕ್ಷ್ಯ; ಜಿಲ್ಲಾಧಿಕಾರಿ ಕಿಡಿ
ಉಪ ಪ್ರಾಂಶುಪಾಲ ಡಿ ಪಿ ತ್ಯಾಡಿ, ರಾಜೇಸಾಬ ಶಿವನಗುತ್ತಿ, ಎಮ್ ಎಸ್ ಮೂಕಾರ್ತಿಹಾಳ, ಆರ್ ಎ ನದಾಫ, ಯಮನೂರಪ್ಪ ಗಂಗಶೆಟ್ಟಿ, ನಬಿರಸೂಲ ಬಾಣಕರ, ನಿಡಗುಂದಿ ಕಸಾಪ ಪದಾಧಿಕಾರಿಗಳಾದ ನಜೀರ ಗುಳೇದ, ಸಲೀಮ ದಡೇದ, ಸಂತೋಷ ಮಾಮನಿ, ಮಮತಾ ಪಟ್ಟಣಶೆಟ್ಟಿ, ಎಂ ಎಂ ಮುಲ್ಲಾ, ಸುರೇಶ ಸಣ್ಣಮನಿ, ರಾಜು ತೊರಗಲಮಠ, ಮಲ್ಲಯ್ಯಾ ಬೂದಿಹಾಳಮಠ, ಎಸ್ ಎಂ ಕಮತಗಿ, ಗಂಗಾಧರ ಕಾಳಗಿ ಸೇರಿದಂತೆ ಇತರರು ಇದ್ದರು.