ಬ್ಯಾರೇಜಿಗೆ ನೀರು ತುಂಬಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಆಹೋ ರಾತ್ರಿ ಧರಣಿ ನಡೆಸಿದ್ದಾರೆ.
ಧರಣಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ್ ಹಂಚಿನಾಳ, “ಭಾರತ ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ ರೈತರಿಂದಲೇ ಶ್ರಮದಾನದ ಮೂಲಕ ಒಂತಿಗೆ ಸಂಗ್ರಹಣೆ ಮೂಲಕ, ಶ್ರಮ ಬಿಂದುಸಾಗರ ಬ್ಯಾರೇಜನ್ನು ಕಟ್ಟಿ ಸುಮಾರು 35 ವರ್ಷಗಳಿಂದ ಕೃಷ್ಣ ತೀರದ ರೈತ ಸಂಘದ ಮುಂದಾಳತ್ವದಲ್ಲಿ ನಿರ್ವಹಣೆ ಮಾಡಿಕೊಂಡು ಬರುತ್ತಿದೆ” ಎಂದರು.
ಇತ್ತೀಚಿನ ದಿನಗಳಲ್ಲಿ ಒಂತಿಗೆ ಸಂಗ್ರಹಣೆಯನ್ನು ಮಾಡಲು ರೈತ ಸಂಘ ಹಿಂದೇಟು ಹಾಕುತ್ತಿರುವ ಕಾರಣ, ಕೃಷ್ಣ ನದಿ ದಂಡೆಯ ರೈತರು ಅಪಾರವಾದ ನಷ್ಟ ಅನುಭವಿಸುತ್ತಿದ್ದಾರೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಬೇಸಿಗೆಯಲ್ಲಿ ಪರಿತಪಿಸುವಂತಾಗುತ್ತಿದೆ. ಆದ್ದರಿಂದ, ಸರ್ಕಾರವೇ ಆ ಬ್ಯಾರೆಜಿನ ನಿರ್ವಹಣೆಯನ್ನು ವಹಿಸಿಕೊಂಡು, ಪ್ರತಿ ವರ್ಷ ಬ್ಯಾರೇಜಿಗೆ ನೀರು ತುಂಬಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಮೂರು ದಿನಗಳ ಧರಣಿ ಸತ್ಯಾಗ್ರಹ ಮಾಡಿ, ನಾಲ್ಕನೇ ದಿನದಿಂದ ಆಮರಣ ಉಪವಾಸವನ್ನು ಮಾಡುವ ಮೂಲಕ, ಹೋರಾಡುತ್ತಿದ್ದೇವೆ. ಈ ಹೋರಾಟಕ್ಕೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಉತ್ತರ ಕರ್ನಾಟಕ ಹೋರಾಟ ಸಮಿತಿ ಸಂಘಟನೆ ಮತ್ತು ಜೆಡಿಎಸ್ ಮುಖಂಡರು ಬೆಂಬಲವನ್ನು ನೀಡಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯದಿರಲು ನಿರ್ಧರಿಸಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಬಾಗಲಕೋಟ್ ಜಿಲ್ಲಾ ಅಧ್ಯಕ್ಷರಾದ ಧರೆಪ್ಪ ದಾನ ಗೌಡ, ಸಾಗರ್ ಕುಂಬಾರ್, ಜಮಖಂಡಿ ತಾಲೂಕು ಅಧ್ಯಕ್ಷ ಬುಡ್ಡೆ ಸಾಬ್ ದಳವಾಯಿ, ಪ್ರಕಾಶ್ ಬಿರಾದಾರ್ ಇತರರು ಇದ್ದರು.