ರಾಷ್ಟ್ರದ ಸರ್ವೋಚ್ಚ ಕಾನೂನಾಗಿರುವ ನಮ್ಮ ದೇಶದ ಶ್ರೇಷ್ಠ ಸಂವಿಧಾನದಿಂದಾಗಿ ದಮನಿತರ, ಶೋಷಿತರ, ಹಿಂದುಳಿದ ವರ್ಗಗಳ, ಬಡವರು ಸೇರಿದಂತೆ ತಳಸಮುದಾಯಗಳ ಮೇಲೆ ನಾಗರಿಕತೆಯ ಬೆಳಕು ಬೀಳುವಂತಾಯಿತು. ಧ್ವನಿ ಇಲ್ಲದವರ ಧ್ವನಿಯಾಗಿರುವ ನಮ್ಮ ಸಂವಿಧಾನ ತಳಸಮುದಾಯಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ದುದ್ದಿಯಂಡ ಹೆಚ್ ಸೂಫಿ ಹಾಜಿ ಅಭಿಪ್ರಾಯಪಟ್ಟರು.
1949ರ ನವೆಂಬರ್ 26ರಂದು ನಮ್ಮ ದೇಶದ ಶ್ರೇಷ್ಠ ಸಂವಿಧಾನ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುವ ಸಂವಿಧಾನ ದಿನಾಚರಣೆಯ ಅಂಗವಾಗಿ ಕೊಡಗು ಜಿಲ್ಲೆಯ ವಿರಾಜಪೇಟೆಯ ಕೆಎಂಎ ಪ್ರಧಾನ ಕಚೇರಿ ಸಭಾಂಗಣದಲ್ಲಿ ಅಳವಡಿಸಲಾದ ಸಂವಿಧಾನದ ಪೀಠಿಕೆ ಫಲಕ ಅನಾವರಣಗೊಳಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು.
“ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವ್ಯಾಖ್ಯಾನಿಸಿರುವ ನಮ್ಮ ಸಂವಿಧಾನ ಜಾತ್ಯತೀತತೆ ಮತ್ತು ಸಮಾನತೆಯನ್ನು ಪ್ರತಿಪಾದಿಸಿದೆ. ತಮ್ಮ ಶ್ರೇಷ್ಠ ಚಿಂತನೆಯ ಮೂಲಕ ತಳಸಮುದಾಯಗಳ ಉನ್ನತಿಗಾಗಿ ನೂರಾರು ವರ್ಷಗಳ ದೂರದೃಷ್ಟಿತ್ವದ ಸಂವಿಧಾನ ರೂಪಿಸಿದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಇಂದಿಗೂ ಜನಮಾನಸದಲ್ಲಿ ಸ್ಥಾನ ಪಡೆದಿರುವುದು ಈ ಕಾರಣಕ್ಕಾಗಿಯೇ” ಎಂದು ಒತ್ತಿ ಹೇಳಿದರು.
“ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ ಮತ್ತು ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನೂ ನಮ್ಮ ಸಂವಿಧಾನ ನೀಡಿದೆ. ಭಾರತದ ಸಂವಿಧಾನದ 19ನೇ ವಿಧಿಯ ಪ್ರಕಾರ ಭಾರತದ ಪ್ರತಿಯೊಬ್ಬ ನಾಗರಿಕನಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿರುವುದು ಪ್ರಜಾಪ್ರಭುತ್ವದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಸಂವಿಧಾನದ ಆಶಯದಿಂದಲೇ ಕಾನೂನಿನ ಮುಂದೆ ಪ್ರತಿಯೊಬ್ಬರೂ ಸಮಾನರೆಂದು ಪರಿಗಣಿಸಲ್ಪಟ್ಟಿದೆ. ಆದ್ದರಿಂದ ಇಂದು ಯಾರೂ ಕೂಡ ಯಾವುದೇ ಗುಲಾಮಗಿರಿಯ ದಾಸರಾಗುವ ಅಗತ್ಯವಿಲ್ಲ” ಎಂದು ಹೇಳಿದರು.
“ನಮ್ಮ ದೇಶದ ಸಂವಿಧಾನದ ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ. ಪೀಠಿಕೆಯ ಮೊದಲ ಪದವಾದ “ಭಾರತದ ಪ್ರಜೆಗಳಾದ ನಾವು” ಎಂಬುದು ದೇಶದಲ್ಲಿ ಅಧಿಕಾರ ಜನಗಳ ಕೈಯಲ್ಲಿದೆ ಎಂಬ ವಿಚಾರದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು ದೇಶದ ಪ್ರತಿಯೊಬ್ಬ ನಾಗರಿಕ ಸಾಧಿಸಬೇಕಾದ ಬಹು ಮುಖ್ಯವಾದ ರಾಷ್ಟ್ರೀಯ ಧ್ಯೇಯಗಳಾದ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆಯ ಬಗ್ಗೆ ಪ್ರತ್ಯೇಕವಾಗಿ ಬಿಡಿಸಿ ಹೇಳುತ್ತದೆ” ಎಂದು ಸೂಫಿ ಹಾಜಿ ನುಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕನ್ನಡ ನಾಡು-ನುಡಿ ರಕ್ಷಣೆ ಎಲ್ಲರ ಹೊಣೆ : ಡಾ. ಎಸ್.ಎಸ್ ಮೈನಾಳೆ
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಕ್ಕಳತಂಡ ಎಸ್ ಮೊಯ್ದು, ಹಿರಿಯ ನಿರ್ದೇಶಕ ಚಿಮ್ಮಿಚ್ಚಿರ ಕೆ. ಇಬ್ರಾಹಿಂ (ಉಮ್ಮಣಿ), ಪದಾಧಿಕಾರಿಗಳಾದ ಮಂಡೇಂಡ ಎ. ಮೊಯ್ದು, ದುದ್ದಿಯಂಡ ಹೆಚ್. ಮೊಯ್ದು, ಕೋಳುಮಂಡ ರಫೀಕ್, ಆಲೀರ ಹೆಚ್. ಅಬ್ದುಲ್ ಲತೀಪ್, ಮಂದಮಾಡ ಮುನೀರ್ ಮೊದಲಾದವರು ಇದ್ದರು.